ನೀರು ಹರಿಸಲು ಆಗ್ರಹಿಸಿ ರೈತರಿಂದ ಪ್ರತಿಭಟನೆ

KannadaprabhaNewsNetwork |  
Published : Oct 26, 2023, 01:00 AM IST
25ಕೆಪಿಎಂಎನ್ವಿ01: | Kannada Prabha

ಸಾರಾಂಶ

ಮಾನ್ವಿಯಲ್ಲಿ ಮಿಂಚಿನ ಸಂಚಾರ ತಡೆ ನಡೆಸಿ ಹೋರಾಟ ವಾರದ 7 ದಿನಗಳು ನೀರು ಪೂರೈಸುವಂತೆ ಆಗ್ರಹ

ಮಾನ್ವಿ: ತುಂಗಭದ್ರಾ ಎಡದಂಡೆ ಕಾಲುವೆಯ 85ನೇ ಡಿಸ್ಟ್ರಿಬ್ಯೂಟರ್ ಕೆಳಭಾಗದ ರೈತರ ಹೊಲಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು ಮತ್ತು ಗೇಜ್ ಕಾಯ್ದುಕೊಳ್ಳುವುದು ಹಾಗೂ ವಂತಿನ ಪ್ರಕಾರ ನೀರು ಸರಬರಾಜು ಮಾಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು. ಪಟ್ಟಣದ ಬಸವ ವೃತ್ತದ ಬಳಿ ಸೇರಿದ ಕೆಳಭಾಗದ ರೈತರು ಸಂಚಾರ ತಡೆ ನಡೆಸಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಟಿಎಲ್ಬಿಸಿ 85ನೇ ಡಿಸ್ಟ್ರಿಬ್ಯೂಟರ್ ಕೆಳಭಾಗದ ರೈತರು ಬೆಳೆದಿರುವ ಹತ್ತಿ, ಜೋಳ, ಭತ್ತ ಸೇರಿದಂತೆ ಇನ್ನಿತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ ರೈತರ ಹೊಲಗಳಿಗೆ ವಾರಬಂಧಿ ಪ್ರಕಾರ ನೀರು ಹರಿಸದೆ ಅನ್ಯಾಯ ಮಾಡುತ್ತಿರುವ ನೀರಾವರಿ ಅಧಿಕಾರಿಗಳು ಕಣ್ಣಾಮುಚ್ಚಾಲೆ ಆಟ ಆಡುತ್ತೀದ್ದೀರಿ ಎಂದು ಟೀಕಿಸಿದರು. ಮುಂಗಾರು ಮಳೆ ಕೊರತೆ, ಟಿಎಲ್ಬಿಸಿ ಕಾಲುವೆಗೆ ಅಸಮರ್ಪಕ ನೀರಿನಿಂದಾಗಿ ರೈತರು ತೀವ್ರ ಆತಂಕಗೊಂಡಿದ್ದಾರೆ. ಲಕ್ಷಾಂತರ ರು. ಖರ್ಚು ಮಾಡಿ ಹಾಕಿದ ಬೆಳೆಗಳು ಕಣ್ಣು ಮುಂದೆಯೇ ಒಣಗುತ್ತಿದ್ದು, ನೀರಾವರಿ ಇಲಾಖೆಯ ಅಧಿಕಾರಿಗಳ ಗಮನಕ್ಕಿದ್ದರು ಸಹ ರೈತರ ಜಮೀನುಗಳಿಗೆ ನೀರು ಹರಿಸಲು ಸಾಧ್ಯವಾಗಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಇಂದಿನಿಂದಲೇ ಕೆಳಭಾಗದ ರೈತರಿಗೆ 6 ದಿನಗಳವರೆಗೆ ನೀರು ಹರಿಸಬೇಕು. ಮುಂದಿನ ವಾರ 7 ದಿನಗಳವರೆಗೆ ನೀರು ಒದಗಿಸಬೇಕು ಇಲ್ಲವಾದಲ್ಲಿ ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ಒಣಗಲಿವೆ ಇದಕ್ಕೆ ಅಧಿಕಾರಿಗಳೇ ನೇರ ಹೊಣೆಯನ್ನು ಹೋರಬೇಕಾಗುತ್ತದೆ, ಬರಗಾಲದ ಸಮಯದಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ನೀರು ನಿರ್ವಹಣೆ ಮಾಡುವಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ ಅವರು ಐಸಿಸಿ ಸಭೆಯಲ್ಲಿ ತೆಗೆದುಕೊಂಡು ನಿರ್ಧಾರದಂತೆ ನೀರು ಬಿಡಬೇಕು ಎಂದು ಪಟ್ಟು ಹಿಡಿದರು. ರೈತರ ಬೇಡಿಕೆಗೆ ನೀರಾವರಿ ಅಧಿಕಾರಿಗಳು ಜಗ್ಗದಿದ್ದಾಗ ಹಠಾತ್ತಾಗಿ ರಸ್ತೆತಡೆ ನಡೆಸಿದರು. ಕೆಲಕಾಲ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು.ಈ ವೇಳೆ ಪ್ರತಿಭಟನೆ ಸ್ಥಳಕ್ಕೆ ಧೀಡಿರನೆ ಆಗಮಿಸಿದ ತಹಸೀಲ್ದಾರ ರಾಜು ಫಿರಂಗಿ, ಇಇ ವಿಜಯಲಕ್ಷ್ಮೀ, ಎಇಇ ರಶೀದ್ ಖಾನ್ ಅವರು ರೈತರ ಬೇಡಿಕೆಯನುಸಾರ ಇಂದಿನಿಂದಲೇ ಕೆಳಭಾಗದ ರೈತರಿಗೆ 6 ದಿನಗಳವರೆಗೆ ಮತ್ತು ಮುಂದಿನ ವಾರದಲ್ಲಿ 7 ದಿನಗಳವರೆಗೆ ಸಮರ್ಪಕವಾಗಿ ನೀರು ಹರಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಜೆ.ಸುಧಾಕರ, ಮುದುಕಪ್ಪನಾಯಕ, ಅಮರೇಶ ನಾಯಕ, ಶರತ ನಾಯಕ, ಸುಭಾನಬೇಗ್, ಪಿ.ರವಿಕುಮಾರ್, ರವಿಗೌಡ ಬ್ಯಾಗವಾಟ್, ಅಮರೇಶನಾಯಕ ಬ್ಯಾಗವಾಟ್, ಮೌನೇಶನಾಯಕ, ವಿಜಯನಾಯಕ ಕೊಟ್ನೆಕಲ್, ಗಣೇಶ, ಹನುಮಪ್ಪನಾಯಕ, ಸಂತೋಷ ಹೂಗಾರ, ಬಸವರಾಜ ಕರಡಿಗುಡ್ಡ ರಾಮಕೃಷ್ಣ ಸೇರಿದಂತೆ ಕೆಳಭಾಗದ ನೂರಾರು ರೈತರು ಹಾಗೂ ಜೆಡಿಎಸ್ ಮುಖಂಡರು ಭಾಗವಹಿಸಿದ್ದರು. ------------ 25ಕೆಪಿಎಂಎನ್ವಿ01 ಮಾನ್ವಿ ಪಟ್ಟಣದ ಪಟ್ಟಣದ ಬಸವ ವೃತ್ತದ ಬಳಿ ಸೇರಿದ 85ನೇ ಡಿಸ್ಟ್ರಿಬ್ಯೂಟರ್ ಕೆಳಭಾಗದ ರೈತರು ಸಂಚಾರ ತಡೆ ನಡೆಸಿ ಪ್ರತಿಭಟಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