ಮಕ್ಕಳಿಗೆ ಧರ್ಮ ಪ್ರಜ್ಞೆ ಜಾಗೃತಗೊಳಿಸುವುದು ಅಗತ್ಯ

KannadaprabhaNewsNetwork | Published : Dec 24, 2023 1:45 AM

ಸಾರಾಂಶ

ನಮ್ಮ ದೇಶ ಸಂಸ್ಕೃತಿ, ಸಂಸ್ಕಾರಗಳಿಗೆ ಹೆಸರಾಗಿದೆ. ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ ಕಲಿಸಿ ಅವರಲ್ಲಿ ಧರ್ಮ ಪ್ರಜ್ಞೆ ಜಾಗೃತಗೊಳಿಸಬೇಕಿದೆ ಎಂದು ಗೌರಿಗದ್ದೆ ಅವಧೂತಾಶ್ರಮದ ವಿನಯ್‌ಗುರೂಜಿ ಸಲಹೆ ನೀಡಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಜೀವನ ಇಂದು ವ್ಯಾಪಾರವಾಗುತ್ತಿದೆ. ಇಂಥ ಸಂದರ್ಭದಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ ಕಲಿಸಿ ಅವರಲ್ಲಿ ಧರ್ಮ ಪ್ರಜ್ಞೆ ಜಾಗೃತಗೊಳಿಸಬೇಕಿದೆ ಎಂದು ಗೌರಿಗದ್ದೆ ಅವಧೂತಾಶ್ರಮದ ವಿನಯ್‌ಗುರೂಜಿ ಸಲಹೆ ನೀಡಿದ್ದಾರೆ.

ನಗರದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಗೆ 40ವರ್ಷ ಸಂದ ಹಿನ್ನೆಲೆ ಶಾಲಾ ಅವರಣದಲ್ಲಿ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ''''ಡೆಸ್ಟಿನಿ'''' ಸಾಂಸ್ಕೃತಿಕ ಕಾರ್ಯಕ್ರಮದ 3ನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನಮ್ಮ ದೇಶ ಸಂಸ್ಕೃತಿ, ಸಂಸ್ಕಾರಗಳಿಗೆ ಹೆಸರಾಗಿದೆ. ಮಕ್ಕಳಿಗೆ ವಿದ್ಯೆ ಜತೆ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು. ಸಂಸ್ಥೆ 1983 ರಲ್ಲಿ ಹೈಸ್ಕೂಲ್ ಮೂಲಕ ಆರಂಭವಾಗಿ ಬಿಐಡಿ, ಪ್ರಥಮ ದರ್ಜೆ, ನರ್ಸಿಂಗ್ ಕಾಲೇಜಿನವರಿಗೆ ವಿಸ್ತರಣೆಯಾಗಿರುವುದು ಸಂತಸದ ಸಂಗತಿ ಎಂದು ಹೇಳಿದರು.

ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ, ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಹಿಂದುಳಿದ ಜಿಲ್ಲೆ ಚಿತ್ರದುರ್ಗದಲ್ಲಿ 28 ವಯಸ್ಸಿಗೆ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದೆ. ಹಣ ಗಳಿಸುವ ಆಸೆ ಇದ್ದಿದ್ದರೆ, ಬೆಂಗಳೂರಲ್ಲಿ ಸ್ಥಾಪಿಸುತ್ತಿದ್ದೆ. ಹಿಂದುಳಿದ ಹಾಗೂ ಬಡ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ವಿದ್ಯಾಭ್ಯಾಸ ಸಿಗಬೇಕೆಂಬುದು ನನ್ನ, ನನ್ನ ಪತ್ನಿ ಉದ್ಧೇಶವಾಗಿತ್ತು. ಈ ಸಂಸ್ಥೆಯನ್ನು ನನ್ನ ಪುತ್ರ ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಐದು ಬಾರಿ ಶಾಸಕನಾಗಿರುವ ನನಗೆ ಬಡವರ ಕಷ್ಟ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ ಎಂದರು.

ಪಠ್ಯದೊಂದಿಗೆ, ಪಠ್ಯೇತರ ಚಟುವಟಿಕೆಗಳ ಕಡೆಯೂ ಮಕ್ಕಳನ್ನು ಪ್ರೋತ್ಸಾಹಿಸಬೇಕಿದೆ. ಈ ಹಿನ್ನೆಲೆ ಶಿಕ್ಷಣದ ಎಲ್ಲ ಸ್ತರಗಳಿಗೂ ನಮ್ಮ ಸಂಸ್ಥೆ ಆದ್ಯತೆ ನೀಡುತ್ತಿದೆ. ವೃದ್ಧಾಶ್ರಮಗಳ ಸಂಖ್ಯೆ ನಿಯಂತ್ರಿಸಬೇಕಾದರೆ ಪಾಲಕರು ಮಕ್ಕಳಿಗೆ ವಿದ್ಯೆಯೊಂದಿಗೆ, ಸಂಸ್ಕಾರ ಕಲಿಸಬೇಕಿದೆ. ಸೇವೆಯಲ್ಲಿ ತೃಪ್ತಿ ಇದೆ. ಜನರ ಪ್ರೀತಿ, ವಿಶ್ವಾಸದಿಂದಾಗಿ ನಾನಿಂದು ಸಮಾಜದಲ್ಲಿ ಎತ್ತರಕ್ಕೆ ಬೆಳೆದಿದ್ದೇನೆ ಎಂದರು.

ಡಿಡಿಪಿಐ ಕೆ.ರವಿಶಂಕರ ರೆಡ್ಡಿ ಮಾತನಾಡಿ, ಈ ಬಾರಿಯೂ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯದಲ್ಲೇ ನಮ್ಮ ಜಿಲ್ಲೆ ನಂ.ಒನ್ ಬಸ್ ಸ್ಥಾನ ಪಡೆಯಲು ಪಾಲಕರ ಸಹಕಾರದ ಅಗತ್ಯವಿದೆ ಎಂದರು. ಎಎಸ್‌ಪಿ ಕುಮಾರಸ್ವಾಮಿ ಎಚ್.ಚಂದ್ರಕಲಾ, ಯಶಸ್ವಿನಿ ಕಿರಣ್, ಸಂಸ್ಥೆ ಸಿಇಒ ಎಂ.ಸಿ.ರಘುಚಂದನ್ ಇದ್ದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಶಿವಶಂಕರ್, ದಾವಣಗೆರೆ ವಿವಿ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳಾದ ಕವಿತಾ, ಎಂ.ಸಲೇಹಾ ಬೇಗಂ, ಕಲ್ಪನಾ ಅವರನ್ನು ಸನ್ಮಾನಿಸಲಾಯಿತು. ಅನಂತರಾಮ್ ಸ್ವಾಗತಿಸಿದರು.

Share this article