ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸರ್.ಎಂ.ವಿಶ್ವೇಶ್ವರಯ್ಯ ವೃತ್ತದಲ್ಲಿ ರಾಜ್ಯ ರೈತ ಸಂಘದ ನೂರಾರು ಕಾರ್ಯಕರ್ತರು ರಸ್ತೆ ತಡೆ ನಡೆಸಿ ಮಾನವ ಸರಪಳಿ ರಚಿಸಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.
ಒಂದರಿಂದ ಆರನೇ ನಾಲೆ ಕೊನೇ ಭಾಗದ ರೈತರ ಜಮೀನುಗಳಿಗೆ ನೀರಿಲ್ಲದೇ ಬೆಳೆಗಳು ಒಣಗುತ್ತಿವೆ. ಬೆಳೆಗಳಿಗೆ ನೀರು ಹರಿಸದೇ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ಪರಿಣಾಮ ಸಂಚಾರ ಅಸ್ತವ್ಯಸ್ತವಾಯಿತು.ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯವಿಭಾಗದ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ವಿ.ಸಿ.ನಾಲೆ ಮತ್ತು ಲೋಕಸರ ನಾಲೆ ಆಧುನೀಕರಣ ಕಾಮಗಾರಿ ನೆಪದಲ್ಲಿ ಕೊನೆಭಾಗದ ರೈತರಿಗೆ ನೀರನ್ನು ನೀಡದೆ ವಂಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾ ಖಜಾಂಚಿ ಕೆ.ಶೆಟ್ಟಹಳ್ಳಿ ರವಿಕುಮಾರ್ ಮಾತನಾಡಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೊನೆ ಭಾಗಕ್ಕೆ ನೀರು ನೀಡದೆ ಕೃತಕ ಬರಗಾಲ ಸೃಷ್ಟಿಸಿದ್ದಾರೆ. ಕಾಮಗಾರಿ ಹೆಸರಿನಲ್ಲಿ ರೈತರಿಗೆ ನೀರು ನೀಡದೆ ಅನ್ಯಾಯವೇ ಎಗುತ್ತಿದ್ದಾರೆ ಕಿಡಿಕಾರಿದರು.
ಪ್ರತಿಭಟನಾ ವೇಳೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆನಂದ್ ನೀರಾವರಿ ಇಲಾಖೆ ಅಭಿಯಂತರಿಗೆ ದೂರವಾಣಿ ಕರೆ ಮೂಲಕ ಮಾತನಾಡಿ, ನೀರು ಹರಿಸಲು ಸಮ್ಮತಿಸಿದ ನಂತರ ಪ್ರತಿಭಟನೆ ಕೈ ಬಿಟ್ಟರು.