ರಾಣಿಬೆನ್ನೂರು: ಕಡಿಮೆ ದರಕ್ಕೆ ಬೀಜ ಸಿಗುತ್ತದೆ ಎಂದು ರೈತರು ಖರೀದಿಸಿ ನಷ್ಟ ಅನುಭವಿಸುವ ಬದಲು ಗುಣಮಟ್ಟದ ಬೀಜ ಖರೀದಿ ಮಾಡಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ರೈತರಿಗೆ ತಿಳಿಹೇಳಿದರು.ನಗರದ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಆವರಣದಲ್ಲಿ ಸೋಮವಾರ ಕಳಪೆ ಬೀಜ ಮಾರಾಟಗಾರರ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಹಿನ್ನೆಲೆ ನಡೆದ ಸಭೆಯಲ್ಲಿ ಮಾತನಾಡಿದರು.
ಎರಡು ಹೊತ್ತಿನ ಊಟಕ್ಕೆ ಪರಿತಪಿಸುವ ರೈತರು ಕಳಪೆ ಬಿತ್ತನೆ ಬೀಜದಿಂದ ನಷ್ಟ ಅನುಭವಿಸುವಂತಾಗಿದೆ. ಈ ವಿಷಯದಲ್ಲಿ ಅಧಿಕಾರಿಗಳು ತಪ್ಪಿತಸ್ಥ ಬೀಜ ಮಾರಾಟಗಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಹಾಗೂ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗದಂತೆ ಕಾಳಜಿ ವಹಿಸಬೇಕು ಎಂದರು.ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ರಾಣಿಬೆನ್ನೂರು ನಗರ ಬೀಜೋತ್ಪಾದನೆಗೆ ಹೆಸರುವಾಸಿಯಾಗಿದ್ದು, ಕಳಪೆ ಬೀಜದಿಂದಾಗಿ ಅದಕ್ಕೆ ಚ್ಯುತಿ ಬಂದಂತಾಗಿದೆ. ಈಗಾಗಲೇ ಕಳಪೆ ಬೀಜ ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿದ್ದು, ಲೆಸೆನ್ಸ್ ರದ್ದು ಮಾಡಲು ಪತ್ರ ಬರೆಯಲಾಗಿದೆ. 66 ಸಾಂಪಲ್ ಡ್ರಾ ಮಾಡಿ ಕಳಿಸಲಾಗಿದೆ. ಶೀಘ್ರದಲ್ಲಿಯೇ ಕೃಷಿ ವಿಶ್ವವಿದ್ಯಾಲಯದ ತಂಡ ಕಳಪೆ ಬಿತ್ತನೆ ಬೀಜ ಬಿತ್ತಿ ಹಾನಿಗೊಳಗಾದ ರೈತರ ಹೊಲಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಲಿದೆ. ಕಾನೂನು ಪ್ರಕಾರ ಕೆಲಸ ಮಾಡಲಾಗುವುದು. ಇದಕ್ಕೆ ರೈತರ ಸಹಕಾರ ಮುಖ್ಯವಾಗಿದೆ ಎಂದರು. ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ನ್ಯಾಯಾಲಯದ ಹೊರಗಡೆ ರೈತರಿಗೆ ಪರಿಹಾರ ಕೊಡಿಸುವ ವ್ಯವಸ್ಥೆಯಾಗಬೇಕು. ಸರ್ಕಾರಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಈ ರೀತಿಯಾಗಿದೆ. ಅದಕ್ಕಾಗಿ ಸರ್ಕಾರವೇ ಪರಿಹಾರ ನೀಡಬೇಕು ಎಂದರು. ಜಂಟಿ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ, ಎಎಸ್ಪಿ ಲಕ್ಷ್ಮಣ ಶಿರಕೋಳ, ಡಿವೈಎಸ್‌ಪಿ ಲೋಕೇಶ, ತಹಸೀಲ್ದಾರ್ ಆರ್.ಎಚ್. ಭಾಗವಾನ, ಉಪ ಕೃಷಿ ನಿರ್ದೇಶಕ ಕರಿಯಲ್ಲಪ್ಪ ಡಿ.ಕೆ., ಸಹಾಯಕ ಕೃಷಿ ನಿರ್ದೇಶಕ ಶಾಂತಮಣಿ ಜಿ., ಹಾವೇರಿ ಕೃಷಿ ವಿಚಕ್ಷಣ ದಳದ ಸಹಾಯಕ ಕೃಷಿ ನಿರ್ದೇಶಕ ಅಧಿಕಾರಿ ಮಾರುತಿ ಹಂಗರಗಟ್ಟಿ, ರೈತ ಮುಖಂಡ ಈರಣ್ಣ ಹಲಗೇರಿ ಮತ್ತಿತರರಿದ್ದರು.ತಪ್ಪಿತಸ್ಥ ವರ್ತಕರ ವಿರುದ್ಧ ಕ್ರಮ: ಜಿಲ್ಲಾಧಿಕಾರಿರಾಣಿಬೆನ್ನೂರು: ಕಳಪೆ ಬಿತ್ತನೆ ಬೀಜ ಬಿತ್ತನೆ ಮಾಡಿ ಹಾನಿಗೊಳಗಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 283 ಅರ್ಜಿಗಳು ಬಂದಿದ್ದು, ಇದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.ನಗರದಲ್ಲಿ ಸೋಮವಾರ ಕನ್ನಡಪ್ರಭ ಜತೆ ಮಾತನಾಡಿದ ಅವರು, ಪ್ರಕರಣ ಕುರಿತು ಪೂರಕ ದಾಖಲೆಗಳು ಬೇಕು. ವಿಧಿ ವಿಜ್ಞಾನ ಪರಿಶೀಲನೆ ನಡೆಸಬೇಕು. ರೈತರು ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಸರ್ಕಾರದ ಪರಿಹಾರದ ಬಗ್ಗೆ ಸರ್ಕಾರಕ್ಕೆ ಮುಟ್ಟಿಸಬೇಕು. ಕಳಪೆ ಬೀಜ ಮಾರಾಟ ಮಾಡಿದ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲು ವಿಚಕ್ಷಣ ದಳ ನೋಟಿಸ್ ಕೊಡಬೇಕು. ಕೃಷಿ ಇಲಾಖೆ ವತಿಯಿಂದ ತಪ್ಪಿತಸ್ಥ ವರ್ತಕರ ವಿರುದ್ಧ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.