ರೈತರು ಹೈನುಗಾರಿಕೆಯಲ್ಲಿ ಹೊಸ ತಾಂತ್ರಿಕತೆ ಅಳವಡಿಸಿಕೊಳ್ಳಿ

KannadaprabhaNewsNetwork |  
Published : Nov 06, 2025, 01:30 AM IST
೫ಶಿರಾ೧: ಶಿರಾ ನಗರದ ನಂದಿನಿ ಕ್ಷೀರ ಭವನದಲ್ಲಿ ಮೇವಿನ ಅಭಿವೃದ್ಧಿ ಮತ್ತು ಸಂರಕ್ಷಣೆ ಕುರಿತು ತುಮಕೂರು ಹಾಲು ಒಕ್ಕೂಟ ಹಮ್ಮಿಕೊಂಡಿದ್ದ ಕಾರ್ಯಗಾರವನ್ನು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಉದ್ಘಾಟಿಸಿದರು. | Kannada Prabha

ಸಾರಾಂಶ

ಹೈನುಗಾರಿಕೆಯಲ್ಲಿ ಹೊಸ ತಾಂತ್ರಿಕತೆ ಅಳವಡಿಸಿಕೊಂಡಾಗ ಹಾಲು ಉತ್ಪಾದನೆ ಮತ್ತಷ್ಟು ಲಾಭದಾಯಕವಾಗಲಿದೆ. ಹಸುಗಳ ಆರೋಗ್ಯ ಮತ್ತು ಸ್ವಚ್ಛತೆ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಸಾಕಾಣಿಕೆ ಮಾಡಬೇಕು ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಹೈನುಗಾರಿಕೆಯಲ್ಲಿ ಹೊಸ ತಾಂತ್ರಿಕತೆ ಅಳವಡಿಸಿಕೊಂಡಾಗ ಹಾಲು ಉತ್ಪಾದನೆ ಮತ್ತಷ್ಟು ಲಾಭದಾಯಕವಾಗಲಿದೆ. ಹಸುಗಳ ಆರೋಗ್ಯ ಮತ್ತು ಸ್ವಚ್ಛತೆ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಸಾಕಾಣಿಕೆ ಮಾಡಬೇಕು ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಹೇಳಿದರು.

ಅವರು ನಗರದ ನಂದಿನಿ ಕ್ಷೀರ ಭವನದಲ್ಲಿ ಮೇವಿನ ಅಭಿವೃದ್ಧಿ ಮತ್ತು ಸಂರಕ್ಷಣೆ ಕುರಿತು ತುಮಕೂರು ಹಾಲು ಒಕ್ಕೂಟ ಹಮ್ಮಿಕೊಂಡಿದ್ದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಆರ್ಥಿಕವಾಗಿ ಪ್ರಗತಿ ಸಾಧಿಸಬೇಕೆಂಬ ಕ್ರಿಯಾಶೀಲತೆ ಇದ್ದಾಗ ಹೈನುಗಾರಿಕೆ ಲಾಭದಾಯಕ ಉದ್ಯಮವಾಗಲಿದೆ. ನಮ್ಮ ಮನಸ್ಥಿತಿ ಗಟ್ಟಿಗೊಳಿಸಿಕೊಂಡು ಹೈನುಗಾರಿಕೆಯಲ್ಲಿ ಯಶಸ್ಸು ಸಾಧಿಸುತ್ತೇನೆ ಎಂಬ ದೃಢ ನಿರ್ಧಾರ ಯಶಸ್ವಿಯತ್ತ ಮುನ್ನಡೆಸಲಿದೆ. ಲವಣ ಮಿಶ್ರಿತ ಉತ್ತಮ ಆಹಾರ ಹಸುಗಳಿಗೆ ನೀಡಿದರೆ ಹಾಲಿನ ಉತ್ಪಾದನೆ ಹೆಚ್ಚಳವಾಗಲಿದೆ. ಹೈನುಗಾರಿಕೆ ಸಣ್ಣ ಸಣ್ಣ ರೈತರಿಗೆ ವರದಾನವಾಗುತ್ತಿದ್ದು ಹೆಚ್ಚು ಹಸುಗಳನ್ನು ಸಾಕಾಣಿಕೆ ಮಾಡುವ ಮೂಲಕ ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು. ಹಸುಗಳ ಆರೋಗ್ಯದ ಬಗ್ಗೆಯೂ ಕೂಡ ಹೆಚ್ಚು ಕಾಳಜಿ ವಹಿಸುವ ಅವಶ್ಯಕತೆ ಇದ್ದು ಅವುಗಳ ಸಂರಕ್ಷಣೆಗೆ ಕೊಟ್ಟಿಗೆಗಳನ್ನು ಸ್ವಚ್ಛತೆ ಮತ್ತು ಸುರಕ್ಷತೆಯಿಂದ ಇಡಬೇಕು.

