ಲಕ್ಷ್ಮೇಶ್ವರ: ಸಮೀಪದ ಗೊಜನೂರು ಗ್ರಾಮದ ಅಶೋಕ ಸೊರಟೂರ ಅವರು ಜಮೀನಿನಲ್ಲಿ ಕೃಷಿ ಇಲಾಖೆ ಮತ್ತು ಸಿಜೆಂಟಾ ಕಂಪನಿ ಆಶ್ರಯದಲ್ಲಿ ಎನ್‌ಕೆ ೬೧೧೦ ತಳಿ ಗೋವಿನಜೋಳ ಬೆಳೆ ಕ್ಷೇತ್ರೋತ್ಸವ ಶನಿವಾರ ನಡೆಯಿತು.
ಕಾರ್ಯಕ್ರಮಕ್ಕೆ ಕೃಷಿ ಅಧಿಕಾರಿ ಚಂದ್ರು ನರಸಮ್ಮನವರ ಅವರು ಚಾಲನೆ ನೀಡಿ ಮಾತನಾಡಿ, ಮೊದಲು ರೈತರು ಕೃಷಿ ಪದ್ಧತಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಮಳೆ, ಬೀಜ ಬಿತ್ತನೆ ಮಿತಿ, ಕಾಲಕಾಲಕ್ಕೆ ಅವುಗಳಿಗೆ ನೀಡುವ ನಿರ್ವಹಣೆಯ ಮೂಲಕ ಬೆಳೆಗಳಿಗೆ ರೋಗಬಾಧೆ ಕಡಿಮೆ ಇತ್ತು. ಆದರೆ ಇತ್ತೀಚೆಗೆ ಸರಿಯಾದ ನಿರ್ವಹಣೆಯ ಕೊರತೆ ಅಥವಾ ಮಾಹಿತಿ ತಿಳಿವಳಿಕೆ ಕೊರತೆಯಿಂದ ಬೆಳೆಗಳಿಗೆ ರೋಗಬಾಧೆ ಕಾಣಿಸಿಕೊಂಡು ಇಳುವರಿ ಕುಂಠಿತವಾಗುವ ಸಾಧ್ಯತೆ ಇತ್ತು. ಈ ಬಾರಿ ಗೋವಿನಜೋಳದ ಪ್ರದೇಶ ಹೆಚ್ಚಾಗಿದೆ. ಎಲ್ಲೆಡೆ ಉತ್ತಮ ಬೆಳೆ ಬಂದಿದೆ. ಆದರೆ ರೈತರು ಕಡಿಮೆ ವೆಚ್ಚದ ಬೆಳೆ ಎಂದು ಗೋವಿನಜೋಳದ ಬೆಳೆಗೆ ಅವಲಂಬಿತರಾಗುತ್ತಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಆಹಾರ ಧಾನ್ಯಗಳ ಕೊರತೆ ಉಂಟಾಗಬಹುದು. ಅದಕ್ಕಾಗಿ ಇರುವ ಭೂಮಿಯಲ್ಲಿಯೇ ಗೋವಿನಜೋಳ, ಏಕದಳ, ದ್ವಿದಳ ಧಾನ್ಯ ಇತ್ಯಾದಿಗಳನ್ನು ಬೆಳೆಯಬೇಕು. ಕಾಲಕಾಲಕ್ಕೆ ಕೃಷಿ ಇಲಾಖೆಯನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿದರು.ಕೃಷಿಕ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಚನ್ನಪ್ಪ ಷಣ್ಮುಖಿ ಮಾತನಾಡಿ, ರೈತರು ಕೃಷಿಯಲ್ಲಿನ ನ್ಯೂನತೆಗಳ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಂಡು ನೂತನ ತಾಂತ್ರಿಕತೆಗಳೊಂದಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯಬೇಕು ಎಂದು ಹೇಳಿದರು.
ವರ್ತಕ ನಾಗರಾಜ ಬಟಗುರ್ಕಿ, ವಿರೂಪಾಕ್ಷಗೌಡ ಪಾಟೀಲ, ಹೊಳಲೇಶ ಕರೆಣ್ಣವರ, ರುದ್ರಪ್ಪ ಮರೂಡಿ, ವಿರೂಪಾಕ್ಷಗೌಡ ದೇಸಾಯಿ, ನಿಂಗಪ್ಪ ಬಡಿಗೇರ, ವೀರಯ್ಯ ಹಿರೇಮಠ, ಚನ್ನಪ್ಪ ಸೊರಟೂರ, ಸೋಮಣ್ಣ ಸೊರಟೂರ, ಸಿದ್ದಲಿಂಗೇಶ ಸೊರಟೂರ, ಸಿದ್ದಪ್ಪ, ಧರ್ಮರಾಜ ಮಾಂಡ್ರೆ, ಕಂಪನಿ ಪ್ರತಿನಿಧಿ ಮುತ್ತಣ್ಣ ನಾಗಣ್ಣವರ ಸೇರಿದಂತೆ ಅನೇಕರು ಇದ್ದರು.