ಬಸವರಾಜ ನಂದಿಹಾಳ
ಮುಂಗಾರು ಹಂಗಾಮು ಆರಂಭವಾಗುತ್ತಿದ್ದಂತೆ ರೈತರು ಬಿತ್ತನೆ ಕಡೆಗೆ ಮುಖ ಮಾಡಿದ್ದು, ಬೀಜ, ರಸಗೊಬ್ಬರ ಖರೀದಿಯಲ್ಲಿ ತಲ್ಲೀನರಾಗಿದ್ದಾರೆ. ತಾಲೂಕಿನಲ್ಲಿ ಬಿತ್ತನೆಗೆ ಬೇಕಾದಷ್ಟು ಮಳೆ ಆಗಿಲ್ಲವಾದರೂ ಜಮೀನು ಹದಗೊಳಿಸುವಷ್ಟು ಮುಂಗಾರುಪೂರ್ವ ಮಳೆ ಆಗಿದ್ದರಿಂದ ಜಮೀನು ಹದಗೊಳಿಸಿದ್ದು, ಮಾನ್ಸೂನ್ ಮಳೆಯ ಲಕ್ಷಣಗಳು ಗೋಚರಿಸುತ್ತಿರುವ ಹಿನ್ನೆಲೆ ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಸರದಿಯಲ್ಲಿ ನಿಂತು ಬೀಜ ಖರೀದಿಸುತ್ತಿದ್ದಾರೆ.
ಬಸವನಬಾಗೇವಾಡಿ ತಾಲೂಕಿನಲ್ಲಿ ಮುಸಕಿನ ಜೋಳ (ನೀರಾವರಿ ಮತ್ತು ಖುಷ್ಕಿ ಜಮೀನು) 11,156 ಹೆಕ್ಟೇರ್, ಸಜ್ಜೆ 642 ಹೆಕ್ಟೇರ್, ತೊಗರಿ 56,478 ಹೆಕ್ಟೇರ್, ಹೆಸರು 14 ಹೆಕ್ಟೇರ್, ಉದ್ದು 12 ಹೆಕ್ಟೇರ್, ಅಲಸಂದಿ ಇತರೆ ಬೆಳೆಗಳು 2 ಹೆಕ್ಟೇರ್, ಶೇಂಗಾ 223 ಹೆಕ್ಟೇರ್, ಸೂರ್ಯಕಾಂತಿ 2,128 ಹೆಕ್ಟೇರ್ , ಹತ್ತಿ 3,056 ಹೆಕ್ಟೇರ್ ಪ್ರದೇಶ, 580 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು, ಕುಳೆ ಕಬ್ಬು 1,848 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಇಲಾಖೆ ಬಿತ್ತನೆ ಗುರಿ ಇಟ್ಟುಕೊಂಡಿದೆ.ಬಸವನಬಾಗೇವಾಡಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ 148.6 ಕ್ವಿಂಟಲ್ ಗೋವಿನ ಜೋಳದ ಬೀಜ ಬಂದಿದ್ದು, 53.04 ಕ್ವಿಂಟಲ್ ವಿತರಣೆಯಾಗಿದೆ. 82.45 ಕ್ವಿಂಟಲ್ ತೊಗರಿ ಬಂದಿದ್ದು, 9.35 ಕ್ವಿಂಟಲ್ ವಿತರಣೆಯಾಗಿದೆ. 1.2 ಕ್ವಿಂಟಲ್ ಹೆಸರು ಬೀಜ ಬಂದಿದೆ. 90 ಕೆಜಿ ಸಜ್ಜೆ ಬಂದಿದ್ದು, 31.5 ಕೆಜಿ ವಿತರಣೆಯಾಗಿದೆ. 1.5 ಕ್ವಿಂಟಲ್ ಸೂರ್ಯಕಾಂತಿ ಬಂದಿದ್ದು, 8 ಕೆಜಿ ವಿತರಣೆಯಾಗಿದೆ.
ಕೊಲ್ಹಾರ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ 165.44 ಕ್ವಿಂಟಲ್ ಗೋವಿನಜೋಳ ಬೀಜ ಬಂದಿದ್ದು, 48.72 ಕ್ವಿಂಟಲ್ ವಿತರಣೆಯಾಗಿದೆ. 19 ಕ್ವಿಂಟಲ್ ತೊಗರಿ ಬೀಜದಲ್ಲಿ 1.15 ಕ್ವಿಂಟಲ್ ವಿತರಣೆಯಾಗಿದೆ. 60 ಕೆಜಿ ಹೆಸರು ಬೀಜ ಬಂದಿದ್ದು, ವಿತರಣೆಯಾಗಿಲ್ಲ. 1.5 ಕ್ವಿಂಟಲ್ ಸೂರ್ಯಕಾಂತಿ ಬಂದಿದ್ದು, ವಿತರಣೆಯಾಗಿಲ್ಲ. ಮನಗೂಳಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ 84.2 ಕ್ವಿಂಟಲ್ ಗೋವಿನಜೋಳ ಬೀಜ ಬಂದಿದ್ದು, 13.32 ಕ್ವಿಂಟಲ್ ವಿತರಣೆಯಾಗಿದೆ. 131.3 ಕ್ವಿಂಟಲ್ ತೊಗರಿ ಬೀಜದಲ್ಲಿ 6.3 ಕ್ವಿಂಟಲ್ ವಿತರಣೆಯಾಗಿದೆ. 60 ಕೆಜಿ ಹೆಸರು ಪೈಕಿ 5 ಕೆಜಿ ವಿತರಣೆಯಾಗಿದೆ.1.5 ಕ್ವಿಂಟಲ್ ಸೂರ್ಯಕಾಂತಿಯಲ್ಲಿ 8 ಕೆಜಿ ವಿತರಣೆಯಾಗಿದೆ.
