ಕನ್ನಡಪ್ರಭ ವಾರ್ತೆ ರಾಯಚೂರು
ರೈತರು ಜಾಗೃತರಾಗುವುದರ ಜೊತೆಗೆ ಸಂಘಟಿತರಾಗಿ ಹೋರಾಟ ನಡೆಸಬೇಕು ಆಗಮಾತ್ರ ಸಮಸ್ಯೆಗಳಿಂದ ಹೊರಬರಲು ಸಾಧ್ಯ ವಾಗುತ್ತದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.ಸ್ಥಳೀಯ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ರೈತರ ಜಾಗೃತ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಎಲ್ಲಿ ತನಕ ಜಾಗೃತಿ, ಸಂಘಟನೆ ಆಗೊಲ್ಲವೋ ಅಲ್ಲಿಯವರೆಗೂ ಮೋಸ ಹೋಗುತ್ತಲೆಯೇ ಇರುತ್ತಾರೆ. ಸಮಾಜದಲ್ಲಿ ರೈತರ ಹೆಸರಿನಲ್ಲಿ ಸಾಕಷ್ಟು ಸಂಘಟನೆಗಳಿಗೆ ಆದರೆ ಅವರ ಹಿತವನ್ನು ಕಾಯು ವಂತಹ ಸಂಘಟನೆಯಲ್ಲಿ ರೈತರು ತೊಡಗಿಕೊಳ್ಳಬೇಕು ಎಂದರು.ಆಡಳಿತ ನಡೆಸುವ ಸರ್ಕಾರಗಳಿಂದ ರೈತರ ಉದ್ಧಾರ ಆಗುವುದು ಅಸಾಧ್ಯ. ರೈತರಾದವರು ರಾಜಕೀಯ ಪಕ್ಷಗಳಿಗೆ ಗುಲಾಮರಾಗಿ ಕೆಲಸ ಮಾಡುವುದನ್ನು ಬಿಡಬೇಕು. ಸ್ವಾವಲಂಬಿಗಳಾಗಿ ಬದುಕುವುದನ್ನು ರೂಡಿಸಿಕೊಳ್ಳಬೇಕು ಎಂದ ಅವರು ಹಸಿರು ಶಾಲು ಹಾಕಿ ಕೊಂಡ ರೈತರು ಅದಕ್ಕೆ ಗೌರವ ಕೊಡುವ ಕೆಲಸವನ್ನು ಮಾಡಬೇಕು. ಹಸಿರು ಶಾಲು ಹಾಕಿಕೊಂಡು ಮಟ್ಕಾ, ಜೂಜು, ಮದ್ಯ ಇತರೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದು. ರೈತರು ಸಂಘಟಿತರಾಗಿ ಜಾಗೃತರಾಗುವುದರಿಂದ ಅವರುಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗಲಿದ್ದು, ಈ ಹಿನ್ನೆಲೆಯಲ್ಲಿ ಶಿಸ್ತುಬದ್ಧ ಹಾಗೂ ನ್ಯಾಯಯುತ ಸಂಘಟನೆ ಮಾಡಲು ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹನುಂತಪ್ಪ ಶ್ರೀಹರಿ ಮಾತನಾಡಿ, ಜಿಲ್ಲೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಬೆಳೆಯಲಾಗುತ್ತದೆ, ಅದೇ ರೀತಿ ಭತ್ತಿ ಹಾಗೂ ವಾಣಿಜ್ಯ ಬೆಳೆಯಾದ ಮೆಣಸಿಕ ಕಾಯಿ ಬೆಳೆಗಳನ್ನು ರೈತರು ಹೆಚ್ಚಾಗಿ ಬೆಳೆಯುತ್ತಾರೆ. ಈ ಭಾಗದಲ್ಲಿ ಕೃಷಿಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಅನೇಕ ರೀತಿಯಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ರೈತರು ಸಹ ಅವುಗಳನ್ನು ಅರಿತುಕೊಂಡು ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ವಿವಿಯ ಪ್ರಾಧ್ಯಾಪಕ ಪ್ರೊ.ಅಜಯಕುಮಾರ, ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಾರ್ಜುನ ನಾಯಕ, ಮುಖಂಡರಾದ ಸಾಜೀದ್, ಸಂಗಮೇಶ, ತಾಯಪ್ಪ ಶಿವಂಗಿ, ಶಂಕರರೆಡ್ಡಿ, ಮಸ್ತಾನ ನಾಯಕ,ಖಾನಾಪುರ, ಸಾದೀಕ್ ಹುಸೇನ್ ಸೇರಿ ವಿವಿಧ ಪ್ರದೇಶಗಳಿಂದ ಭಾಗವಹಿಸಿದ್ದ ರೈತರು, ಕೃಷಿ ವಿದ್ಯಾರ್ಥಿಗಳು ಇದ್ದರು.