ಲಕ್ಷ್ಮೇಶ್ವರದಲ್ಲಿ ರಸಗೊಬ್ಬರ ಖರೀದಿಗೆ ಮುಗಿಬಿದ್ದ ರೈತರು

KannadaprabhaNewsNetwork |  
Published : Jun 05, 2026, 02:30 AM IST
ಲಕ್ಷ್ಮೇಶ್ವರದಲ್ಲಿ ರಸಗೊಬ್ಬರ ಖರೀದಿಗೆ ಮುಗಿಬಿದ್ದಿರುವ ರೈತರು. | Kannada Prabha

ಸಾರಾಂಶ

ಗೋವಿನಜೋಳ, ಬಿಟಿ ಹತ್ತಿ, ಹೆಸರು, ತೊಗರಿ ಬೀಜಗಳ ಜತೆ ಡಿಎಪಿ ಹಾಗೂ ಯೂರಿಯಾ ಗೊಬ್ಬರ ನೀಡುವಂತೆ ರೈತರು ಆಗ್ರಹಿಸಿದರು. ಎಫ್‌ಐಡಿ ಮಾಡಿಸುವುದು ಸೇರಿದಂತೆ ರೈತರು ಅನೇಕ ಕಿರಿಕಿರಿ ನಡುವೆ ಬೀಜ ಗೊಬ್ಬರ ಪಡೆಯಲು ಹರಸಾಹಸ ಪಟ್ಟರು.

ಲಕ್ಷ್ಮೇಶ್ವರ: ಪಟ್ಟಣದ ಗೊಬ್ಬರಗಳ ಅಂಗಡಿಗಳ ಮುಂದೆ ರೈತರು ಬಿತ್ತನೆಯ ಬೀಜ ಮತ್ತು ಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಗುರುವಾರ ಪಟ್ಟಣದಲ್ಲಿ ಕಂಡುಬಂದಿತು.

ತಾಲೂಕಿನಾದ್ಯಂತ ಸುರಿದ ಮುಂಗಾರು ಹಂಗಾಮಿನ ಮಳೆಯು ರೈತರ ಕೃಷಿ ಚಟುವಟಿಕೆ ಗರಿಗೆದರುವಂತೆ ಮಾಡಿದ್ದು ಕಂಡುಬಂದಿತು. ಉತ್ತಮವಾದ ಮಳೆ ಸುರಿದ ಹಿನ್ನೆಲೆ ರೈತರು ಬಿತ್ತನೆ ಬೀಜ ಮತ್ತು ಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಗೊಬ್ಬರ, ಬೀಜ ತೆಗೆದುಕೊಳ್ಳುತ್ತಿದ್ದ ದೃಶ್ಯ ಮಾಮೂಲಿಯಾಗಿತ್ತು.

ಗೋವಿನಜೋಳ, ಬಿಟಿ ಹತ್ತಿ, ಹೆಸರು, ತೊಗರಿ ಬೀಜಗಳ ಜತೆ ಡಿಎಪಿ ಹಾಗೂ ಯೂರಿಯಾ ಗೊಬ್ಬರ ನೀಡುವಂತೆ ರೈತರು ಆಗ್ರಹಿಸಿದರು. ಎಫ್‌ಐಡಿ ಮಾಡಿಸುವುದು ಸೇರಿದಂತೆ ರೈತರು ಅನೇಕ ಕಿರಿಕಿರಿ ನಡುವೆ ಬೀಜ ಗೊಬ್ಬರ ಪಡೆಯಲು ಹರಸಾಹಸ ಪಟ್ಟರು.ತಾಲೂಕಿನ ಶಿಗ್ಲಿ, ಬಟ್ಟೂರು, ರಾಮಗೇರಿ, ಗೊಜನೂರ, ಮಾಡಳ್ಳಿ, ಯಳವತ್ತಿ, ಪು.ಬಡ್ನಿ, ಸೂರಣಗಿ, ಗೋವನಾಳ ಗ್ರಾಮ ಸೇರಿದಂತೆ ಉತ್ತಮ ಮಳೆಯಾಗಿರುವುದರಿಂದ ರೈತರು ಕೃಷಿ ಚಟುವಟಿಕೆ ಕೈಗೊಳ್ಳುತ್ತಿದ್ದಾರೆ. ರೈತರು ಗೊಬ್ಬರ ಖರೀದಿಸಲು ಗೊಬ್ಬರ ಅಂಗಡಿಗಳಿಗೆ ಹೋದರೆ ಲಿಂಕ್ ತೆಗೆದುಕೊಂಡರೆ ಮಾತ್ರ ಗೊಬ್ಬರ ನೀಡುವುದಾಗಿ ಅಂಗಡಿಗಳ ಮಾಲೀಕರು ಹೇಳುತ್ತಿರುವುದು ರೈತರಿಗೆ ಸಂಕಷ್ಟ ತಂದಿದೆ. ಆದ್ದರಿಂದ ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಕೃಷಿ ಅಧಿಕಾರಿಗಳು ಮುಂದೆ ಬರಬೇಕು ಎಂದು ಚನ್ನಪ್ಪ ಷಣ್ಮುಖಿ ಆಗ್ರಹಿಸಿದರು. ಅಧಿಕ ಬೆಲೆಗೆ ರಸಗೊಬ್ಬರ ಮಾರಾಟ: ಕ್ರಮಕ್ಕೆ ಆಗ್ರಹ

