ಕನ್ನಡಪ್ರಭ ವಾರ್ತೆ ಮದ್ದೂರು
ರೈತರು ಜಮೀನುಗಳನ್ನು ತೆಕ್ಕಲು ಬೀಳಿಸದೆ ಯಾವುದಾದರೂ ಒಂದು ಬೆಳೆ ಬೆಳೆಯಲು ಮುಂದಾಗುವ ಮೂಲಕ ಮಣ್ಣಿನ ಫಲವತತ್ತೆ ಹೆಚ್ಚಿಸುವಂತೆ ಶಾಸಕ ಕೆ.ಎಂ.ಉದಯ್ ತಿಳಿಸಿದರು.ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದಲ್ಲಿ ಕೃಷಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಹಯೋಗದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ 2025ನೇ ಸಾಲಿನ ಕೃಷಿ ಕವಚ ಕಾರ್ಯಕ್ರಮದಡಿ ಕಂದಕ ಬದು ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಬೇಸಿಗೆ ಹಂಗಾಮಿನಲ್ಲಿ ತಾಲೂಕಿನಲ್ಲಿ ಬೆಳೆ ಮಾಡದೆ ಉಳಿದಿರುವ ಸುಮಾರು 3280 ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಪೂರ್ವ ಮಂಗಾರಿನಲ್ಲಿ ಬಿತ್ತನೆ ಮಾಡಲು ಅನುಕೂಲವಾಗುವಂತೆ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿಯೂ ಹೆಸರು, ಉದ್ದು, ಅಲಸಂದೆ, ಬಿತ್ತನೆ ಬೀಜವನ್ನು ದಾಸ್ತಾನು ಮಾಡಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.ಸರ್ಕಾರ ರೈತರಿಗೆ ಹಲವು ಯೋಜನೆ ನೀಡುತ್ತಿದೆ. ಇದರ ಸದ್ಬಳಕೆ ಮಾಡಿಕೊಂಡು ಉತ್ತಮ ರೀತಿಯಲ್ಲಿ ಬೆಳೆ ಬೆಳೆಯುವ ಮೂಲಕ ಮಾದರಿಯಾಗಬೇಕು. ಅಧಿಕಾರಿಗಳು ರೈತರಿಗೆ ಸೂಕ್ತ ಸಲಹೆ ಮತ್ತು ತರಬೇತಿ ನೀಡಬೇಕೆಂದು ತಿಳಿಸಿದರು.
ಬದುಗಳ ಮೇಲೆ ಕೃಷಿ ಬೆಳೆಗಳಾದ ಅಲಸಂದೆ, ಎಳ್ಳು, ತೋಗರಿ, ಹೆಸರು, ಉದ್ದು, ಶೇಂಗಾ, ಚಂಬೆ, ಅಪ್ಸೆಣೆಬು, ಸಿರಿಧಾನ್ಯ ಬೆಳೆಗಳು, ಅರಣ್ಯ ಸಸಿಗಳು, ತೋಟಗಾರಿಕೆ ಬೆಳೆ ಬೆಳೆಯಬಹುದು. ಬದುಗಳ ಸ್ಥಿರತೆ ಹಾಗೂ ಬಾಳಿಕೆಯನ್ನು ಹೆಚ್ಚಿಸಿ ಹೆಚ್ಚುವರಿ ಲಾಭಗಳಿಸಬಹುದಾಗಿದೆ ಎಂದರು.ಈ ವೇಳೆ ಸಹಾಯಕ ಕೃಷಿ ನಿರ್ದೇಶಕಿ ಪ್ರತಿಭಾ, ಕೃಷಿ ಅಧಿಕಾರಿಗಳಾದ ರೂಪ, ದಯಾನಂದ, ಕರುಣ, ಕೃಷ್ಣೇಗೌಡ, ವಿವಿದ್ಧೋದೇಶ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಪ್ಪಾಜಿಗೌಡ್ರು, ಮುಖಂಡರಾದ ಮುತ್ತುರಾಜು, ಶಿವಕುಮಾರ್, ಮಹದೇವ, ಅಂಕಪ್ಪ, ಮಹದೇವ, ಬಸವ, ರವಿ ಇದ್ದರು.