ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು: ಚಲುವರಾಯಸ್ವಾಮಿ

KannadaprabhaNewsNetwork |  
Published : Feb 04, 2024, 01:31 AM IST
ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ | Kannada Prabha

ಸಾರಾಂಶ

ರೈತರು ಒಂದೇ ಬೆಳೆಗೆ ಸೀಮಿತವಾಗದೆ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ರೈತರು ಒಂದೇ ಬೆಳೆಗೆ ಸೀಮಿತವಾಗದೆ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ತುಮಕೂರು ಹಾಗೂ ಶಿರಾ ತಾಲೂಕು ಕೃಷಿ ಇಲಾಖೆ ವತಿಯಿಂದ ಪಟ್ಟನಾಯಕನಹಳ್ಳಿಯ ಶ್ರೀ ಗುರುಗುಂಡ ಬ್ರಹ್ಮಶ್ವರಸ್ವಾಮಿ ಮಠದ ಆವರಣದಲ್ಲಿ ನಡೆದ 21 ನೇ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಸಮಗ್ರ ಕೃಷಿ ಪದ್ಧತಿಗಳ ಹಾಗೂ ಶೂನ್ಯ ಬಂಡವಾಳ ಕೃಷಿ ವಿಚಾರಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೂ ಕಳೆದರೂ ರೈತರ ಸಮಸ್ಯೆಗಳಿಗೆ ಪರಿಪೂರ್ಣವಾಗಿ ಪರಿಹಾರ ಸಿಕ್ಕಿಲ್ಲ, ಅತ್ಯಂತ ಕಷ್ಟಕರ ಕಸುಬು ಎಂದರೆ ಅದು ಕೃಷಿ, ಈ ಬಾರಿ ಹಾಕಿದ ಶೇ.90 ರಷ್ಟು ಬೆಳೆ ನಷ್ಟವಾಗಿದೆ. ಇದರಿಂದಾಗಿ ರೈತರು ಇನ್ನಷ್ಟೂ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ರಾಜ್ಯದ 273 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಕೇಂದ್ರ ಸರ್ಕಾರದಿಂದ ಬೆಳೆ ಪರಿಹಾರ ಹಣ ಇನ್ನೂ ಕೂಡ ಬಂದಿಲ್ಲ, ಕರ್ನಾಟಕದಿಂದ ಕೇಂದ್ರ ಸರ್ಕಾರಕ್ಕೆ ೪ ಲಕ್ಷ ಕೋಟಿ ರು. ತೆರಿಗೆ ಕಟ್ಟುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರ ನಮಗೆ 50 ಸಾವಿರ ಕೋಟಿ ಮಾತ್ರ ಅನುದಾನ ನೀಡುತ್ತಿದೆ. ಕಳೆದ 5 ವರ್ಷದಿಂದ 1 ಲಕ್ಷ 28 ಸಾವಿರ ಕೋಟಿ ಬಾಕಿ ಹಣ ಬರಬೇಕಿದೆ. ಕೊಬ್ಬರಿ ಖರೀದಿ ಕೇಂದ್ರಗಳನ್ನು 12 ತಿಂಗಳು ಕೂಡ ತೆಗೆಯುವಂತೆ ಮನವಿ ಮಾಡಲಾಗಿದೆ ಎಂದರು.

ರಾಜ್ಯ ಸರ್ಕಾರದಿಂದ ರೈತರಿಗೆ ಮತ್ತು ಮಹಿಳೆಯರಿಗೆ ೫ ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳಿಗಾಗಿ 70 ಸಾವಿರ ಕೋಟಿ ಖರ್ಚು ಮಾಡಲಾಗಿದೆ, ಈ ಯೋಜನೆಗಳಿಂದ ಅನೇಕ ಬಡ ಕುಟುಂಬಗಳು ಸ್ವಾವಲಂಬನೆಯಿಂದ ಜೀವನ ಸಾಗಿಸುತ್ತಿದ್ದಾರೆ ಎಂದು ತಿಳಿಸಿದರು.

