ಗದಗ: ದೇಶದ ಆರ್ಥಿಕತೆಗೆ ಬೆನ್ನೆಲುಬಾಗಿರುವ ರೈತರು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ರಾಮಣ್ಣ ಹೂವಣ್ಣವರ ತಿಳಿಸಿದರು.ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ(ಆತ್ಮ), ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ, ಕೆಪೆಕ್ ಲಿಮಿಟೆಡ್ ಬೆಂಗಳೂರು ಇವರ ಜಂಟಿ ಸಹಯೋಗದಲ್ಲಿ ಪಿಎಂಎಫ್ಎಂಇ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಧುನಿಕ ಕಾಲಕ್ಕೆ ತಕ್ಕಂತೆ ರೈತರು ಹೊಂದಿಕೊಂಡು ಅವಿಷ್ಕಾರಗೊಂಡ ಹಲವು ತಂತ್ರಜ್ಞಾನಗಳೊಂದಿಗೆ ರೈತರು ಮುನ್ನಡೆಯಬೇಕಾಗಿದೆ. ಇದಕ್ಕೆ ಸರ್ಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅವುಗಳ ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.ಉಪ ಕೃಷಿ ನಿರ್ದೇಶಕಿ ಸ್ಫೂರ್ತಿ ಜಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸಕ್ತ ವರ್ಷವು ಯೋಜನೆಯ ಅನುಷ್ಠಾನದ ಕೊನೆಯ ವರ್ಷವಾಗಿದ್ದು, ಜಿಲ್ಲೆಗೆ 200 ಘಟಕಗಳ ಗುರಿ ಇದ್ದು, ಈವರೆಗೆ 20 ಘಟಕಗಳಿಗೆ ಮಾತ್ರ ಸಾಲ ಮಂಜೂರಾತಿಯಾಗಿದ್ದು, ಆಸಕ್ತಿದಾರರು ಯೋಜನೆಯಡಿ ಅರ್ಜಿ ಸಲ್ಲಿಸಲು ತಿಳಿಸಿದರು.ಜಿಲ್ಲಾ ಅಪರ ಜಿಲ್ಲಾಧಿಕಾರಿ ದುರ್ಗೇಶ್ ಕೆ.ಆರ್. ಮಾತನಾಡಿ, ಜಿಲ್ಲೆಯ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿಗೆ ಪೂರಕವಾಗಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯಡಿ ಹೊಸ ಆಹಾರ ಸಂಸ್ಕರಣಾ ಉದ್ದಿಮೆ ಪ್ರಾರಂಭಿಸಲು ಹಾಗೂ ಚಾಲ್ತಿಯಲ್ಲಿರುವ ಉದ್ದಿಮೆಗಳನ್ನು ವಿಸ್ತರಿಸಲು ಗರಿಷ್ಠ ₹15 ಲಕ್ಷದವರೆಗೆ ಶೇ. 50ರಷ್ಟು ಸಹಾಯಧನ ಲಭ್ಯವಿದ್ದು, ಸಾರ್ವಜನಿಕರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಜಿಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಮಾತನಾಡಿ, ರೈತರು ಮಾರುಕಟ್ಟೆಯ ಬೇಡಿಕೆಗನುಗುಣವಾಗಿ ಬೆಳೆ ಬೆಳೆಯಲು ಹಾಗೂ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯಿಂದ ಆರ್ಥಿಕ ಪ್ರಗತಿ ಸಾಧಿಸಬೇಕೆಂದರು.
ಈ ವೇಳೆ ವಸ್ತು ಪ್ರದರ್ಶನದಲ್ಲಿ ಪಿಎಂಎಫ್‌ಎಂಇ ಯೋಜನೆಯಡಿಯ ಫಲಾನುಭವಿಗಳು, ತಮ್ಮ ಉದ್ದಿಮೆಯಲ್ಲಿ ತಯಾರಿಸಿದ ಗಾಣದ ಎಣ್ಣೆ, ಅವಲಕ್ಕಿ, ಕಾರದ ಪುಡಿ, ಖಡಕ್ ರೊಟ್ಟಿ, ಶೇಂಗಾ ಚಟ್ಟಿ, ವಿವಿಧ ಸಿಹಿ ತಿನಿಸುಗಳು ಸೇರಿದಂತೆ ಹಲವು ಆಹಾರ ಉತ್ಪನ್ನಗಳನ್ನು ಪ್ರದರ್ಶಿಸಿದರು.ಶಾರದಾ, ಶೃತಿ, ಹಾಗೂ ಪ್ರವೀಣ ಅವರಿಗೆ ಯೋಜನೆಯಡಿ ಕೆವಿಜಿ ಬ್ಯಾಂಕಿನಿಂದ ಸಾಲ ಮಂಜೂರಾತಿ ಪತ್ರವನ್ನು ಸಂತೋಷ ಮಾಲನಹಳ್ಳಿ ಅವರು ನೀಡಿದರು. ಗಿರೀಶ ಕುಮಾರ, ಸಂತೋಷ ಜವಳಿ ಹಾಗೂ ಜಯಶ್ರೀ ಹಿರೇಮಠ ಅವರು ಮಾತನಾಡಿದರು. ತಾಂತ್ರಿಕ ಆಧಿಕಾರಿ ಸಿದ್ದೇಶ, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಹುಲುಗಣ್ಣನವರ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ರೇಷ್ಮೆ ಇಲಾಖೆಯ ಉಪನಿರ್ದೇಶಕ ಕೈಲಾಸ ಮೂರ್ತಿ, ವಾರ್ತಾ ಇಲಾಖೆಯ ವಸಂತ ಮಡ್ಲೂರ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕುಬೇರರೆಡ್ಡಿ ನೀಲಣ್ಣವರ ಸೇರಿದಂತೆ ಮುಂತಾದವರು ಇದ್ದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಜಿ.ಎಚ್. ತಾರಾಮಣಿ ಸ್ವಾಗತಿಸಿದರು. ಸಹಾಯಕ ಕೃಷಿ ನಿರ್ದೇಶಕಿ ಸೀಮಾ ಸವಣೂರು ನಿರೂಪಿಸಿದರು.