ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಬದುಕು ಹಸನಾಗಿಸಲು ಸಾಲದಿಂದ ಮುಕ್ತರಾಗಿಸಲು ನ್ಯಾಯಾಧೀಕರಣದ ತೀರ್ಪಿನಂತೆ ಜಲಾಶಯದ ನೀರಿನ ಮಟ್ಟವನ್ನು 524.256ಕ್ಕೆ ನಿಲ್ಲಿಸಿ ನಮ್ಮ ರಾಜ್ಯಕ್ಕೆ ಹಂಚಿಕೆಯಾದ ನೀರನ್ನು ನಮ್ಮ ಪಾಲಿಗೆ ಮೀಸಲಿಡಲು ಹಕ್ಕೊತ್ತಾಯ ಮಾಡುವುದು ಹಾಗೂ ಅವಳಿ ಜಿಲ್ಲೆಯ ರೈತರಿಗೆ ಹಂಚಿಕೆಯಾದ ಮತ್ತು ಬಳಸಿಕೊಳ್ಳಬೇಕಾದ ನೀರಿನ ಒಟ್ಟು ಪ್ರಮಾಣ ಎಷ್ಟು? ಎಂಬುವುದರ ಕುರಿತು ಚರ್ಚಿಸಲು ವಿಚಾರ ಸಂಕಿರಣವನ್ನು ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜೂ.8ರಂದು ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದರು.ವಿಜಯಪುರ ಜಲ್ಲೆಯಲ್ಲಿ ಐದು ನದಿಗಳು ಹರಿದಿದ್ದು ಪಂಚನದಿಗಳ ಬೀಡು 2ನೇ ಪಂಜಾಬ್ ಎಂದು ಕರೆಯಲಾಗುತ್ತಿದೆ. ಆದರೆ ಇದು ಕೇವಲ ಪ್ರತಿಷ್ಠೆಗೋಸ್ಕರ ಇದೊಂದು ವಿಷಯ ಹೇಳಿಕೊಳ್ಳಲು ಸುಲಭವಾಗಿದೆ. ಆದರೆ, ವಾಸ್ತವಿಕವಾಗಿ ಜಿಲ್ಲೆಯ ಇನ್ನು ಕೆಲವು ಭಾಗಗಳಲ್ಲಿ ಕುಡಿಯಲು ಕೂಡಾ ನೀರು ಇಲ್ಲದಂತ ಪರಿಸ್ಥಿತಿ ಇದೆ. ಕೃಷಿಗೆ ನೀರು ಕೊಡುವುದಂತು ದೂರದ ಮಾತು, ಕುಡಿಯಲು ಹಾಗೂ ಬೆಳೆಗಳಿಗೆ ನೀರು ಬೇಕಾದಾಗ ಹೋರಾಟ ಮಾಡಿಯೇ ನೀರು ಪಡೆಯಬೇಕಿರುವುದು ನಮ್ಮ ಜಿಲ್ಲೆಯ ರೈತರ ದೌರ್ಭಾಗ್ಯ. ಲಾಲ್ ಬಹದ್ದೂರ ಶಾಸ್ತ್ರೀ ಆಣೆಕಟ್ಟು ನಿರ್ಮಿಸಿದ್ದು, ನಮ್ಮ ಜಿಲ್ಲೆಯ ಆಲಮಟ್ಟಿಯಲ್ಲಿ ಲಕ್ಷಾಂತರ ಎಕರೆ ಜಮೀನು ಮನೆಗಳನ್ನು ಕಳೆದುಕೊಂಡು ತ್ಯಾಗ ಮಾಡಿದ ರೈತರು, ಸರ್ಕಾರ ಕೊಟ್ಟ ಪುಡಿಗಾಸು ತಗೆದುಕೊಂಡು ಭೂಮಿ ಇಲ್ಲದೆ ಬೇರೆ ರಾಜ್ಯಗಳಿಗೆ ಗುಳೆ ಹೋಗುವುದು ಸಾಮಾನ್ಯವಾಗಿದೆ. ನಮ್ಮ ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಇಲ್ಲಿಯವರೆಗೂ ಜಿಲ್ಲೆಯನ್ನು ಸಮಗ್ರ ನೀರಾವರಿಗೊಳಪಡಿಸಲು ವಿಫಲರಾಗಿದ್ದಾರೆ. 2010 ರಲ್ಲಿ ನ್ಯಾ.ಬ್ರಿಜೇಶಕುಮಾರ ನೇತೃತ್ವದ 2ನೇ ನ್ಯಾಯಾಧೀಕರಣ ಮಧ್ಯಂತರ ತೀರ್ಪು ನೀಡಿತು. 2013 ರಲ್ಲಿ ಅಂತಿಮ ತೀರ್ಪು ನೀಡಿ ಜಲಾಶಯದ ನೀರಿನ ಮಟ್ಟವನ್ನು 519.60 ಮೀಟರನಿಂದ 524.256ಕ್ಕೆ ನೀರು ನಿಲ್ಲಿಸಲು ಅನುಮತಿ ನೀಡಿತು. ನ್ಯಾಯಾಧೀಕರಣ ಅನುಮತಿ ನೀಡಿ 13ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಆದರೆ, ಇಲ್ಲಿಯ ವರೆಗೂ ಜಲಾಶಯದ ನೀರಿನ ಮಟ್ಟವನ್ನು ಹೆಚ್ಚಿಸಲು ಯಾವ ಸರ್ಕಾರಗಳು ಮನಸ್ಸು ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತ ಮುಖಂಡ ಸಿದ್ಧನಗೌಡ ಪಾಟೀಲ ಹಾಗೂ ಬಸವರಾಜ ಸಿದ್ದಾಪೂರ ಮಾತನಾಡಿ, ವಿಚಾರ ಸಂಕಿರಣದಲ್ಲಿ ಡಾ.ಸಿದ್ಧಲಿಂಗ ಮಹಾಸ್ವಾಮಿಗಳು ವಿರಕ್ತಮಠ ಇಂಗಳೇಶ್ವರ, ಸಂಗನಬಸವ ಮಹಾಸ್ವಾಮಿಗಳು ಶ್ರೀಮಠ ಹುಣಶ್ಯಾಳ ಪಿ.ಬಿ ಸಾನಿಧ್ಯ ವಹಿಸಲಿದ್ದು. ವಿಷಯ ಮಂಡನೆಯನ್ನು ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಡಾ.ರಾಜೇಂದ್ರ ಪೋದ್ದಾರ, ಪಂಚಪ್ಪ ಕಲಬುರ್ಗಿ ನಡೆಸಿ ಕೊಡಲಿದ್ದಾರೆ. ಅತಿಥಿಗಳಾಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ವ್ಹಿ.ಸಿ. ಬಿರಾದಾರ ಮತ್ತು ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಎನ್.ಎಂ.ಬಿರಾದಾರ ಪಾಲ್ಗೊಳ್ಳಲಿದ್ದಾರೆ. ವಿಜಯಪುರ ಮತ್ತು ಬಾಗಲಕೋಟೆ ಅವಳಿ ಜಿಲ್ಲೆಯ ರೈತರು ಸೇರಿದಂತೆ ಉತ್ತರ ಕರ್ನಾಟಕ ಭಾಗದ ರೈತರು, ವಿಚಾರ ಸಂಕಿರಣಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಮುಖಂಡರಾದ ಅರವಿಂದ ಕುಲಕರ್ಣಿ, ಹೊನಕೇರೆಪ್ಪ ತೆಲಗಿ, ಸಂಗನಗೌಡ ಪಾಟೀಲ ಸೇರಿ ಹಲವರು ಇದ್ದರು.