ಮಹದೇವಪ್ಪ ಎಂ. ಸ್ವಾಮಿಶಿರಹಟ್ಟಿ: ಮಳೆಗಾಲದ ಬಿತ್ತನೆ ಕಾರ್ಯ ಆರಂಭವಾಗಿರುವ ಹಿನ್ನೆಲೆ ಗೋವಿನಜೋಳ, ಹೆಸರು ಕಾಳು ಹಾಗೂ ತೊಗರಿ ಬೀಜ ಪಡೆಯಲು ರೈತರು ರೈತ ಸಂಪರ್ಕ ಕೇಂದ್ರದ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಬೀಜದ ವಿತರಣೆಯಲ್ಲಿ ಆಗುತ್ತಿರುವ ವಿಳಂಬದಿಂದಾಗಿ ರೈತರು ಪರದಾಡುವಂತಾಯಿತು.ಕಳೆದ ಆರೇಳು ದಿನಗಳಿಂದಲೂ ರೈತ ಸಂಪರ್ಕ ಕೇಂದ್ರ ಎದುರು ಬೆಳ್ಳಂಬೆಳಗ್ಗೆ ರೈತರು ಜಮಾವಣೆಗೊಂಡು ಸರದಿ ಸಾಲಿನಲ್ಲಿ ನಿಂತರೂ ಕೆಲ ರೈತರಿಗೆ ಬಿತ್ತನೆ ಬೀಜ ಸಿಗದೇ ಇರುವ ಹಿನ್ನೆಲೆ ರೈತರು ಅಸಮಾಧಾನಗೊಂಡಿದ್ದು, ನಿತ್ಯವೂ ರೈತರ ಆಧಾರ ಕಾರ್ಡ್ ಮತ್ತು ಇತರೆ ದಾಖಲೆ ಪಡೆದು ನೋಂದಣಿ ಮಾಡಿಕೊಂಡು ಬೀಜ ಕೊಡಲು ವಿಳಂಬವಾಗುತ್ತಿದೆ. ಪ್ರಸ್ತುತ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ಮುಂಗಾರು ಹಂಗಾಮಿನ ಬಿತ್ತನೆ ಬೀಜ ಖರೀದಿಗೆ ರೈತರು ನಿತ್ಯವೂ ತಮ್ಮ ಕೃಷಿ ಕೆಲಸ ಕಾರ್ಯಗಳನ್ನು ಬಿಟ್ಟು ಬೀಜ ಮತ್ತು ಗೊಬ್ಬರ ಖರೀದಿಗೆ ದಿನಗಟ್ಟಲೇ ನಿಲ್ಲುವ ಸ್ಥಿತಿ ಎದುರಾಗಿದೆ. ತಾಲೂಕಿನಲ್ಲಿ ಹೆಸರು, ಗೋವಿನಜೋಳ, ತೊಗರಿ, ಶೇಂಗಾ ಹೆಚ್ಚಾಗಿ ಬಿತ್ತನೆ ಮಾಡಲಾಗುತ್ತಿದೆ. ಹೀಗಾಗಿ ರೈತರು ಬಿತ್ತನೆ ಬೀಜ ವಿತರಣಾ ಕೇಂದ್ರದ ಮುಂದೆ ಆಧಾರ್ ಎಫ್‌ಐಡಿಯೊಂದಿಗೆ ಸರತಿ ಸಾಲಲ್ಲಿ ನಿಂತು ಖರೀದಿಸುತ್ತಿದ್ದಾರೆ.ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಬಾಂಡ್ ಎನ್‌ಎಂಎಚ್- ೦೦೭ ಕಂಪನಿ ಮೆಕ್ಕೆಜೋಳ ಬೀಜಕ್ಕೆ ರೈತರ ಬೇಡಿಕೆ ಹೆಚ್ಚಾಗಿದ್ದು, ಗುರುವಾರ ಈ ಕಂಪನಿಯ ಬೀಜ ದೊರೆಯದೇ ಇರುವುದಕ್ಕೆ ರೈತರು ತೀವ್ರ ಅಸಮಾಧಾನಗೊಂಡಿದ್ದು, ರೈತ ಸಂಪರ್ಕ ಕೇಂದ್ರದ ಮುಂದೆ ಕೆಲಹೊತ್ತು ಪ್ರತಿಭಟಿಸಿದರಲ್ಲದೇ ಸಮಯಕ್ಕೆ ಸರಿಯಾಗಿ ಬಿತ್ತನೆ ಬೀಜ ದೊರೆಯದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಮೆಕ್ಕೆಜೋಳ ಬೀಜದಲ್ಲಿ ನಾನಾ ರೀತಿ ಕಂಪನಿಗಳ ಬೀಜಗಳಿದ್ದರೂ ಪಟ್ಟಣದ ರೈತ ಸಂಪರ್ಕ ಕೇಂದ್ರದ ಎದುರು ರೈತರು ಬಾಂಡ್ ಎನ್‌ಎಂಎಚ್- ೦೦೭ ಕಂಪನಿ ಬೀಜಕ್ಕೆ ಎಲ್ಲಿಲ್ಲದ ಬೇಡಿಕೆ ಇಟ್ಟಿದ್ದಾರೆ.