ರೈತರೇ ಸಂಪ್ರದಾಯಿಕ ಬೆಳೆಗಳ ಜತೆಗೆ ರೇಷ್ಮೆ ಬೆಳೆ ಅಳವಡಿಸಿಕೊಳ್ಳಿ: ಡೀಸಿ ಡಾ.ಕುಮಾರ

KannadaprabhaNewsNetwork | Published : May 15, 2025 1:55 AM
Follow Us

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿ ರೇಷ್ಮೆ ಬೆಳೆಯನ್ನು ರೈತರು ಹೆಚ್ಚು ಬೆಳೆಯಬೇಕು ಹಾಗೂ ಆರ್ಥಿಕವಾಗಿ ಸದೃಢರಾಗಬೇಕು ಎಂಬ ಉದ್ದೇಶದಿಂದ ಇಲಾಖೆ ಕಾರ್ಯಕ್ರಮ ಆಯೋಜನೆ ಶ್ಲಾಘನೀಯ. ಜಿಲ್ಲೆಯಲ್ಲಿ ಭತ್ತ ಮತ್ತು ಕಬ್ಬು ಬೆಳೆಯುವ ಜತೆಗೆ ಇತರೆ ಪರ್ಯಾಯ ಬೆಳೆ ಬೆಳೆಯಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ವಾಣಿಜ್ಯ ಬೆಳೆಯಾದ ರೇಷ್ಮೆ ಬೆಳೆಯಿಂದ ರೈತರು ಹೆಚ್ಚಿನ ಲಾಭಗಳಿಸಬಹುದು. ಸಂಪ್ರದಾಯಿಕ ಬೆಳೆಗಳ ಜತೆಗೆ ರೇಷ್ಮೆ ಬೆಳೆಯನ್ನು ಅಳವಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಕಿವಿಮಾತು ಹೇಳಿದರು.

ನಗರದ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ರೇಷ್ಮೆ ಇಲಾಖೆಯಿಂದ ಆಯೋಜಿಸಿದ್ದ ಜಿಲ್ಲೆಯ ರೇಷ್ಮೆ ಬೆಳೆಗಾರರ ತಾಂತ್ರಿಕ ಸಮಾವೇಶ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ರೇಷ್ಮೆ ಬೆಳೆಯನ್ನು ರೈತರು ಹೆಚ್ಚು ಬೆಳೆಯಬೇಕು ಹಾಗೂ ಆರ್ಥಿಕವಾಗಿ ಸದೃಢರಾಗಬೇಕು ಎಂಬ ಉದ್ದೇಶದಿಂದ ಇಲಾಖೆ ಕಾರ್ಯಕ್ರಮ ಆಯೋಜನೆ ಶ್ಲಾಘನೀಯ ಎಂದರು.

ಜಿಲ್ಲೆಯಲ್ಲಿ ಭತ್ತ ಮತ್ತು ಕಬ್ಬು ಬೆಳೆಯುವ ಜತೆಗೆ ಇತರೆ ಪರ್ಯಾಯ ಬೆಳೆ ಬೆಳೆಯಬೇಕು. ಒಂದೇ ರೀತಿಯ ಬೆಳೆಗಳನ್ನು ಬೆಳೆದಷ್ಟು ಮಣ್ಣಿನ ಫಲವತ್ತತೆ ಕಡಿಮೆಯಾಗುವ ಸಾಧ್ಯತೆ ಹೆಚ್ಚು. ರೇಷ್ಮೆ ಸೇರಿದಂತೆ ಇತರೆ ಬೆಳೆಯಬೇಕು ಎಂದರು.

ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರು ಹಾಗೂ ರೇಷ್ಮೆ ನಿರ್ದೇಶಕ ಎಂ.ಬಿ.ರಾಜೇಶ್ ಗೌಡ ಮಾತನಾಡಿ, ರಾಜ್ಯದಲ್ಲಿಯೇ ಹೆಚ್ಚು ಕೃಷಿಕರನ್ನು ಹೊಂದಿರುವ ಜಿಲ್ಲೆ ಮಂಡ್ಯ. ಇಲ್ಲಿನ ರೈತರಿಗೆ ರೇಷ್ಮೆ ಉತ್ಪಾದನೆ ಮಾಡುವಂತೆ ಪ್ರೋತ್ಸಾಹಿಸಿದರೆ ಉತ್ತಮ ಲಾಭವನ್ನು ಕಾಣಬಹುದು ಎಂದರು.

