ಸಣ್ಣ ಈರುಳ್ಳಿ ಕೊಳೆಯುತ್ತೆಂದು ಶಾಮಿಯಾನ ಹಾಕಿದ ರೈತರು !

KannadaprabhaNewsNetwork |  
Published : Jul 14, 2024, 01:33 AM IST
-೧೩ಜಿಪಿಟಿ೫ಶಿವಪುರ ಮಹದೇವಪ್ಪ | Kannada Prabha

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಕಲೀಗೌಡನಹಳ್ಳಿ ಗ್ರಾಮದ ರೈತನೋರ್ವ ಸಣ್ಣೀರುಳ್ಳಿಗೆ ಬೆಲೆ ಕುಸಿತಗೊಂಡ ಹಿನ್ನೆಲೆ ಜಮೀನಿನಲ್ಲಿ ಅಸಾಹಯಕನಾಗಿ ಕುಳಿತಿದ್ದಾರೆ.

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಸಣ್ಣ ಈರುಳ್ಳಿಗೆ ಕೃತಕವಾಗಿ ಬೆಲೆ ಕುಸಿತದ ಜೊತೆಗೆ ತುಂತುರು ಮಳೆಗೆ ಕೊಳೆಯುವ ಆತಂಕ ಎದುರಾದ ಹಿನ್ನೆಲೆ ಮಳೆಯಿಂದ ಈರುಳ್ಳಿ ರಕ್ಷಿಸಲು ರೈತರು ಶಾಮಿಯಾನ ಹಾಕಿಕೊಂಡು ಈರುಳ್ಳಿ ಬಿಡಿಸುತ್ತಿದ್ದಾರೆ.

ಕಳೆದ ಐದು ದಿನಗಳಿಂದ ತುಂತುರು ಮಳೆ ಆಗಾಗ್ಗೆ ಸಿಂಪಡಿಸುತ್ತ ಇರುವ ಕಾರಣ ಈರುಳ್ಳಿ ಕೀಳಲು ರೈತರು ಶುರು ಮಾಡಿದ್ದು, ಮಳೆಗೆ ಸಣ್ಣೀರುಳ್ಳಿ ಕೊಳೆಯುತ್ತದೆ ಏನಪ್ಪಾ ಮಾಡೋದು ಎಂದು ತಲೆ ಮೇಲೆ ಕೈ ಹಾಕಿ ಕುಳಿತು ಕೊಳ್ಳುವ ರೈತರಲ್ಲಿ ಕೆಲವರು ಸಣ್ಣೀರುಳ್ಳಿ ಬೆಳೆದ ಜಮೀನಿನ ಬಳಿ ಶಾಮಿಯಾನ ಹಾಕಿಸಿದ್ದಾರೆ.

ಸಣ್ಣೀರುಳ್ಳಿ ಕಿತ್ತು ಶಾಮಿಯಾನದಡಿ ಹಾಕಿಕೊಂಡು ಹತ್ತಾರು ಕೃಷಿ ಕಾರ್ಮಿಕರು ಶೀತ ಗಾಳಿಯ ನಡುವೆ ಸಣ್ಣೀರುಳ್ಳಿ ಬಿಡಿಸಲು ಶುರು ಮಾಡಿದ್ದಾರೆ. ಶಾಮಿಯಾನ ಹಾಕಿಸಿ, ಈರುಳ್ಳಿ ಬಿಡಿಸೋದನ್ನು ಕಂಡು ದಾರಿಹೋಕರು ಏನ್‌ ಕಾಲ ಬಂತಪ್ಪ ಎನ್ನುತ್ತಿದ್ದರು.

ದರ ಕುಸಿತ!: ಕಳೆದೆರಡು ವಾರದ ಹಿಂದೆ ಸಣ್ಣೀರುಳ್ಳಿಗೆ ೪ ರಿಂದ ೪.೫೦೦ ಸಾವಿರ ತನಕ ಧಾರಣೆ ಇತ್ತು. ಇದೀಗ ಗುಣ ಮಟ್ಟದ ಸಣ್ಣೀರುಳ್ಳಿ ೨ ರಿಂದ ೨೫೦೦ ಸಾವಿರ. ಸಣ್ಣೀರುಳ್ಳಿ ಬೆಳೆದ ಅನೇಕ ರೈತರ ಕಣ್ಣಲ್ಲಿ ನೀರು ಬರುವಂತಾಗಿದೆ. ಬಿತ್ತನೆ ಸಣ್ಣೀರುಳ್ಳಿಗೆ ಕ್ವಿಂಟಾಲ್‌ಗೆ ೫ ರಿಂದ ೬ ಸಾವಿರ ತೆತ್ತು ಖರೀದಿಸಿ ಬಿತ್ತನೆ ಮಾಡಿದ್ದಾರೆ. ಆ ಬಿತ್ತನೆ ಸಣ್ಣೀರುಳ್ಳಿ ಗುಣ ಮಟ್ಟದ್ದಾ ಎಂದು ಪರಿಶೀಲನೆಯೂ ನಡೆಸದೆ ತರಾ ತುರಿಯಲ್ಲಿ ಬೆಳೆದ ರೈತ ಈಗ ಬೆಲೆ ಇಳಿದ ಕಾರಣ ಕೈ ಸುಟ್ಟು ಕೊಂಡಿದ್ದಾರೆ. ತಾಲೂಕಿನಲ್ಲಿ ಅತಿ ಹೆಚ್ಚಾಗಿ ಸಣ್ಣೀರುಳ್ಳಿ ಬೆಳೆದಿರುವುದನ್ನು ಮನಗಂಡ ಸಣ್ಣೀರುಳ್ಳಿ ದಲ್ಲಾಳಿಗಳು ಒಂದಾಗಿ, ಸಣ್ಣೀರುಳ್ಳಿ ಬೆಲೆ ಇಳಿಸಿದ್ದಾರೆಂಬ ಆರೋಪ ರೈತರ ವಲಯದಲ್ಲಿ ಕೇಳಿ ಬಂದಿದೆ.

