ಬೂಕನಕೆರೆ ನಾಗರಾಜು ನೇತೃತ್ವದಲ್ಲಿ ರೈತ ದಿನಾಚರಣೆ । ಹಸಿರು ಫಲಕಕ್ಕೆ ಪೂಜೆ ಸಲ್ಲಿಸಿದ ರೈತ ಕಾರ್ಯಕರ್ತರು
ವಿಶ್ವ ರೈತ ದಿನದ ಅಂಗವಾಗಿ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ರೈತಸಂಘದ ಕಾರ್ಯಕರ್ತರು ಹಸಿರು ಬೋರ್ಡ್‌ಗೆ ಪೂಜೆ ಸಲ್ಲಿಸಿ ರೈತ ಹೋರಾಟದ ಸ್ಮರಣೆ ಮಾಡಿದರು.
ತಾಲೂಕು ರೈತಸಂಘದ ಪ್ರಧಾನ ಕಾರ್ಯದರ್ಶಿ ಬೂಕನಕೆರೆ ನಾಗರಾಜು ನೇತೃತ್ವದಲ್ಲಿ ಹಸಿರು ಫಲಕಕ್ಕೆ ಪೂಜೆ ಸಲ್ಲಿಸಿದ ರೈತ ಕಾರ್ಯಕರ್ತರು ಸಿಹಿ ವಿತರಿಸಿ ರೈತ ಹೋರಾಟದ ಘೋಷಣೆಗಳನ್ನು ಕೂಗಿದರು.ಮುಖಂಡ ಬೂಕನಕೆರೆ ನಾಗರಾಜು ಮಾತನಾಡಿ, ಕರ್ನಾಟಕದಲ್ಲಿನ ರೈತ ಹೋರಾಟದ ಹೆಜ್ಜೆಗಳನ್ನು ಸ್ಮರಿಸಿದರು. ರೈತ ಸಮುದಾಯ ಪಕ್ಷಾತೀತವಾಗಿ ಸಂಘಟಿತರಾಗದಿದ್ದರೆ ಮುಂದಿನ ದಿನಗಳಲ್ಲಿ ರೈತರು ಬಂಡವಾಳಶಾಹಿಗಳ ಮತ್ತು ಕಾರ್ಪೋರೇಟ್ ವಲಯದ ನವ ಭೂ ಮಾಲೀಕರ ಗುಲಾಮರಾಗುವ ಸನ್ನಿವೇಶ ಎದುರಾಗಲಿದೆ ಎಂದು ಎಚ್ಚರಿಸಿದರು.
ಕಂದಾಯ ಪಾವತಿಸದ ಕಾರಣ ರೈತರ ಭೂಮಿಯನ್ನು ಬೀಳುಗೆಡುವದಂತೆ ಮಾಡಿದ್ದು ರೈತ ಸಂಘದ ಹೋರಾಟ. ಇಂದಿನ ಎಲ್ಲಾ ರಾಜಕೀಯ ಪಕ್ಷಗಳು ನಾವು ರೈತರ ಪರ ಎಂದು ಹೇಳುತ್ತಲೇ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿ ರೈತರ ಬದುಕನ್ನು ಕಸಿದುಕೊಳ್ಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದ ಯುವ ಸಮುದಾಯ ರಾಜಕೀಯ ಪಕ್ಷಗಳ ಹಿಂಬಾಲಕರಾಗಿ ತಿರುಗುವುದನ್ನು ನಿಲ್ಲಿಸಿ, ಹಸಿರು ಚಳವಳಿಗೆ ಪ್ರವೇಶಿಸಬೇಕು. ರೈತ ಸಂಘವನ್ನು ಕಟ್ಟುವ ಮೂಲಕ ರೈತ ಸಮುದಾಯದ ಸ್ವಾಭಿಮಾನವನ್ನು ಎತ್ತಿ ಹಿಡಿಯುವಂತೆ ಕರೆ ನೀಡಿದರು.
----