ಸರ್ವಸದಸ್ಯರ ಸಭೆ
ಕನ್ನಡಪ್ರಭ ವಾರ್ತೆ ಹಾಸನಭವಿಷ್ಯದಲ್ಲಿ ಶ್ರೀಗಂಧ ಬೆಳೆಗಾರರಿಗೆ ಭಾರಿ ಬೇಡಿಕೆ ಬರುತ್ತದೆ. ಮತ್ತೆ ಗಂಧದ ಬೀಡು ಮರುಕಳಿಸುತ್ತಿದ್ದು, ಯಾವುದೇ ಅಡ್ಡಿ ಆತಂಕಗಳಿದ್ದರೂ ಎದೆಗುಂದದೆ ಶ್ರೀಗಂಧದ ಮರ ಬೆಳೆಸಿ ಕೋಟಿ ರು. ಗಳಿಸಬೇಕು ಎಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ ಸಲಹೆ ನೀಡಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಹಾಸನ ಜಿಲ್ಲಾ ಘಟಕ ಆಯೋಜಿಸಿದ್ದ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿ, ಭಾರತ ದೇಶದಲ್ಲಿ ಬೇಡಿಕೆ ಇದ್ದಷ್ಟು ಶ್ರೀಗಂಧ ಪೂರೈಕೆಯಾಗುತ್ತಿಲ್ಲ. ಇದಕ್ಕಾಗಿ ಹೊರದೇಶಗಳ ಮೊರೆ ಹೋಗಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಇದನ್ನು ತಪ್ಪಿಸಲು ಹಾಗೂ ರೈತಬಂದುಗಳು ಹೆಚ್ಚಿನ ಆದಾಯ ಗಳಿಸಿ ತಮ್ಮ ಅರ್ಥಿಕ ಪರಿಸ್ಥಿತಿ ಉತ್ತಮಪಡಿಸಿಕೊಳ್ಳಲು ಮತ್ತು ಪರಿಸರ ಸಮತೋಲನ ಉಳಿಸಲು ಶ್ರೀಗಂಧದ ಮರಗಳನ್ನು ಬೆಳೆಸಿರಿ ಎಂದು ಹೇಳಿದರು.ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಮತ್ತು ನಿವೃತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶರಣಪ್ಪ ಮಾತನಾಡಿ, ಶ್ರೀಗಂಧದ ಮರಗಳನ್ನು ಹೇಗೆ ರೈತರು ರಕ್ಷಿಸಿಕೊಳ್ಳಬೇಕು ಎಂಬುದರ ಕುರಿತು ವಿವರಿಸಿದರು.
ನಿವೃತ್ತ ಅರಣ್ಯಾಧಿಕಾರಿಗಳಾದ ಶಾಂತಿಗ್ರಾಮದ ಲಕ್ಷ್ಮೀನಾರಾಯಣ ,ಕೃಷಿ ಅರಣ್ಯ ರೈತರು ಮತ್ತು ಶ್ರೀಗಂಧ ಬೆಳೆಗಾರರು ಖಾಸಗಿ ಹಿಡುವಳಿ ಜಮೀನುಗಳಲ್ಲಿ ಬೆಳೆದು, ತದನಂತರ ಮರಗಳನ್ನು ಕಡಿಯುವ ಕುರಿತು ಅನುಸರಿಸಬೇಕಾದ ಕಾನೂನುಗಳು, ಪ್ರಸ್ತುತ ಚಾಲ್ತಿಯಲ್ಲಿರುವ ಸರ್ಕಾರದ ಆದೇಶಗಳು, ವಿನಾಯಿತಿಗೆ ಒಳಪಟ್ಟ ಮರಗಳು ಹಾಗೂ ಸದ್ಯದ ಶ್ರೀಗಂಧದ ಮಾರುಕಟ್ಟೆ ಮುಂತಾದ ಹಲವಾರು ಉಪಯುಕ್ತ ಮಾಹಿತಿಗಳನ್ನು ರೈತರಿಗೆ ತಿಳಿಸಿದರು.ಮುಖ್ಯೋಪಾದ್ಯಾಯ ಬಿ.ಡಿ.ಶಂಕರೇಗೌಡ ಅವರ ನಾಡಗೀತೆ ಮತ್ತು ರೈತಗೀತೆಯೋಂದಿಗೆ ಕಾರ್ಯಕ್ರಮ ಆರಂಭವಾಯಿತು. ಪ್ರಾಸ್ತಾವಿಕವಾಗಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಡಿ.ಕುಮಾರ್ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹೆರಗು ವಾಸುದೇವ್, ರಾಜ್ಯಸಭಾ ಮಾಜಿ ಸದಸ್ಯ ಜವರೇಗೌಡ, ಹಿರಿಯ ರೈತಪರ ಹೋರಾಟಗಾರ ಮಂಜುನಾಥ್ ದತ್ತ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಮ್.ಮೋಹನ್ ಕುಮಾರ್, ಹಾಸನ ಆಕಾಶವಾಣಿ ನಿಲಯದ ನಿರ್ದೇಶಕ ವಿಜಯ್ ಅಂಗಡಿ, ಪ್ರಗತಿಪರ ರೈತರಾದ ಗಿಡ್ಡೇಗೌಡ, ಹೊಯ್ಸಳ ಅಪ್ಪಾಜಿ, ಅನುಗನಾಳು ಕೃಷ್ಣಮೂರ್ತಿ, ಕಾಡು ಕೃಷಿಕರ ಶಾಲೆಯ ಸೋಮಶೇಖರ, ಲಕ್ಷ್ಮಿಬಲರಾಮೇಗೌಡ, ಇಂದಿರಾಕುಮಾರ್, ಚಿಕ್ಕಡಲೂರು ಬೋರಣ್ಣಗೌಡ, ರೈತಪರ ಪ್ರವೀಣ್, ಬಾಗೇಶಪುರ ಸಿದ್ದಣ್ಣ, ಮಲ್ಲಣ್ಣ ಇದ್ದರು. ಸಂಘಟನಾ ಕಾರ್ಯದರ್ಶಿ ಕರಿಕ್ಯಾತನಹಳ್ಳಿ ತುಳಸಿರಾಜ್ ಸ್ವಾಗತಿಸಿದರು. ಕಾರ್ಯದರ್ಶಿ ಜಿ. ರವಿಕುಮಾರ್ ದೂತನೂರು ಕಾವಲು ವಂದಿಸಿದರು.