ಹೇಮಾವತಿ ನದಿಯಿಂದ ಒಂದು ಕಂತು ನೀರು ಹರಿಸಲು ರೈತರಿಂದ ಮನವಿ

KannadaprabhaNewsNetwork |  
Published : Jul 10, 2026, 12:30 AM IST
9ಕೆಎಂಎನ್ ಡಿ12 | Kannada Prabha

ಸಾರಾಂಶ

ಮಂದಗೆರೆ ಮತ್ತು ಹೇಮಗಿರಿ ಬಳಿ ಮೈಸೂರು ಅರಸರು ಒಂದು ಶತಮಾನದ ಹಿಂದೆಯೇ ಹೇಮಾವತಿ ನದಿಗೆ ಅಡ್ಡಲಾಗಿ ಒಡ್ಡು ಅಣೆಕಟ್ಟೆಗಳನ್ನು ನಿರ್ಮಿಸಿ ರೈತರ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಿದ್ದಾರೆ. ಮಳೆಗಾಲದಲ್ಲಿ ಹರಿಯುವ ನದಿ ನೀರನ್ನು ಸದ್ಬಳಕೆ ಮಾಡಿಕೊಂಡು ಈ ಅಣೆಕಟ್ಟೆ ನಾಲಾ ವ್ಯಾಪ್ತಿಯ ರೈತರು ಭತ್ತ, ಕಬ್ಬು ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಬೆಳೆದು ನಿಂತಿರುವ ಕಬ್ಬು ಮತ್ತಿತರ ಬೆಳೆಗಳ ಸಂರಕ್ಷಣೆಗೆ ಹೇಮಾವತಿ ನದಿಯಿಂದ ಒಂದು ಕಂತು ತಾಲೂಕಿನ ಮಂದಗೆರೆ ಎಡ ಮತ್ತು ಬಲದಂಡೆ ನಾಲಾ ವ್ಯಾಪ್ತಿಯಲ್ಲಿ ನೀರು ಹರಿಸಲು ನೀರಾವರಿ ಇಲಾಖೆ ಜೊತೆ ವ್ಯವಹರಿಸಿ ಕ್ರಮ ಕೈಗೊಳ್ಳುವಂತೆ ತಾಲೂಕು ರೈತಸಂಘದ ಮುಖಂಡರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರನ್ನು ಆಗ್ರಹಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ತಾಲೂಕಿನ ಕೃಷಿ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಎಸ್ ದೀಪಕ್ ಅವರನ್ನು ಭೇಟಿ ಮಾಡಿದ ರೈತ ಮುಖಂಡರು, ಕೇವಲ ಬಿತ್ತನೆ ಬೀಜ, ಕಳೆ ನಾಶಕ, ರಸಗೊಬ್ಬರ ಹಂಚಿಕೆ ಮಾಡುವುದಷ್ಟೇ ಕೃಷಿ ಇಲಾಖೆ ಕೆಲಸವಲ್ಲ. ಬದಲಾಗಿ ಅಳಿದುಳಿದ ಬೆಳೆ ಸಂರಕ್ಷಣೆಗೂ ಮುಂದಾಗಬೇಕು ಎಂದು ಆಗ್ರಹಿಸಿದರು.

ತಾಲೂಕಿನ ಮಂದಗೆರೆ ಮತ್ತು ಹೇಮಗಿರಿ ಬಳಿ ಮೈಸೂರು ಅರಸರು ಒಂದು ಶತಮಾನದ ಹಿಂದೆಯೇ ಹೇಮಾವತಿ ನದಿಗೆ ಅಡ್ಡಲಾಗಿ ಒಡ್ಡು ಅಣೆಕಟ್ಟೆಗಳನ್ನು ನಿರ್ಮಿಸಿ ರೈತರ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಿದ್ದಾರೆ. ಮಳೆಗಾಲದಲ್ಲಿ ಹರಿಯುವ ನದಿ ನೀರನ್ನು ಸದ್ಬಳಕೆ ಮಾಡಿಕೊಂಡು ಈ ಅಣೆಕಟ್ಟೆ ನಾಲಾ ವ್ಯಾಪ್ತಿಯ ರೈತರು ಭತ್ತ, ಕಬ್ಬು ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಎಂದರು.