ಶಾಸಕ ಎಸ್.ಆರ್‌. ಶ್ರೀನಿವಾಸ್ ಮಾತನಾಡಿ, ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ರೈತರು ಭಾಗವಹಿಸಬೇಕು, ಶೂನ್ಯ ಬಂಡವಾಳದಿಂದ ಹೇಗೆ ಕೃಷಿ ಮಾಡಬೇಕು ಎಂಬುದನ್ನು ತಿಳಿದುಕೊಂಡು ತಮ್ಮ ಕೃಷಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಕೃಷಿ ಚಟುವಟಿಕೆಗಳಿಗೆ ಆದ್ಯತೆ ನೀಡದೆ ಕಡೆಗಣಿಸಲಾಗಿದೆ. ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಶೇ.೪೦ರಷ್ಟು ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗಾಗಿ ಬಳಸಲಾಗುತ್ತಿದೆ. ಕೃಷಿ ಮತ್ತು ಕೈಗಾರಿಕೆಗಳು ಸಮಾನಾಂತರದಲ್ಲಿ ಬೆಳೆದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಮಾತನಾಡಿ, ಶಿರಾ ತಾಲೂಕು ಕೇಂದ್ರದಲ್ಲಿ ಒಂದು ಕೃಷಿ ಕಾಲೇಜು ಸ್ಥಾಪನೆಯಾಗಬೇಕು. ಇದರಿಂದ ಈ ಭಾಗದ ಅನೇಕ ರೈತರಿಗೂ ಮತ್ತು ವಿದ್ಯಾರ್ಥಿಗಳಿಗೂ ಅನುಕೂಲಕರವಾಗುತ್ತದೆ. ಎಲ್ಲಾ ಬೆಳೆಗಳನ್ನು ಬೆಳೆಯಲು ಬೇಕಾದ ಸೂಕ್ತ ವಾತಾವರಣ ಈ ಭಾಗದಲ್ಲಿದೆ. 2050ರೊಳಗಾಗಿ ಶಿರಾ ಬೆಂಗಳೂರಿನ ಹೆಬ್ಬಾಗಿಲಾಗುತ್ತದೆ. ಅಗತ್ಯ ಹಣ್ಣು ತರಕಾರಿಗಳನ್ನೂ ಬೆಳೆಯಲು ಬೇಕಾದ ಉತ್ಕೃಷ್ಟ ಮಣ್ಣು ಈ ಭಾಗದಲ್ಲಿದೆ. ಆದ್ದರಿಂದ ಉಗ್ರಗೌಡರ ೧೫೦ ವರ್ಷದ ಕನಸನ್ನು ಕೃಷಿ ಕಾಲೇಜು ಸ್ಥಾಪನೆ ಮಾಡುವ ಮೂಲಕ ನನಸಾಗಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಗುರುಗುಂಡ ಬ್ರಹೇಶ್ವರಸ್ವಾಮಿ ಮಠದ ಪೀಠಾಧಿಪತಿ ನಂಜಾವಧೂತ ಮಹಾಸ್ವಾಮೀಜಿ, ಶ್ರೀ ವಿನಾಯಕ ಗೋಲ್ಡ್ ಮಾಲೀಕ ಅಂಜನಾಮೂರ್ತಿ, ಕ್ಯಾದಿಗುಂಟೆ ಕೆ. ತಿಪ್ಪೇಸ್ವಾಮಿ, ಮಾಜಿ ತಾ.ಪಂ. ಸದಸ್ಯ ಶ್ರೀನಿವಾಸ್, ತುಮಕೂರು ಜಂಟಿ ಕೃಷಿ ನಿರ್ದೇಶಕ ಡಾ. ಎನ್. ರಮೇಶ್, ತೋಟಗಾರಿಕೆ ತಜ್ಞ ಪ್ರಶಾಂತ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