ನಿರ್ವಹಣೆ ಇಲ್ಲದೇ ಶಿಥಿಲಗೊಂಡ ಮಂಗಲ ಕಾರ್ಯಾಲಯ!

KannadaprabhaNewsNetwork |  
Published : Jun 05, 2026, 03:15 AM IST
ಜಮಖಂಡಿ ನಗರದಲ್ಲಿರುವ ಎಪಿಎಂಸಿ ಮಂಗಲ ಕಾರ್ಯಾಲಯ. ದುರಸ್ತಿ ಇಲ್ಲದೇ ಅನಾಥವಾಗಿರುವದು.  | Kannada Prabha

ಸಾರಾಂಶ

ಕೇಶವ ಕುಲಕರ್ಣಿಕನ್ನಡಪ್ರಭ ವಾರ್ತೆ ಜಮಖಂಡಿಬಡ, ಮಧ್ಯಮ ವರ್ಗದವರ ಶುಭಸಮಾರಂಭಗಳಿಗೆ ಆಸರೆಯಾಗಿದ್ದ ನಗರದ ಎಪಿಎಂಸಿ ಮಂಗಲ ಕಾರ್ಯಾಲಯ ಇಂದು ನಿರ್ವಹಣೆ ಇಲ್ಲದೇ ಶಿಥಿಲಾವಸ್ಥೆಗೆ ತಲುಪಿದೆ. ಹೀಗಾಗಿ ಸಮರ್ಪಕವಾಗಿ ಬಳಕೆಯಾಗದ ಹಿನ್ನೆಲೆಯಲ್ಲಿ ಇಲ್ಲಿ ಯಾವುದೇ ಸಭೆ, ಸಮಾರಂಭಗಳು ನಡೆಯುತ್ತಿಲ್ಲ. ಶಿಥಿಲಗೊಂಡಿರುವ ಕಟ್ಟಡ ದುರಸ್ತಿಗೊಳಿಸಿ ಸಾರ್ವಜನಿಕರ ಉಪಯೊಗಕ್ಕೆ ಅನುಕೂಲ ಕಲ್ಪಸಿಕೊಡಬೇಕು ಎಂಬುವುದು ಸ್ಥಳೀಯರ ಆಗ್ರಹವಾಗಿದೆ.

ಕೇಶವ ಕುಲಕರ್ಣಿ

ಕನ್ನಡಪ್ರಭ ವಾರ್ತೆ ಜಮಖಂಡಿ

ಬಡ, ಮಧ್ಯಮ ವರ್ಗದವರ ಶುಭಸಮಾರಂಭಗಳಿಗೆ ಆಸರೆಯಾಗಿದ್ದ ನಗರದ ಎಪಿಎಂಸಿ ಮಂಗಲ ಕಾರ್ಯಾಲಯ ಇಂದು ನಿರ್ವಹಣೆ ಇಲ್ಲದೇ ಶಿಥಿಲಾವಸ್ಥೆಗೆ ತಲುಪಿದೆ. ಹೀಗಾಗಿ ಸಮರ್ಪಕವಾಗಿ ಬಳಕೆಯಾಗದ ಹಿನ್ನೆಲೆಯಲ್ಲಿ ಇಲ್ಲಿ ಯಾವುದೇ ಸಭೆ, ಸಮಾರಂಭಗಳು ನಡೆಯುತ್ತಿಲ್ಲ. ಶಿಥಿಲಗೊಂಡಿರುವ ಕಟ್ಟಡ ದುರಸ್ತಿಗೊಳಿಸಿ ಸಾರ್ವಜನಿಕರ ಉಪಯೊಗಕ್ಕೆ ಅನುಕೂಲ ಕಲ್ಪಸಿಕೊಡಬೇಕು ಎಂಬುವುದು ಸ್ಥಳೀಯರ ಆಗ್ರಹವಾಗಿದೆ.ನಗರದಲ್ಲಿರುವ ಸುಸಜ್ಜಿತ ಖಾಸಗಿ ಮಂಗಲ ಕಾರ್ಯಾಲಯಗಳ ಬಾಡಿಗೆ ಹಣ ಕಟ್ಟುವುದು, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಕಷ್ಟ ಸಾಧ್ಯವಾಗಿದೆ. ಇರುವ ಹಣದಲ್ಲಿ ಮಕ್ಕಳ ಮದುವೆ, ಮುಂಜಿವೆ, ನಿಶ್ಚಿತಾರ್ಥ, ಕುಬಸ ಮುಂತಾದ ಕಾರ್ಯಕ್ರಮಗಳನ್ನು ಮಾಡಬೇಕೆನ್ನುವವರಿಗೆ ಖಾಸಗಿ ಮಂಗಲ ಕಾರ್ಯಾಲಯಗಳ ಬಾಡಿಗೆ ಕಟ್ಟವುದು ಜನಸಾಮಾನ್ಯರ ಕೈಗೆ ನಿಲುಕದ ಮಾತಾಗಿದೆ.ಲಕ್ಷಾಂತರ ರೂಪಾಯಿಗಳ ಬಾಡಿಗೆ ಹಣ ಜೋಡಿಸಲಾಗದೇ, ಬಡವರು, ರೈತ ಪರಿವಾರಗಳು, ಮಧ್ಯಮ ವರ್ಗದವರು ಮಠ, ದೇವಸ್ಥಾನಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ನಗರದ ಮಧ್ಯಭಾಗದಲ್ಲಿರುವ ಎಪಿಎಂಸಿ ಮಂಗಲ ಕಾರ್ಯಾಲಯ, ಬೀಗರು, ಬಂಧುಗಳು ಬಂದು ಹೋಗಲು, ಪಾರ್ಕಿಂಗ್ ವ್ಯವಸ್ಥೆ ಹಾಗೂ ಬಸ್ ನಿಲ್ದಾಣಕ್ಕೆ ಹತ್ತಿರವಾಗಿದೆ. ಇದರಿಂದ ಸಾರ್ವಜನಿಕರ ಅತ್ಯಂತ ನೆಚ್ಚಿನ ಸ್ಥಳವು ಇದಾಗಿತ್ತು. ಆದರೆ, ದುರಸ್ತಿ ಇಲ್ಲವಾದ್ದರಿಂದ ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಹುಡುಕಾಡುವ ಪರಿಸ್ಥಿತಿ ಎದುರಾಗಿದೆ.