ಈಗಾಗಲೇ ಬಿತ್ತನೆ ಕಾರ್ಯ ಶುರುವಾಗಿದ್ದು, ಮುಂಜಾಗ್ರತಾ ಕ್ರಮ ವಹಿಸಿ ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲು ರೈತರು ದುಂಬಾಲು ಬಿದ್ದಿದ್ದಾರೆ. ತಾಲೂಕಿನಲ್ಲಿ ಬಿತ್ತನೆಗೆ ತಕ್ಕಷ್ಟು ಮಳೆಯಾಗಿದ್ದು, ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸಿಬ್ಬಂದಿ ಕೊರತೆಯಿದೆ. ಜತೆಗೆ ರೈತರ ದಟ್ಟಣೆ ನಿಯಂತ್ರಣಕ್ಕೆ ಬಿತ್ತನೆ ಬೀಜ ವಿತರಣೆಗೆ ಇನ್ನೊಂದು ಕೌಂಟರ್ ತೆರೆಯಬೇಕು ಎಂದು ಕಡಕೋಳ ಗ್ರಾಮದ ರೈತ ಯಲ್ಲಪ್ಪ ತಳವಾರ ಆಗ್ರಹಿಸಿದರು. ಅಲ್ಲದೇ ಕೃಷಿ ಇಲಾಖೆ ಅಧಿಕಾರಿಗಳು ತುರ್ತು ಬೀಜ ವಿತರಣೆಗೆ ಕ್ರಮ ವಹಿಸಬೇಕು ಎಂದರು.
ಪರಿಶೀಲಿಸಿ ಬಿತ್ತನೆ ಬೀಜ ವಿತರಣೆ: ರೈತರ ಬೇಡಿಕೆಯಂತೆ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಮೆಕ್ಕೆಜೋಳ, ತೊಗರಿ, ಹೆಸರುಕಾಳು ಬೀಜ ದಾಸ್ತಾನು ಇದೆ. ರೈತರ ಆಧಾರ್ ಕಾರ್ಡ್ ನೋಂದಣಿ ಎಫ್‌ಐಡಿ ಮಾಡಿರುವುದನ್ನು ಪರಿಶೀಲಿಸಿ ಬಿತ್ತನೆ ಬೀಜ ವಿತರಣೆ ಮಾಡುತ್ತಿದ್ದು, ರೈತರು ಭಯಪಡುವ ಅಗತ್ಯವಿಲ್ಲ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ ತಿಳಿಸಿದರು.
ಬಿತ್ತನೆ ಬೀಜ ಸಿಗುತ್ತಿಲ್ಲ: ಬೆಳಗ್ಗೆಯಿಂದಲೇ ಕೃಷಿ ಕೆಲಸಗಳನ್ನು ಬದಿಗೊತ್ತಿ ರೈತ ಸಂಪರ್ಕ ಕೇಂದ್ರದ ಎದುರು ಸಾಲುಗಟ್ಟಿ ನಿಂತಿದ್ದು, ಮಧ್ಯಾಹ್ನದ ಹೊತ್ತಿಗೆ ನಮ್ಮ ಸರತಿ ಬಂದಾಗ ಒಮ್ಮೆಲೆ ಬಿತ್ತನೆ ಬೀಜ ಖಾಲಿಯಾಗಿದೆ ದಾಸ್ತಾನು ಇಲ್ಲ ಎಂದು ಸಿಬ್ಬಂದಿ ಹೇಳಿದ್ದು, ಇಡೀ ದಿನದ ಕೆಲಸವೂ ಇಲ್ಲದೇ ಬಿತ್ತನೆ ಬೀಜ ಸಿಗುತ್ತಿಲ್ಲ ಎಂದು ಮಜ್ಜೂರ ತಾಂಡಾದ ರೈತ ಚಂದ್ರು ಲಮಾಣಿ ತಿಳಿಸಿದರು.