ಈಗಾಗಲೇ ಶಿರಾ ತಾಲೂಕಿನಲ್ಲಿ ನಿತ್ಯ ೭೬ ಸಾವಿರ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು , ಪ್ರತಿನಿತ್ಯ ಒಂದು ಲಕ್ಷ ಲೀಟರ್ ಉತ್ಪಾದನೆ ಮಾಡಬೇಕೆಂಬ ನಮ್ಮ ಸಂಕಲ್ಪಕ್ಕೆ ಹಾಲು ಉತ್ಪಾದಕರು ಕೈಜೋಡಿಸಬೇಕು. ಅತಿ ಶೀಘ್ರದಲ್ಲಿಯೇ ತಿ ಹಾಲು ಉತ್ಪಾದಕರಿಗೆ ಮೂರು ಮ್ಯಾಟ್ ಗಳನ್ನು ನೀಡುವಂತಹ ಕೆಲಸ ಕಾರ್ಯಗತವಾಗಲಿದೆ. ಹಾಲು ಉತ್ಪಾದಕ ಕುಟುಂಬಗಳ ಸಂರಕ್ಷಣೆ ನಮ್ಮ ಹೊಣೆಗಾರಿಕೆಯಾಗಿದ್ದು , ೭೫ ವರ್ಷದ ಒಳಗಿನ ಹಾಲು ಉತ್ಪಾದಕ ಮೃತಪಟ್ಟರೆ ೫೦ ಸಾವಿರ ರುಪಾಯಿ ಪರಿಹಾರ, ಪಡ್ಡೆ ರಾಸು ಮೃತಪಟ್ಟರೆ ೧೦ ಸಾವಿರ ರುಪಾಯಿ ಪರಿಹಾರ, ಹುಲ್ಸುಟ್ಟರೆ, ಆಕಸ್ಮಿಕ ಬೆಂಕಿಗೆ ಸುಟ್ಟರೆ ೧೫ ಸಾವಿರ ರೂಪಾಯಿ ಪರಿಹಾರ ನೀಡುವುದರ ಜೊತೆಗೆ ಹಾಲು ಉತ್ಪಾದಕರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿದ್ದೇವೆ. ಅಲ್ಲದೆ ಉತ್ಪಾದಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಹಾಸ್ಟೆಲ್ ಸೌಲಭ್ಯ ನೀಡುವುದರ ಜೊತೆಗೆ ವಿದ್ಯಾರ್ಥಿ ವೇತನ ಕೂಡ ನೀಡಿದ್ದೇವೆ. ಗುಣಮಟ್ಟದ ಹಾಲನ್ನ ನಿತ್ಯ ಡೇರಿಗೆ ಹಾಕುವ ಮೂಲಕ ಉತ್ಪಾದಕರು ಆರ್ಥಿಕವಾಗಿ ಸದೃಢರಾಗಬೇಕೆಂಬುದೇ ನಮ್ಮ ಧ್ಯೇಯ ಎಂದರು.

ಇದೇ ಸಂದರ್ಭದಲ್ಲಿ ಖನಿಜ ಮಿಶ್ರಣ, ಜಂತುಹುಳು ನಿವಾರಣಾ ಔಷಧಿ, ಕೆಚ್ಚಲು ಬಾವು ಔಷಧಿ, ಸಮೃದ್ಧಿ ಒಳಗೊಂಡ ಕಿಟ್ ೩೦೦ ಜನ ಹಾಲು ಉತ್ಪಾದಕರಿಗೆ ವಿತರಿಸಲಾಯಿತು. ಮೇವು ಅಭಿವೃದ್ಧಿ ಮತ್ತು ಸಂರಕ್ಷಣೆ ಬಗ್ಗೆ ಸಂಪನ್ಮೂಲ ವ್ಯಕ್ತಿ ಡಾ. ಸೋಮಶೇಖರ್ ಉಪನ್ಯಾಸ ನೀಡಿದರು.

ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ಶ್ರೀನಿವಾಸ್, ಉಪ ವ್ಯವಸ್ಥಾಪಕ ಬಿ.ಗಿರೀಶ್, ವಿಸ್ತರಣಾಧಿಕಾರಿ ಚೈತ್ರ, ಮುಖಂಡರಾದ ಈ .ಶಿವಾನಂದ್, ಮುದ್ದು ಗಣೇಶ್, ಸಮಾಲೋಚಕರಾದ ಬಾಬಾ ಫಕ್ರುದ್ದೀನ್ .ಪಿ.ಎಂ, ಪ್ರವೀಣ್, ಹನುಮಂತರಾಯಪ್ಪ ಸೇರಿದಂತೆ ಹಲವಾರು ಗ್ರಾಮಗಳ ನೂರಾರು ಹಾಲು ಉತ್ಪಾದಕರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