ನಗರದಲ್ಲಿರುವ ಖಾಸಗಿ ಮಂಗಲ ಕಾರ್ಯಾಲಯಗಳ ಬಾಡಿಗೆ ಕೇಳಿದರೆ ಬಡವರು ಬೆಚ್ಚಿಬೀಳುತ್ತಾರೆ. ಮದುವೆ, ನಿಶ್ಚಿತಾರ್ಥದಂತಹ ಅನೇಕ ಶುಭ ಸಮಾರಂಭಗಳಿಗೆ ಕೇವಲ ಕಟ್ಟಡದ ಬಾಡಿಗೆಗೇ ಲಕ್ಷಾಂತರ ರೂಪಾಯಿ ಸುರಿಯಬೇಕಾದ ಅನಿವಾರ್ಯತೆ ಇದೆ. ಈ ಮೊದಲು ಎಪಿಎಂಸಿ ಒಡೆತನದ ಈ ಮಂಗಲ ಕಾರ್ಯಾಲಯ ಖಾಸಗಿ ಕಾರ್ಯಾಲಯಕ್ಕೆ ಹೋಲಿಸಿದರೇ ಅತ್ಯಂತ ಕಡಿಮೆ ದರದಲ್ಲಿ ಲಭ್ಯವಿತ್ತು. ಕಾರಣ, ನೂರಾರು ಬಡ ಕುಟುಂಬಗಳು ಇಲ್ಲಿ ತಮ್ಮ ಮನೆಯ ಕಾರ್ಯಕ್ರಮಗಳನ್ನು ನೆರವೇರಿಸುತ್ತಿದ್ದರು. ಆದರೆ, ಕಳೆದ ಕೆಲವು ವರ್ಷಗಳಿಂದ ಈ ಕಟ್ಟಡ ನಿರ್ವಹಣೆಯಿಲ್ಲದೆ ಸೊರಗುತ್ತಿದ್ದು, ಇದೀಗ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಒಂದು ಕಾಲದಲ್ಲಿ ಜನಜಂಗುಳಿಯಿಂದ ತುಂಬಿರುತ್ತಿದ್ದ ಈ ಭವನ ಈಗ ಪಾಳುಬಿದ್ದಿದೆ.

