ರಾಣಿಬೆನ್ನೂರು: ಚೌಧರಿ ಚರಣಸಿಂಗ್ ಅವರು ದೇಶದಲ್ಲಿ ಪ್ರಚಲಿತವಾಗಿದ್ದ ಜಮೀನ್ದಾರ ಪದ್ಧತಿ ಹೋಗಲಾಡಿಸಿ ಉಳುವವನೆ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ತರುವ ಮೂಲಕ ಬಡ ರೈತರ ಪಾಲಿಗೆ ಅನ್ನದಾತರಾದರು ಎಂದು ತಹಸೀಲ್ದಾರ್ ಆರ್.ಎಚ್. ಭಾಗವಾನ ಹೇಳಿದರು. ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಮಂಗಳವಾರ ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್ ಜನ್ಮ ದಿನದ ಪ್ರಯುಕ್ತ ಏರ್ಪಡಿಸಿದ್ದ ರೈತ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಸಹಜ ಕೃಷಿ ರೈತ ರಾಘವ ಮಾತನಾಡಿ, ಜಪಾನ್ ದೇಶದಲ್ಲಿ ರೈತರು ಉಳುಮೆ ಕೈಗೊಳ್ಳುವುದಿಲ್ಲ. ಗೊಬ್ಬರ, ಕೀಟನಾಶಕ ಬಳಸುವುದಿಲ್ಲ. ಕಳೆ ನಿರ್ಮೂಲನೆ ಮಾಡುವುದಿಲ್ಲ. ಹೀಗಾಗಿ ರೈತರು ಪಾರಂಪರಿಕ ಕೃಷಿ ಪದ್ಧತಿ ಅಳವಡಿಸಿಕೊಂಡಲ್ಲಿ ವಿಷ ವರ್ತುಲದಿಂದ ಹೊರ ಬರಲು ಸಾಧ್ಯ. ರೈತರಿಗೆ ಕತ್ತೆ ಹಾಗೆ ದುಡಿದು ಬೆವರು ಸುರಿಸುವುದು ಸಲ್ಲದು. ಕಂಪನಿಯ ಗುಲಾಮರಂತೆ ನಾವು ಕೆಲಸ ಮಾಡುತ್ತಿದ್ದೇವೆ. ಕೃಷಿಯಲ್ಲಿ ಬದಲಾವಣೆ ಮಾಡಿದರೆ ರಾಜನಂತೆ ಬದುಕಬಹುದು. ನಮ್ಮಂತಹ ಜೀವನವನ್ನು ರಾಜಕಾರಣಿ, ಸಿನಿಮಾ ನಟ ಮಾಡಲು ಆಗುವುದಿಲ್ಲ. ನಮ್ಮ ದೇಶದಲ್ಲಿ ರೈತನನ್ನು ಹೊರತುಪಡಿಸಿ ಉಳಿದವರೆಲ್ಲ ತಮ್ಮ ಉತ್ಪನ್ನಗಳಿಗೆ ದರ ನಿಗದಿ ಪಡಿಸುತ್ತಾರೆ. ಆದರೆ ರೈತ ಕಷ್ಟಪಟ್ಟು ಬೆಳೆದ ಉತ್ಪನ್ನಗಳಿಗೆ ದರ ನಿರ್ಧಾರ ಮಾಡುವುದಿಲ್ಲ. ಅದರೆ ನಾನು ಮಾತ್ರ ದರ ನಿಗದಿ ಮಾಡುತ್ತೇನೆ. ಸಹಜ ಕೃಷಿ ಜೊತೆಯ ಬದುಕು ಸಹಜವಾಗಿದ್ದರೆ ಉತ್ತಮ. ನಮ್ಮ ಮನೆಯನ್ನು ನಾವೇ ಕಟ್ಟಿಕೊಂಡಿದ್ದೇವೆ. ನಮ್ಮಂತಹ ಉತ್ಪನ್ನಗಳನ್ನು ನಾವೆ ತಯಾರಿಸಿಕೊಳ್ಳಬೇಕು. ತೋರಿಕೆಗಾಗಿ ಉಡುವ ಬಟ್ಟೆಗಳ ಬದಲಾಗಿ ಮನಸ್ಸಿಗೆ ಹಿತವಾಗುವ ಬಟ್ಟೆಗಳನ್ನು ತಯಾರಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ಮಾತನಾಡಿ, ರೈತರು ಒಂದೇ ಬೆಳೆಗಳನ್ಬು ಬೆಳೆಯುವ ಬದಲು ವೈವಿಧ್ಯಮಯ ಬೆಳೆಗಳನ್ನು ಬೆಳೆಯಬೇಕು. ತಾಂತ್ರಿಕ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಭವಿಷ್ಯದಲ್ಲಿ ರೈತರು ಬೆಳೆಗಳಿಗೆ ಉತ್ತಮ ಬೆಲೆ ದೊರೆಯಲಿದೆ ಎಂದರು.ರೈತ ಮುಖಂಡರುಗಳಾದ ರವೀಂದ್ರಗೌಡ ಪಾಟೀಲ, ಈರಣ್ಣ ಹಲಗೇರಿ, ಹನುಮಂತಪ್ಪ ಕಬ್ಬಾರ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಸನಗೌಡ ಕೊಟೆಗೌಡ್ರ, ಉಪಾಧ್ಯಕ್ಷ ಚನ್ನಬಸಪ್ಪ ಕೊಂಬಳಿ, ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಮ್ಮ ಮಾಗನೂರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಂಜಾ ನಾಯ್ಕ, ರೇಷ್ಮೆ ಇಲಾಖೆ ವಿಸ್ತರಣಾಧಿಕಾರಿ ನರ್ಮದಾ, ಸುರೇಶ ಹೊನ್ನಪ್ಪಳವರ, ಕರಬಸಪ್ಪ ಅಗಸಿಬಾಗಿಲ, ದೇವರಾಜ ಕೋರಿ, ಬಸವರಾಜ ಮರಿಯಣ್ಣನವರ ಮತ್ತಿತರರಿದ್ದರು. ಸಮಾರಂಭದಲ್ಲಿ ರೈತರಿಗೆ ಆತ್ಮ ಸ್ಥೈರ್ಯ ತುಂಬುವ ಚಿಂತನೆಯಿಂದ ಕೃಷಿ ಸಖಿಯರು ಪ್ರದರ್ಶಿಸಿದ ನೃತ್ಯ ರೂಪಕ ಎಲ್ಲರ ಗಮನ ಸೆಳೆಯಿತು.