ಮೆಟ್ಟೂರು ಅಣೆಕಟ್ಟೆ ನಿರ್ಮಾಣಕ್ಕೂ ಮುನ್ನವೇ ಹೇಮಗಿರಿ, ಮಂದಗೆರೆ ಅಣೆಕಟ್ಟೆ ನಿರ್ಮಿಸಿದ್ದು, ಕಾವೇರಿ ಜಲ ವಿವಾದಕ್ಕೂ ನದಿ ಒಡ್ಡು ಅಣೆಕಟ್ಟೆ ನಾಲೆಗಳ ಮೂಲಕ ನೀರು ಹರಿಸುವುದಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ನೀರಾವರಿ ಇಲಾಖೆ ಅಧಿಕಾರಿಗಳು ಕಾವೇರಿ ಜಲ ವಿವಾದದ ಜೊತೆಗೆ ತಮ್ಮಷ್ಟಕ್ಕೆ ತಾವೇ ಸಂಬಂಧ ಕಲ್ಪಿಸಿಕೊಂಡು ನದಿ ಅಣೆಕಟ್ಟೆ ನಾಲೆಗಳಿಗೆ ಸಕಾಲದಲ್ಲಿ ನೀರು ಹರಿಸದೆ ರೈತ ಸಮುದಾಯಕ್ಕೆ ಅನಗತ್ಯ ತೊಂದರೆ ಕೊಡುತ್ತಲೇ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೇಮಾವತಿ ಜಲಾನಯದ ಪ್ರದೇಶದ ಜನಪ್ರತಿನಿಧಿಗಳೂ ಕೂಡ ಅಧಿಕಾರಿಗಳ ವರ್ತನೆ ವಿರುದ್ಧ ಧ್ವನಿಯೆತ್ತಿ ನದಿ ಅಣೆಕಟ್ಟೆ ನಾಲೆಗಳಿಗೆ ಸಕಾಲದಲ್ಲಿ ನೀರು ಬಿಡಿಸಲು ಅಗತ್ಯ ಕ್ರಮ ವಹಿಸುತ್ತಿಲ್ಲ. ಮಲೆನಾಡಿನಲ್ಲಿ ಒಂದಷ್ಟು ಮಳೆಯಾಗುತ್ತಿರುವುದರಿಂದ ಗೊರೂರಿನ ಹೇಮಾವತಿ ಜಲಾಶಯಕ್ಕೆ ಒಂದಷ್ಟು ನೀರು ಹರಿದು ಬರುತ್ತಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಬೆಳೆದು ನಿಂತಿರುವ ಬೆಳೆಗಳ ಸಂರಕ್ಷಣೆಗೆ ಮಂದಗೆರೆ ಮತ್ತು ಹೇಮಗಿರಿ ನದಿ ಅಣೆಕಟ್ಟೆಗಳ ಮೂಲಕ ಒಂದು ಕಂತು ನೀರು ಹರಿಸಬೇಕು ಎಂದು ಆಗ್ರಹಿಸಿದರು.

ತಾಲೂಕಿನ ಯಾವುದೇ ಇಲಾಖೆಗಳಿಗೆ ಹೋದರೂ ಅಧಿಕಾರಿಗಳು ಜನರ ಕೈಗೆ ಸಿಗುತ್ತಿಲ್ಲ. ಕೇಳಿದರೆ ಎಸ್‌ಐಆರ್ ನೆಪ ಹೇಳುತ್ತಿದ್ದಾರೆ. ಎಸ್ಐಆರ್ ಯಾವಾಗ ಬೇಕಾದರೂ ಮಾಡಿಕೊಳ್ಳಬಹುದು. ಆದರೆ, ರೈತರ ಬೆಳೆಯನ್ನು ಯಾವಾಗ ಬೇಕೋ ಆಗ ಸಂರಕ್ಷಣೆ ಮಾಡಲು ಸಾಧ್ಯವಿಲ್ಲ. ತಾಲೂಕಿನಲ್ಲಿ ಇದುವರೆಗೂ ನಿರೀಕ್ಷಿತ ಪ್ರಮಾಣದ ಮಳೆಯಾಗಿಲ್ಲ. ಕೃಷಿ ಇಲಾಖೆ ರೈತರ ಬೆಳೆ ನಷ್ಠದ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ರೈತರ ಮನವಿ ಆಲಿಸಿದ ಸಹಾಯಕ ಕೃಷಿ ಅಧಿಕಾರಿ ಬಿ.ಎಸ್.ದೀಪಕ್ ಮಾತನಾಡಿ, ರೈತರ ಬೆಳೆ ಸಂರಕ್ಷಣೆಗೆ ಅಗತ್ಯವಾದ ಒಂದು ಕಂತು ನೀರು ಬಿಡುಗಡೆಯ ಸಂಬಂಧ ತಹಸೀಲ್ದಾರ್ ಮತ್ತು ನೀರಾವರಿ ಇಲಾಖೆಯೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.

ಈ ವೇಳೆ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಮುಖಂಡರಾದ ಎಲ್.ಬಿ.ಜಗದೀಶ್, ಹಕ್ಕಿಮಂಚನಹಳ್ಳಿ ಹೊನ್ನೇಗೌಡ, ಚೌಡೇನಹಳ್ಳಿ ಕೃಷ್ಣೇಗೌಡ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರು ಬೆಳೆದ ಕಬ್ಬನ್ನು ಹೇಮಗಿರಿ ಷುಗರ್ಸ್ ಗೆ ಸರಬರಾಜು ಮಾಡಿ ಕಾರ್ಖಾನೆ ಉಳಿಸಿ
ರಾಜ್ಯ ಸರ್ಕಾರದಿಂದ ಸಮರ್ಪಕ ಅನುದಾನ ಸಿಗುತ್ತಿಲ್ಲ: ಎಚ್.ಟಿ.ಮಂಜು