ರಾಯಚೂರು: ರೈತರು ಆಧುನಿಕ ಸವಾಲುಗಳನ್ನು ಮೆಟ್ಟಿನಿಂತು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಮೇಲುಕೋಟೆ ಶಾಸಕ, ರೈತ ಮುಖಂಡ ದರ್ಶನ್ ಪಟ್ಟಣ್ಣಯ್ಯ ಸಲಹೆ ನೀಡಿದರು.
ಸರ್ಕಾರಗಳ ಜನ, ರೈತ ವಿರೋಧಿ ನೀತಿಗಳ ಪರಿಣಾಮ ಇಂದು ಕೃಷಿ ವಲಯವು ಸಾಕಷ್ಟು ಸವಾಲುಗಳನ್ನು ಎದುರಿಸುವಂತಾಗಿದ್ದು, ಅವುಗಳೆಲ್ಲವನ್ನು ಎದುರಿಸಲು ಸನ್ನದ್ಧರಾಗಬೇಕು ಕೇವಲ ಕೃಷಿ ಕಾಯಕದಲ್ಲಿ ತೊಡಗಿಕೊಳ್ಳದೆ ಕಚ್ಚಾ ಉತ್ಪನ್ನಗಳಿಂದ ವಸ್ತುಗಳನ್ನು ತಯಾರಿಸಲು ಸಣ್ಣ-ಮಧ್ಯಮ ಕೈಗಾರಿಕೆಗಳನ್ನು ಸ್ಥಾಪಿಸುವುದರ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ ಎಂದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಂಡವಾಳ ಶಾಹಿಪರ ಆಡಳಿತ ನಡೆಸುತ್ತಿದ್ದು, ರೈತರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲಗೊಂಡಿದೆ. ಮುಂಚೆಗಿಂತಲೂ ಸಹ ಕೃಷಿ ಕ್ಷೇತ್ರ ಬಿಕ್ಕಟ್ಟು ಇನ್ನಷ್ಟು ಜಟಿಲಗೊಳ್ಳುತ್ತಿದ್ದು, ಇದರ ಜೊತೆಗೆ ಹವಾಮಾನ ವೈಪರಿತ್ಯವೂ ಸಹ ಬಹುದೊಡ್ಡ ಸವಾಲಾಗಿ ಮಾರ್ಪಟ್ಟಿದೆ.ರೈತ ವಿರೋಧಿ ನೀತಿಗಳ ವಿರುದ್ಧ ಹೋರಾಟ ನಡೆಸುವುದರ ಜೊತೆಗೆ ವೈಜ್ಞಾನಿಕ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ರೈತರು ಸಂಘಟಿತರಾಗಿ ಹೋರಾಟದ ಮೂಲಕ ಸಮಸ್ಯೆಗಳ ವಿರುದ್ಧ ಸೆಣಸಾಡಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಮಾಜಿ ಪ್ರಧಾನಿ ಚರಣ್ ಸಿಂಗ್ ಗ್ರಾಮೀಣ ಆರ್ಥಿಕತೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಸಿ ರೈತರ ಅಭಿವೃದ್ಧಿಗೆ ಶ್ರಮಿಸಿದ್ದರು. ದಿ.ಪುಟ್ಟಣ್ಣಯ್ಯನವರೂ ರೈತ ನಾಯಕರಾಗಿ ಹೋರಾಡುವುದರ ಜೊತೆಗೆ ಶಾಸಕರಾಗಿ ಸದನದಲ್ಲಿ ರೈತರ, ಕೃಷಿ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಸರ್ಕಾರಕ್ಕೆ ಚಾಟಿ ಬೀಸುತ್ತಿದ್ದರು. ಇಬ್ಬರು ಮಹಾನ್ ನಾಯಕರು ಅವರ ಸ್ಮರಣೆ ಅಗತ್ಯವಾಗಿದೆ ಎಂದರು.
ಸರ್ವೋದಯ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಜೆ.ಎಂ ವೀರಸಂಗಯ್ಯ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳು ಇದ್ದರು.
ಸರ್ಕಾರಕ್ಕೆ ಹಕ್ಕೋತ್ತಾಯಿಸಿ ಮನವಿ: ರಾಯಚೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಮಟ್ಟದ ಸಮಾವೇಶದಲ್ಲಿ ತೆಗೆದುಕೊಂಡು ಹಕ್ಕೋತ್ತಾಯಗಳನ್ನು ರಾಜ್ಯ ಸರ್ಕಾರ ಪರಿಗಣಿಸಿ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಂಘದ ಮುಖಂಡರು ಸಚಿವ ಬೋಸರಾಜು ಅವರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.