ನಾರಾಯಣ ಮಾಯಾಚಾರಿ
ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ನೇತೃತ್ವದ ಹೊಸ ಸರ್ಕಾರದ ಮೊದಲ ಸಚಿವ ಸಂಪುಟದಲ್ಲಿ ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನ ಸಿಗುವ ಭರವಸೆಯಲ್ಲಿದ್ದ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ಕಾರ್ಯಕರ್ತರು ತೀವ್ರ ನಿರಾಶೆಗೊಳಗಾಗಿದ್ದಾರೆ. ಅಲ್ಲದೇ, ಎರಡನೇ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ಸ್ಥಾನ ನೀಡದಿದ್ದರೆ ಹೋರಾಟಕ್ಕೂ ಅವರು ಮುಂದಾಗಿದ್ದಾರೆ.ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಕೊನೆಯ ಕ್ಷಣದಲ್ಲಿಯೇ ಸಚಿವ ಸ್ಥಾನ ಕೈತಪ್ಪಿತ್ತು. ಆಗಲೂ ತೀವ್ರ ನಿರಾಶೆಗೊಂಡಿದ್ದ ಅವರ ಅಭಿಮಾನಿಗಳು, ನಾಡಗೌಡರಿಗೆ ಪದೇ ಪದೇ ಅನ್ಯಾಯವಾಗುತ್ತಿದೆ ಎಂದು ಬಹಿರಂವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು. ಮಾತ್ರವಲ್ಲ, ಸಚಿವ ಸ್ಥಾನಕ್ಕೆ ಶಾಸಕ ಸಿ.ಎಸ್.ನಾಡಗೌಡ ಅವರನ್ನು ಪರಿಗಣನೆ ಮಾಡುವಂತೆ ಹೈಕಮಾಂಡ್‌ಗೂ ಒತ್ತಾಯ ಮಾಡಿದ್ದರು.
ಆದರೆ, ಸಚಿವ ಸ್ಥಾನ ವಂಚಿತರಾಗಿದ್ದ ಇವರನ್ನು ಕರ್ನಾಟಕ ಸೋಪ್ ಮತ್ತು ಡಿಟರ್ಜೆಂಟ್ ಲಿಮಿಟೆಡ್ (ಮೈಸೂರು ಸ್ಯಾಂಡಲ್ ಸೋಪ್)ಗೆ ಅಧ್ಯಕ್ಷರಾಗಿ ನೇಮಿಸಿದ್ದರು. ಆದರೆ, ಹಲ್ಲಿಲ್ಲದ ಹಾವು ಎಂಬಂತೆ ಅಧಿಕಾರ ಕೊಟ್ಟು ನಡೆಸದಂತೆ ಮಾಡುವ ಯತ್ನ ಮಾಡಿತು ಎಂಬ ಮಾತು ಅವರ ಬೆಂಬಲಿಗರಿಂದ ವ್ಯಕ್ತವಾಗಿದೆ. ಈ ರೀತಿ ಕೇವಲ ಮೂಗಿಗೆ ತುಪ್ಪ ಸವರಿದಂತೆ ಪ್ರಾಧಿಕಾರ, ನಿಗಮ ಮಂಡಳಿಗೆ ಅಧ್ಯಕ್ಷ ಸ್ಥಾನ ಕೊಟ್ಟು ಸಮಾಧಾನಪಡಿಸುವ ಯತ್ನ ನಡೆಯುತ್ತಿದೆಯೇ ಹೊರತು ಅವರ ಅನುಭವಕ್ಕೆ ತಕ್ಕುದಾದ ಸಚಿವ ಸ್ಥಾನ ನೀಡುವಲ್ಲಿ ಕಾಂಗ್ರೆಸ್ ವಿಫಲವಾಗುತ್ತಿದೆ ಎಂದು ಕ್ಷೇತ್ರದಲ್ಲಿ ತೀವ್ರ ಕುದಿಮೌನ ವ್ಯಕ್ತವಾಗಿದೆ. ಯಾವುದೇ ವ್ಯಕ್ತಿ ಪೂಜೆಗೆ ಹೊಂದಿಕೊಳ್ಳದೇ ಪಕ್ಷ ನಿಷ್ಠೆ ಹಾಗೂ ಪಕ್ಷದ ಬಲವರ್ಧನೆ ಗಾಗಿ ಹಗಲಿರುಳು ಶ್ರಮಿಸಿದ ಮುಖಂಡರಿಗೆ ಗೌರವ ಸಿಗುತ್ತಿಲ್ಲವೇಕೆ ಎಂಬುದು ಕಾರ್ಯಕರ್ತರ ಪ್ರಶ್ನೆಯಾಗಿದೆ.ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದ ಅಪ್ಪಾಜಿ:
30-40 ವರ್ಷಗಳಿಂದ ರಾಜಕೀಯ ಮಾಡಿಕೊಂಡು ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ಸಚಿವ ಸ್ಥಾನಕ್ಕಾಗಿ ಎಂದಿಗೂ ಲಾಭಿ ಮಾಡದೆ, ನನ್ನ ದುಡಿಮೆಗೆ, ಪ್ರಾಮಾಣಿಕತೆ ಹಾಗೂ ಹಿರಿತನಕ್ಕೆ ಸಚಿವ ಸ್ಥಾನ ಸಿಗಬೇಕು ಎಂದು ಆಗಾಗ ಹೇಳುತ್ತಲೇ ಇದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿ ಪೂಜೆ ಹಾಗೂ ಲಾಬಿಗೆ ಮಾತ್ರ ಪ್ರಾಧಾನ್ಯತೆ ಇದೆ. ಹೀಗಾಗಿ, ನಮ್ಮ ನಾಯಕರಿಗೆ ಸಚಿವ ಸ್ಥಾನ ಸಿಗುತ್ತಿಲ್ಲ ಎಂಬ ಮಾತು ಮುದ್ದೇಬಿಹಾಳ ಮತಕ್ಷೇತ್ರದ ಜನರಿಂದ ಕೇಳಿ ಬರುತ್ತಿದೆ.
ಜಿಲ್ಲೆಯಲ್ಲಿಯೇ ಅದರಲ್ಲೂ ಕಾಂಗ್ರೆಸ್‌ನಲ್ಲಿ ಹಿರಿಯರು ಆಗಿರುವ ಶಾಸಕ ಸಿ.ಎಸ್.ನಾಡಗೌಡ ಅವರಿಗೆ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಪ್ರತಿ ಬಾರಿ ಅನ್ಯಾಯವಾಗುತ್ತಲೇ ಇದೆ. ಮೊದಲ ಹಂತದಲ್ಲಿಯೇ ಸೀನಿಯಾರಿಟಿ ಹಾಗೂ ಅನುಭವದ ಆಧಾರದ ಮೇಲೆ ಅವರಿಗೆ ಸಚಿವ ಸ್ಥಾನವನ್ನು ವರಿಷ್ಠರು ನೀಡಬೇಕಿತ್ತು. ಅದಾಗಿಲ್ಲ. ಆದರೆ, ಎರಡನೇ ಹಂತದಲ್ಲಿಯೂ ಅವರಿಗೆ ಇದೆ ರೀತಿ ಅನ್ಯಾಯವಾದರೆ ಸುಮ್ಮನೆ ಕೂಡಲು ಆಗುವುದಿಲ್ಲ ಎಂದು ಕಾಂಗ್ರೆಸ್ ವರಿಷ್ಠರಿಗೆ ಅವರ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಬೆಂಬಲಿಗರು ತೀಕ್ಷ್ಣ ಸಂದೇಶ ರವಾನಿಸಿದ್ದಾರೆ.
-----
ಸಮರ್ಥ ಆಡಳಿತಗಾರ, ರಾಜಕೀಯ ಚತುರ
--------------
ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗದೆ ಇರುವುದು ಬೇಸರ ತಂದಿದೆ. ಮೂರು ದಶಕಗಳಿಂದ ಪಕ್ಷಕ್ಕೆ ನಿಷ್ಠೆ, ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ. ಹೀಗಾಗಿ, ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಮುಂದೆ ಸಿಗುತ್ತದೆ ಎಂಬ ವಿಶ್ವಾಸವಿದೆ.
-ಸಿ.ಎಸ್.ನಾಡಗೌಡ, ಶಾಸಕ ಮುದ್ದೇಬಿಹಾಳ