ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಮರ್ಪಕ ಅನುದಾನ ದೊರೆತರೆ ಇಡೀ ತಾಲೂಕಿನ ರಸ್ತೆಗಳ ಚಿತ್ರಣವನ್ನೆ ಬದಲಿಸಬಹುದು. ಆದರೆ, ಅನುದಾನದ ಕೊರತೆಯಿಂದ ಇರುವ ಅಲ್ಪಸ್ವಲ್ಪ ಅನುದಾನದಲ್ಲಿ ಸಮಸ್ಯೆ ಇರುವ ಕಡೆ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇನೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.ತಾಲೂಕಿನ ರಂಗನಾಥಪುರ ಕ್ರಾಸ್ ಬಳಿ ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ಕೊಟಗಹಳ್ಳಿಯಿಂದ -ಸಂತೆಬಾಚಹಳ್ಳಿಗೆ ಸಂಪರ್ಕ ಕಲ್ಪಿಸುವ 1.20 ಕಿಮೀ ಉದ್ದದ ಸುಮಾರು ಎರಡು ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ಮತ್ತು ಪಟ್ಟಣದ ಟಿಎಪಿಸಿಎಂಎಸ್ ಕಚೇರಿ ಆವರಣದಲ್ಲಿ ಸುಮಾರು 40 ಲಕ್ಷ ರು. ವೆಚ್ಚದ ಸಿಮೆಂಟ್ ಕಾಂಕ್ರೀಟ್ ಹಾಕುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಬಹಳ ದಿನಗಳಿಂದ ಟಿಎಪಿಸಿಎಂಎಸ್ ಪ್ರಾಂಗಣದ ಕಾಂಕ್ರೀಟ್ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಈ ಹಿಂದೆ ಬಂದಿದ್ದ ಅನುದಾನವನ್ನು ಸರ್ಕಾರ ವಾಪಸ್ ಪಡೆದಿತು. ಪ್ರತಿನಿತ್ಯ ಸಾವಿರಾರು ರೈತರು ಸಾರ್ವಜನಿಕರು ಟಿಎಪಿಸಿಎಂಎಸ್ ಸಂಸ್ಥೆಗೆ ಬಂದು ಹೋಗುತ್ತಾರೆ. ಆದರೆ, ಆವರಣ ಗುಂಡಿ ಬಿದ್ದು ತಿರುಗಾಡಲು ತುಂಬಾ ತೊಂದರೆಯಾಗಿತ್ತು. ಈಗ ಕಾಂಕ್ರೀಟ್ ಹಾಕಲು ಚಾಲನೆ ನೀಡಲಾಗಿದೆ ಎಂದರು.

ಅನುದಾನದ ಕೊರತೆಯಿದ್ದರೂ ಬರುತ್ತಿರುವ ಅಲ್ಪಸ್ವಲ್ಪ ಅನುದಾಲ್ಲೇ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇನೆ. ಮುಂದೆ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಬರುವುದು ಸತ್ಯ. ಅಂದು ನಾನು ಅಂದುಕೊಂಡಿರುವ ತಾಲೂಕಿನ ಅಭಿವೃದ್ಧಿಯ ಕನಸು ನನಸಾಗಲಿದೆ ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಬಲದೇವ್ ಮಾತನಾಡಿ, ಮಳೆ ಸುರಿದು ಇಡೀ ಟಿಎಪಿಸಿಎಂಎಸ್ ಪ್ರಾಂಗಣ ಕೆಸರು ಗದ್ದೆಯಂತೆ ಆಗುತ್ತಿತ್ತು. ಕಾಂಕ್ರೀಟ್ ಹಾಕುವುದರಿಂದ ಜನರು, ರೈತರಿಗೆ ಆಗುತ್ತಿದ್ದ ಸಮಸ್ಯೆ ತಪ್ಪಲಿದೆ ಎಂದರು.


ಈ ವೇಳೆ ಸಂಸ್ಥೆ ಉಪಾಧ್ಯಕ್ಷೆ ಲತಾಮಣಿ ಮಂಜೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್, ರಾಜ್ಯ ಪರಿಷತ್ ಸದಸ್ಯ ಎ.ಆರ್.ರಘು, ದಿಶಾ ಸಮಿತಿ ಸದಸ್ಯ ನರಸನಾಯಕ್, ರೈತ ಮೋರ್ಚಾ ಉಪಾಧ್ಯಕ್ಷ ಬೇಲದಕೆರೆ ನಂಜಪ್ಪ, ನಿರ್ದೇಶಕರಾದ ಎಚ್.ಟಿ.ಲೋಕೇಶ್, ಜ್ಯೋತಿ ದೇವರಾಜು, ಮಂಜುನಾಥ್, ಕಿಕ್ಕೇರಿ ಮಧು, ಕರುಬಹಳ್ಳಿ ನಾಗೇಶ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಅಣ್ಣೆಚಾಕನಹಳ್ಳಿ ನಾಗರಾಜು, ಮುಖಂಡರಾದ ಸಂತೆಬಾಚಹಳ್ಳಿ ರವಿ, ಮೀಸೆ ಮಹದೇವೇಗೌಡ, ಬೆಳ್ತೂರು ಪುಟ್ಟೇಗೌಡ, ಮಾಂಬಳ್ಳಿ ಕಾತರಾಜು, ಗುತ್ತಿಗೆದಾರ ರವಿ, ಲೋಕೋಪಯೋಗಿ ಇಲಾಖೆಯ ಎಇಇ ರಾಝಿಕಾ, ಜೆ.ಇ ಗೌತಮಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.