ಮತ್ತಷ್ಟು ಕುಸಿತ: ಸಣ್ಣೀರುಳ್ಳಿಗೆ ಬೆಲೆ ಕುಸಿತಗೊಂಡ ಆತಂಕದಲ್ಲೇ ರೈತರು ಇರುವ ಸಮಯದಲ್ಲಿ ಇದೀಗ ತುಂತುರು ಮಳೆಯ ನೆಪವನ್ನು ದಲ್ಲಾಳಿಗಳು ಹೇಳಿ ಮತ್ತಷ್ಟು ದರ ಇಳಿಸಲು ಹೊರಟಿದ್ದಾರೆ ಎಂಬ ಆರೋಪವೂ ಇದೆ. ಪ್ರತಿ ಸಲ ಕೂಡ ಸಣ್ಣೀರುಳ್ಳಿ ಬೆಳೆದಾಗಲೆಲ್ಲ ಬೆಲೆ ಕುಸಿತವಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಬೆಂಬಲ ಬೆಲೆ ನೀಡುತ್ತಿಲ್ಲ. ಬೆಲೆ ಕುಸಿತದ ಜೊತೆಗೆ ಮಳೆ ಬಂದು ಸಣ್ಣೀರುಳ್ಳಿ ಕೊಳೆಯುತ್ತದೆ. ಹೀಗಾಗಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ನೇನೇಕಟ್ಟೆ ಎನ್.ಎಂ.ಗಂಗಾಧರಪ್ಪ ಹೇಳಿದ್ದಾರೆ.ಸಣ್ಣೀರುಳ್ಳಿ ಬೆಳೆ ಚೆನ್ನಾಗಿ ಬಂತು. ಇಳುವರಿ ಕೂಡ ಬಂದಿದೆ. ಬೆಳೆ ಇಳಿದಿದೆ ಜೊತೆಗೆ ವರುಣನ ಕಾಟ ಶುರುವಾದ ಕಾರಣ ಸಣ್ಣೀರುಳ್ಳಿ ಫಸಲು ರಕ್ಷಿಸಲು ಶಾಮಿಯಾನ ಹಾಕಿಸಿದ್ದೇನೆ.

-ಗೋವಿಂದರಾಜು, ರಾಘವಾಪುರದ ರೈತ

ಸಣ್ಣೀರುಳ್ಳಿ ಬೆಲೆ ಇಳಿಕೆಯಿಂದ ರೈತರು ತತ್ತರಿಸಿ ಹೋಗಿದ್ದಾರೆ. ರೈತರ ಸಂಕಷ್ಟ ಅರಿತು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ರೈತರ ನೆರವಿಗೆ ಬಂದು ದರ ಏರಿಕೆ, ಇಳಿಕೆ ತಾರತಮ್ಯ ಹೋಗಲಾಡಿಸಲಿ.

-ಬಿ.ಸಿ.ಮಹದೇವಸ್ವಾಮಿ, ಬೆಟ್ಟದಮಾದಹಳ್ಳಿಅಧಿವೇಶನದಲ್ಲಿ ಪ್ರಸ್ತಾಪವಾಗಲಿ: ಸಣ್ಣೀರುಳ್ಳಿ ಬೆಳೆಗೆ ಬೆಲೆ ಕುಸಿತಗೊಂಡ ಕಾರಣ ಜಿಲ್ಲೆಯ ಶಾಸಕರು ವಿಧಾನ ಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಲಿ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಆಗ್ರಹಿಸಿದ್ದಾರೆ. ತಾಲೂಕಿನಲ್ಲಿ ಅತೀ ಹೆಚ್ಚಾಗಿ ಸಣ್ಣೀರುಳ್ಳಿ ಬೆಳೆಯನ್ನು ರೈತರು ಬೆಳೆಯುತ್ತಿದ್ದಾರೆ. ಜಿಲ್ಲೆಯ ಶಾಸಕರು ಜು.೧೫ ರಂದು ಆರಂಭವಾಗಲಿರುವ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಬೇಕು ಎಂದು ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!