ಕೊಲ್ಹಾರ ಭಾಗದಲ್ಲಿ ಗೋವಿನಜೋಳ ಬೀಜ, ಹೂವಿನಹಿಪ್ಪರಗಿ, ಬಸವನಬಾಗೇವಾಡಿ, ಮನಗೂಳಿ ಭಾಗದಲ್ಲಿ ತೊಗರಿ ಬೀಜ, ನಿಡಗುಂದಿ ಭಾಗದಲ್ಲಿ ತೊಗರಿ, ಗೋವಿನಜೋಳ ಬೀಜ ಹೆಚ್ಚು ಮಾರಾಟವಾಗುತ್ತಿದೆ. ಅಖಂಡ ತಾಲೂಕಿನಲ್ಲಿ ಹೆಚ್ಚಾಗಿ ರೈತರು ತೊಗರಿ ಬಿತ್ತನೆ ಮಾಡಲು ಮುಂದಾಗಿದ್ದು, ತೊಗರಿ ಬೀಜಕ್ಕೆ ಬಹು ಬೇಡಿಕೆ ಕಂಡು ಬರುತ್ತಿದೆ. ಒಣಬೇಸಾಯಕ್ಕೆ ಟಿಎಸ್‌ತ್ರಿಆರ್ ತೊಗರಿ ಬೀಜ ಖರೀದಿ ಮಾಡುತ್ತಿದ್ದಾರೆ. ಎಲ್ಲ ರೈತ ಸಂಪರ್ಕ ಕೇಂದ್ರದಲ್ಲಿ ತೊಗರಿ ಬೀಜ ದಾಸ್ತಾನು ಇದ್ದು, ಬೀಜಕ್ಕೆ ತೊಂದರೆಯಾಗಿಲ್ಲ. ಅಗತ್ಯವಿರುವ ಗೊಬ್ಬರ ಗೊಬ್ಬರ ಮಳಿಗೆಗಳಲ್ಲಿ ದಾಸ್ತಾನು ಇದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.-
ಕೆಲ ದಿನಗಳ ಹಿಂದೆ ಮಳೆಯಾಗಿದೆ. ಮಾನ್ಸೂನ್ ಮಳೆ ಬರುವ ವಾತಾವರಣ ನಿರ್ಮಾಣ ಆಗಿದ್ದು, ಮಳೆಯಾದರೆ ಬೀಜ ಕೊರತೆ ಆದರೆ ತೊಂದರೆ ಆಗುತ್ತದೆಂದು ಈಗಲೇ ಖರೀದಿ ಮಾಡಿ ಸಂಗ್ರಹಕ್ಕೆ ಮುಂದಾಗಿದ್ದೇವೆ. ಮಳೆಯಾದ ತಕ್ಷಣ ಬಿತ್ತನೆ ಮಾಡಲಾಗುವುದು. ಈ ಬಾರಿ ಬೀಜದ ದರ ಹೆಚ್ಚಳ ರೈತರಿಗೆ ಹೊರೆಯಾಗಿದೆ.
ಎಲ್ಲ ರೈತ ಸಂಪರ್ಕ ಕೇಂದ್ರದಲ್ಲಿ ಎಲ್ಲ ಬೀಜಗಳು ದಾಸ್ತಾನು ಇದ್ದು, ಬೀಜ ವಿತರಣೆಯಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳಲಾಗುವುದು. ಅಖಂಡ ತಾಲೂಕಿನಲ್ಲಿ ಸದ್ಯ ಬಿತ್ತನೆಗೆ ಜಮೀನು ಹದಗೊಳಿಸುವಷ್ಟು ಮಳೆಯಾಗಿದೆ. ಇನ್ನಷ್ಟು ಮಳೆ ಆದರೆ ಬಿತ್ತನೆ ಆರಂಭವಾಗಲಿದೆ. ರೈತರು ಕಳಪೆ ಬೀಜ ಖರೀದಿಸದೇ ಗುಣಮಟ್ಟದ ಬೀಜ ಖರೀದಿಸಬೇಕು. ಬೀಜಗಳ ಪ್ಯಾಕೇಟ್ ಮೇಲೆ ಕ್ಯೂಆರ್ ಕೋಡ್ ಇದ್ದು, ಅದನ್ನು ಸ್ಕ್ಯಾನ್ ಮಾಡಬೇಕಾಗಿರುವುದರಿಂದ ಬೀಜಗಳ ಪ್ಯಾಕೆಟ್‌ಗಳನ್ನು ಕೊಡುವಾಗ ರೈತರು ಸಹಕರಿಸಬೇಕು.-ಎ.ಪಿ.ಬಿರಾದಾರ ಸಹಾಯಕ ನಿರ್ದೇಶಕರು ಕೃಷಿ ಇಲಾಖೆ