ಕನ್ನಡಪ್ರಭ ವಾರ್ತೆ ವಿಜಯಪುರ

ಕಲಕೇರಿ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ತನಿಖೆ ನಡೆಸುವಂತೆ ಆಗ್ರಹಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ.ಡಿ.ಜಿ.ಸಾಗರ ಬಣ) ವತಿಯಿಂದ ನಡೆಸಲಾಗುತ್ತಿರುವ ಧರಣಿ ಸತ್ಯಾಗ್ರಹ 3ನೇ ದಿನಕ್ಕೆ ಕಾಲಿಟ್ಟಿದೆ.

ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣನವರ ಮಾತನಾಡಿ, ಕಲಕೇರಿ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಬೇಕು. ವರ್ಗ 1 ಹಾಗೂ 15ನೇ ಹಣಕಾಸಿನ ಸಮಗ್ರ ಮಾಹಿತಿ ನೀಡಬೇಕು. ಗ್ರಾಮ ಪಂಚಾಯತಿಯ ಸ.ನಂ 1ರ ಪಕ್ಕದಲ್ಲಿ ಪೂರ್ವಕ್ಕಿರುವ ಸುಮಾರು 40 ಅಂಗಡಿಗಳನ್ನು ತೆರವುಗೊಳಿಸಿ ಆ ಕುಟುಂಬಗಳಿಗೆ ಮರಳಿ ಜೀವನ ನಡೆಸಲು ಶೆಡ್‌ಗಳನ್ನು ನಿರ್ಮಾಣ ಮಾಡಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.

ಈಗಾಗಲೇ ದಲಿತ ಸಂಘರ್ಷ ಸಮಿತಿ ಹೋರಾಟ ಮಾಡಿದಾಗ ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ತಂಡ ರಚನೆ ಮಾಡಿದ್ದು, ಈ ತನಿಖಾ ತಂಡ 3 ತಿಂಗಳು ಕಳೆದರೂ ತನಿಖಾ ವರದಿ ನೀಡಿಲ್ಲ. ಈ ಕುರಿತು ಜಿಪಂ ಸಿಇಒ ಅವರಿಗೆ ಮನವಿ ನೀಡಿ ಸುಮಾರು ಮೂರು ತಿಂಗಳು ಕಳೆದರೂ ಸೂಕ್ತ ತನಿಖೆ ನಡೆಸಿಲ್ಲ ಎಂದು ದೂರಿದರು.

ಈ ಸಂದರ್ಭದಲ್ಲಿ ಸೋಮಶೇಖರ ಬಡಿಗೇರ, ದೇವೇಂದ್ರ ವಡ್ಡರ, ಮಲ್ಲಿಕಾರ್ಜುನ ನಡುವಿನಕೇರಿ, ರಾಜೀವ ಐತಾಳೆ, ಖಾಜಾಸಾಬ ಮನಗೂಳಿ, ನಾಗಪ್ಪ ಹೊಸಮನಿ, ರಫೀಕ್ ಮಂದೆವಾಲ, ಹಣಮಂತ ವಡ್ಡರ, ಪ್ರಕಾಶ ದೊಡಮನಿ, ಆನಂದ ಹೊಸಮನಿ, ಬಾಬಾ ಇನಾಮದಾರ ಉಪಸ್ಥಿತರಿದ್ದರು.