ರೋಣ: ಮಾರುಕಟ್ಟೆಯಲ್ಲಿ ರಸಗೊಬ್ಬರ ಕೊರತೆಯಿಂದಾಗಿ ಮಾರಾಟಗಾರರು ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದು, ರೈತರಿಗೆ ತೊಂದರೆಯಾಗುತ್ರಿದ್ದು, ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರೋಣ ಹಾಗೂ ವಿವಿಧ ತಾಲೂಕಿನ ಹಲವು ಗ್ರಾಮದ ರೈತರು ರೋಣ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.ಡೀಸೆಲ್ ದರ ಏರಿಕೆ, ಕಳಪೆ ಗುಣಮಟ್ಟದ ಹೆಸರು ಬಿತ್ತನೆ ಬೀಜ, ಕೃಷಿ ಯಂತ್ರೋಪಕರಣಗಳ ಬಾಡಿಗೆಯಲ್ಲಿ ಹೆಚ್ಚಳ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಒಳಗಾಗಿರುವ ತಾಲೂಕಿನ ರೈತರಿಗೆ ಗಾಯದ ಮೇಲೆ ಬರೆ ಏಳೆದಂತೆ ಮಾರಾಟಗಾರರು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರಗಳನ್ನು ಮಾರಾಟ ಮಾಡುತ್ತಿದ್ದು, ಆ ಮೂಲಕ ರೈತರನ್ನು ಶೋಷಣೆಗೆ ಒಳಪಡಿಸುತ್ತಿದ್ದಾರೆ.

ಪ್ರತಿ ಎರಡು ಚೀಲ ಗೊಬ್ಬರಕ್ಕೆ ಲಿಂಕ್ ಗೊಬ್ಬರವಾಗಿ ನ್ಯಾನೋ ಯೂರಿಯಾ ರೈತರು ಬೇಡವೆಂದರೂ ಒತ್ತಾಯಪೂರ್ವಕವಾಗಿ ನೀಡುತ್ತಿದ್ದು, ಗೊಬ್ಬರ ಖರೀದಿ ನಂತರ ರಸೀದಿಯನ್ನು ಕೊಡದೆ ರೈತರಿಗೆ ಮೋಸ ಮಾಡುತ್ತಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.ರೈತರಾದ ಎಸ್.ಜಿ. ಕರಲಿಂಗಣ್ಣವರ, ಎಂ.ಬಿ. ಬ್ಯಾಳಿ, ಕೆ.ಸಿ. ಲಿಂಗನಗೌಡ್ರ, ಎಂ.ಎನ್. ಕಳಸಣ್ಣವರ, ಎಂ.ಎ. ಗಾಣಿಗೇರ, ಶಿವನಗೌಡ ಹಾವನಗೌಡ್ರ, ಎನ್.ಎಂ. ದೇಶಣ್ಣವರ, ಮಲ್ಲಪ್ಪ ಬ್ಯಾಳಿ, ಬಸಪ್ಪ ಚವಡಿ, ಎಸ್.ಎಸ್. ಚನ್ನಪ್ಪಗೌಡ್ರ, ಬಿ.ಎಸ್. ಗದಗಿನ, ಎಸ್.ಎಸ್. ಮಾಮನಿ, ಆರ್.ಪಿ. ರೊಟ್ಟಿ ಸೇರಿದಂತೆ ಅನೇಕ ರೈತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿಥಿ ತಂದು ಕೊಟ್ಟಿದ್ದ ಮಾವಿನ ಹಣ್ಣು ಸೇವಿಸಿ ಇಬ್ಬರು ಬಾಲಕಿಯರು ಸಾವು!
ಮೆಡಿಕಲ್‌ ಸೀಟು ಶುಲ್ಕ ಈ ವರ್ಷ ಹೆಚ್ಚಿಸದಿರಲು ಸರ್ಕಾರ ನಿರ್ಧಾರ