ಕಿಟಕಿಗಳು ಮುರಿದಿವೆ, ಗೋಡೆಗಳು ಸೀಳು ಬಿಟ್ಟಿವೆ. ವಿಶಾಲವಾದ ಪಾರ್ಕಿಂಗ್ ಮತ್ತು ಊಟದ ಹಾಲ್ ವ್ಯವಸ್ಥೆ ಹೊಂದಿದ್ದ ಈ ಸುಸಜ್ಜಿತ ಕಟ್ಟಡವು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಾಳುಕೊಂಪೆಯಂತಾಗಿದೆ. ಸಾರ್ವಜನಿಕ ಆಸ್ತಿಯನ್ನು ಹೀಗೆ ವ್ಯರ್ಥವಾಗಲು ಬಿಟ್ಟಿರುವುದು ಎಷ್ಟು ಸರಿ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಬಡವರು ಮತ್ತು ಕೂಲಿ ಕಾರ್ಮಿಕರು ಸಾಲ ಮಾಡಿ ಖಾಸಗಿ ಮಂಟಪಗಳಿಗೆ ಹಣ ಸುರಿಯುವಂತಾಗಿದೆ. ಈ ಮಂಗಳ ಕಾರ್ಯಾಲಯ ಎಪಿಎಂಸಿ ಆವರಣದಲ್ಲಿರುವುದರಿಂದ ಇದು ರೈತರಿಗೆ ಭಾವನಾತ್ಮಕವಾಗಿ ಮತ್ತು ಭೌಗೋಳಿಕವಾಗಿ ಹತ್ತಿರವಾಗಿತ್ತು.

ಜಮಖಂಡಿಯ ರಾಜಕೀಯ ನಾಯಕರು ಮತ್ತು ಎಪಿಎಂಸಿ ಆಡಳಿತ ಮಂಡಳಿಯು ಕೂಡಲೇ ಎಚ್ಚೆತ್ತುಕೊಂಡು ಹಳೆಯ ಕಟ್ಟಡವನ್ನು ನವೀಕರಿಸಿ, ಹೊಸ ಸೌಲಭ್ಯಗಳನ್ನು ಅಳವಡಿಸಿ ಇದನ್ನು ಪುನಹ ಜನಸಾಮಾನ್ಯರ ಬಳಕೆಗೆ ಮುಕ್ತಗೊಳಿಸಬೇಕಿದೆ. ಕಾರ್ಯಾಲಯ ಮತ್ತೆ ಆರಂಭವಾದರೆ ಸಾವಿರಾರು ರೂಪಾಯಿಗಳ ಉಳಿತಾಯವಾಗಿ ಬಡವರ ಮೇಲಿನ ಆರ್ಥಿಕ ಹೊರೆ ತಗ್ಗಲಿದೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರಿನಿಧಿಗಳು ಇತ್ತ ಗಮನಹರಿಸಿ, ಬಡವರ ಹಿತದೃಷ್ಟಿಯಿಂದ ಎಪಿಎಂಸಿ ಮಂಗಲ ಕಾರ್ಯಾಲಯಕ್ಕೆ ಹೊಸರೂಪ ನೀಡಬೇಕೆಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.

ನಗರದ ಎಪಿಎಂಸಿ ಆವರಣದಲ್ಲಿರುವ ಮಂಗಲ ಕಾರ್ಯಾಲಯದ ದುರಸ್ತಿಗೆ ಕ್ರಿಯಾ ಯೋಜನೆಯಲ್ಲಿ ಸೇರಿಸಿ ಕೊಳ್ಳಲಾಗಿದ್ದು ಇನ್ನು ಕೆಲವು ದಿನಗಳಲ್ಲಿ ದುರಸ್ತಿ ಕಾರ್ಯವು ಪ್ರಾರಂಭವಾಗಲಿದೆ. ಸಂಪೂರ್ಣವಾಗಿ ಸಿದ್ಧಗೊಂಡ ನಂತರ ಮದುವೆ ಸೇರಿ ಇನ್ನಿತರ ಸಮಾರಂಭಗಳಿಗೆ ಸೂಕ್ತವಾಗುವಂತೆ ಸಿದ್ಧಪಡಿಸಿ ಸಾರ್ವಜನಿಕರ ಅನುಕುಲಕ್ಕೆ ಸರ್ಕಾರಿ ದರದಲ್ಲಿ ಬಾಡಿಗೆ ಕೊಡುವ ವ್ಯವಸ್ಥೆ ಮಾಡಲಾಗುವುದು.

-ಆನಂದ ರತ್ನಾಕರ, ಎಪಿಎಂಸಿ ಅಧಿಕಾರಿ ಜಮಖಂಡಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಕೇರಿ ಗ್ರಾಪಂನಲ್ಲಿ ಅವ್ಯವಹಾರ ಶಂಕೆ: ತನಿಖೆಗೆ ಆಗ್ರಹ
ಮುಂಗಾರು ಬಿತ್ತನೆಗೆ ಸಜ್ಜಾದ ರೈತರು