ಕನ್ನಡಪ್ರಭ ವಾರ್ತೆ ಮಂಡ್ಯ
ಕ್ಯೂಬಾ, ಈಜಿಪ್ಟ್, ಇಥಿಯೋಪಿಯಾ, ಘಾನಾ, ಫಿಲಿಫೈನ್ಸ್, ತಾಂಜೇನಿಯಾ, ಥೈಲ್ಯಾಂಡ್ ಮತ್ತು ಉಗಾಂಡಾ ಸೇರಿದಂತೆ ಒಂಬತ್ತು ದೇಶಗಳ ೩೦ ಮಂದಿ ಪ್ರಶಿಕ್ಷಣಾರ್ಥಿಗಳು ಬೆಳೆ ಬೆಳೆಯುವ ಬಗ್ಗೆ ಮಾಹಿತಿ ಪಡೆದುಕೊಂಡರು.
ಮದ್ದೂರು ಕೇಂದ್ರ ರೇಷ್ಮೆ ಮಂಡಳಿ ಸಂಶೋಧನಾ ವಿಸ್ತರಣಾ ಕೇಂದ್ರದ ಉಪ ಘಟಕದ ವಿಜ್ಞಾನಿ ಡಾ. ಶಿವಕುಮಾರ್ ಅವರು ಭಾರತೀಯ ತಾಂತ್ರಿಕ ಆರ್ಥಿಕ ಸಹಕಾರ (ಐಟಿಇಸಿ) ರೇಷ್ಮೆ ಕೃಷಿ ಮತ್ತು ರೇಷ್ಮೆ ಉದ್ಯಮದ ತರಬೇತಿ ಕಾರ್ಯಕ್ರಮದಡಿ ಮೈಸೂರಿನ ಕೇಂದ್ರ ರೇಷ್ಮೆ ಕೃಷಿ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ವಿದೇಶಿ ಪ್ರಶಿಕ್ಷಣಾರ್ಥಿಗಳನ್ನು ಮದ್ದೂರು ಮೆಗಾ ಕ್ಲಸ್ಟರ್‌ಗೆ ಸ್ವಾಗತಿಸಿ ಮತ್ತು ಪ್ರಗತಿಪರ ರೈತರ ಕ್ಷೇತ್ರಕ್ಕೆ ಭೇಟಿ ನೀಡುವ ಅಧ್ಯಯನ ಪ್ರವಾಸದಲ್ಲಿ ಭಾಗಿಯಾಗಿ ಮದ್ದೂರಿನ ಸಂಶೋಧನಾ ವಿಸ್ತರಣಾ ಕೇಂದ್ರದ ವಿಸ್ತರಣಾ ಚಟುವಟಿಕೆಗಳ ಬಗ್ಗೆ ವಿದೇಶಿಗರಿಗೆ ವಿವರಿಸಿದರು.ಮದ್ದೂರು ಮೆಗಾ ಕ್ಲಸ್ಟರ್‌ನಡಿ ವಾಣಿಜ್ಯ ರೇಷ್ಮೆ ಹುಳು ಸಾಕಣೆ, ಹಿಪ್ಪುನೇರಳೆ ಕೃಷಿ, ಸಾವಯವ ಮತ್ತು ಸಮಗ್ರ ಕೃಷಿ ವ್ಯವಸ್ಥೆಯ ಕ್ಷೇತ್ರಗಳ ವಿವಿಧ ಚಟುವಟಿಕೆಗಳ ಪ್ರಾಯೋಗಿಕ ಅನುಭವವನ್ನು, ಮದ್ದೂರು ಮತ್ತು ಮಳವಳ್ಳಿ ಭಾಗದ ಪ್ರಗತಿಪರ ರೈತರು ಮಾಡುತ್ತಿರುವ ರೇಷ್ಮೆ ಹುಳು ಸಾಕಣೆ ಮತ್ತು ಹಿಪ್ಪುನೇರಳೆ ತೋಟದ ಚಟುವಟಿಕೆಗಳ ನಿರ್ವಹಣೆಯನ್ನು ವೀಕ್ಷಿಸಿದ ವಿದೇಶಿ ತರಬೇತಿದಾರರು ರೈತರನ್ನು ಪ್ರಶಂಸಿಸಿದರು.
ಮೈಸೂರಿನಲ್ಲಿರುವ ರೇಷ್ಮೆ ಕೃಷಿ ಸಂಶೋಧನಾ ಸಂಸ್ಥೆ ರೇಷ್ಮೆ ಕೃಷಿಯನ್ನು ಅಭಿವೃದ್ಧಿಪಡಿಸುವ ಆರಂಭಿಕ ಹಂತಗಳಲ್ಲಿ ದೇಶಗಳನ್ನು ಬೆಂಬಲಿಸುವ ತರಬೇತಿ ಕೇಂದ್ರವಾಗಿದೆ. ದಶಕಗಳಿಂದ ದೇಶ ಮತ್ತು ವಿದೇಶಗಳ ರೇಷ್ಮೆ ಕೃಷಿ ರೈತರಿಗೆ ನಿಜವಾಗಿಯೂ ಸಹಾಯ ಮಾಡುವ ಹಲವಾರು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
ರೇಷ್ಮೆ ಕೃಷಿಯ ಪ್ರಗತಿಪರ ರೈತರಾದ ಪುಟ್ಟಲಿಂಗಯ್ಯ, ಅನೀಶ್ ಹೊಸಕೆರೆ, ಶಿವರಾಮೇಗೌಡ, ಶರತ್, ನಂಜುಂಡ, ಶಿವಕುಮಾರ್, ನಾಗಣ್ಣ ಮತ್ತು ಪ್ರಕಾಶ್ ಉಪಸ್ಥಿತರಿದ್ದರು.
ಮದ್ದೂರು-ಮಳವಳ್ಳಿ ಭಾಗದ ಪ್ರಗತಿಪರ ರೇಷ್ಮೆ ಕೃಷಿಕರ ಕ್ಷೇತ್ರಗಳಿಗೆ 30 ವಿದೇಶಿ ಪ್ರಶಿಕ್ಷಣಾರ್ಥಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.