ರಾಜ್ಯದ ಕೃಷಿ ಮಾರುಕಟ್ಟೆಯಲ್ಲಿ ರೇಷ್ಮೆ ಮಾರುಕಟ್ಟೆಯನ್ನು ಒಳ್ಳೆಯ ಮಟ್ಟಕ್ಕೆ ತರಬೇಕೆಂಬ ಉದ್ದೇಶದೊಂದಿಗೆ ಕೆಲಸ ಮಾಡಲಾಗುತ್ತಿದೆ. ಸಣ್ಣ ರೈತರು ಸಹ ರೇಷ್ಮೆ ಬೆಳೆಯನ್ನು ಬೆಳೆದು ಲಾಭಗಳಿಸಬಹುದು ಎಂದರು.

ತಾಂತ್ರಿಕ ಉಪನ್ಯಾಸ ನೀಡಿದ ಕೋಲಾರದ ಪ್ರಗತಿಪರ ರೇಷ್ಮೆ ಬೆಳೆಗಾರರಾದ ಸಿ.ಎಲ್.ನಾಗರಾಜು, ರೇಷ್ಮೆ ಉತ್ಪಾದನೆ ವಿಭಿನ್ನವಾದದ್ದು, ರೇಷ್ಮೆ ಬೆಳೆ ಕುರಿತು ತಾಂತ್ರಿಕ ಮಾಹಿತಿಗಳನ್ನು ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ರೇಷ್ಮೆ ಇಲಾಖೆ ತಾಂತ್ರಿಕ ಸಮಾವೇಶ ನಡೆಸುತ್ತಿರುವುದು ಮೆಚ್ಚುವ ವಿಷಯ ಎಂದರು.

ರೇಷ್ಮೆ ಬೆಳೆಗಾರರರಿಗೆ ರೇಷ್ಮೆ ಹುಳುಗಳ ಸಾಕಾಣಿಕೆ, ಅವುಗಳಿಗೆ ನೀಡಬೇಕಾದ ಸ್ಥಳಾವಕಾಶ, ಗೂಡುಗಳ ನಿರ್ವಹಣೆ, ರೇಷ್ಮೆ ಹುಳು ಸಾಕಾಣಿಕೆಯಲ್ಲಿ ಮನೆ ನಿರ್ಮಾಣ, ಸೋಂಕು ನಿವಾರಣೆ ಮತ್ತು ಹಿಪ್ಪುನೇರಳೆಯನ್ನು ಬಾಧಿಸುವ ನುಸಿಪೀಡೆ ಮತ್ತು ಅದರ ನಿರ್ವಹಣೆಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ರೇಷ್ಮೆ ಇಲಾಖೆ ಉಪನಿರ್ದೇಶಕ ಬಿ.ಪುಟ್ಟಸ್ವಾಮಿ, ರೇಷ್ಮೆ ಇಲಾಖೆ ಅಪರ ನಿರ್ದೇಶಕರಾದ ವೈ.ಟಿ. ತಿಮ್ಮಯ್ಯ, ಸರ್ಕಾರಿ ಬಿತ್ತನೆ ಕೋಠಿ, ರೇಷ್ಮೆ ಉಪನಿರ್ದೇಶಕ ಡಿ.ಸೋಮಣ್ಣ, ರೇಷ್ಮೆ ಹುಳು ವಿಭಾಗದ ಮುಖ್ಯಸ್ಥರಾದ ಡಾ.ಎನ್.ಬಿ.ಜ್ಯೋತಿ ಹಾಗೂ ಸಿ.ಎಸ್.ಆರ್ ಮತ್ತು ಟಿ. ಐ ನ ವಿಜ್ಞಾನಿ ಡಾ. ಮಹಿಬಾ ಹೆಲನ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರಾದ ರವಿಕುಮಾರ, ಉಪಸ್ಥಿತರಿದ್ದರು.