ಕಾರವಾರ: ಎಲ್ಲ ಸಮಸ್ಯೆಗಳಿಗೆ ಸಾವು ಒಂದೇ ಅಂತಿಮ ಪರಿಹಾರವಲ್ಲ. ದೇಶಕ್ಕೆ ಅನ್ನ ನೀಡುವ ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂಥ ಕಠಿಣ ನಿರ್ಧಾರ ಕೈಗೊಳ್ಳಬಾರದು. ನಿಮ್ಮ ಎಲ್ಲ ಸಮಸ್ಯೆಗಳಿಗೆ ಜಿಲ್ಲಾಡಳಿತ ಸಂಪೂರ್ಣ ನೆರವು ನೀಡಲಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರೈತರ ಆತ್ಮಹತ್ಯೆ ಪ್ರಕರಣ ಕುರಿತ ವಿಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 2019ರಿಂದ 2023- 24ನೇ ಸಾಲಿನ ವರೆಗೆ 43 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಮುಂಡಗೋಡ ತಾಲೂಕಿನಲ್ಲಿ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಂಡರೆ ಅವರ ಕುಟುಂಬ ಸಾಕಷ್ಟು ಸಂಕಷ್ಟ ಅನುಭವಿಸುವುದರಿಂದ ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಹಾದಿ ತುಳಿಯಬಾರದು ಎಂದರು.ಸರ್ಕಾರ ಮತ್ತು ಜಿಲ್ಲಾಡಳಿತ ಸದಾ ರೈತರೊಂದಿಗಿದ್ದು, ರೈತರಿಗೆ ಯಾವುದೇ ಸಮಸ್ಯೆ ಎದುರಾದರೆ ಸ್ಥಳೀಯ ತಹಸೀಲ್ದಾರರಿಗೆ, ಜಿಲ್ಲಾಡಳಿತಕ್ಕೆ ಅಥವಾ ಜಿಲ್ಲಾ ಉಚಿತ ಸಹಾಯವಾಣಿ 1950ಕ್ಕೆ ಕರೆ ಮಾಡಿ ಗಮನಕ್ಕೆ ತಂದಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತ ಸದಾ ಸಿದ್ದವಿದೆ ಎಂದರು.
ಬ್ಯಾಂಕ್‌ಗಳು ರೈತರಿಗೆ ನೀಡಿರುವ ಸಾಲ ವಸೂಲಿಗೆ ಸಂಬಂಧಿಸಿದಂತೆ ರೈತರು ಆರ್ಥಿಕವಾಗಿ ಸಬಲವಾಗುವರೆಗೂ ಸಾಲ ಪಾವತಿಸಲು ಒತ್ತಡ ಹಾಗೂ ಕಿರುಕುಳ ನೀಡದಂತೆ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಗಿದೆ. ಯಾವುದೇ ರೀತಿಯ ಸಹಾಯ ಬೇಕಾದಲ್ಲಿ ರೈತರು ಮುಕ್ತವಾಗಿ ತಹಶೀಲ್ದಾರ ಮೂಲಕ ಅರ್ಜಿ ಸಲ್ಲಿಸಿದ್ದಲ್ಲಿ ಆದ್ಯತೆ ಮೇಲೆ ಅಗತ್ಯ ಸಹಕಾರ ನೀಡಲಾಗುತ್ತದೆ ಎಂದರು.ಈಗಾಗಲೇ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳಿಗೆ ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ವಿತರಿಸಲಾಗಿದ್ದು, ರೈತರು ಮರಣ ಹೊಂದಿದ ನಂತರ ರೈತನ ಪತ್ನಿಗೆ ಪ್ರತಿ ತಿಂಗಳು ₹2 ಸಾವಿರ ಮಾಸಾಶನ ಹಾಗೂ ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳು ಕುಟುಂಬಕ್ಕೆ ಸಂಬಂಧಪಟ್ಟ ಇಲಾಖೆಗಳಿಂದ ತಲುಪಿಸಲಾಗಿದೆಯೇ ಎಂಬುದರ ಬಗ್ಗೆ ಆತ್ಮಹತ್ಯೆ ಮಾಡಿಕೊಂಡ ಕುಟುಂಬ ಸದಸ್ಯರಿಂದ ಖಾತರಿಪಡಿಸಿಕೊಂಡ ಜಿಲ್ಲಾಧಿಕಾರಿ, ಪ್ರತಿ ತಿಂಗಳು ಮಾಸಾಶನ ರೈತರ ಪತ್ನಿಯ ಖಾತೆಗೆ ಜಮಾವಾಗಿರುವ ಬಗ್ಗೆ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಹಾಗೂ ಉಚಿತ ವಿದ್ಯಾಭ್ಯಾಸ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಎಲ್ಲ ರೈತರು ತಮ್ಮ ಜಮೀನಿನ ಪಹಣಿಗೆ ಆಧಾರ್ ಜೋಡಣೆ ಮಾಡಿಕೊಳ್ಳುವ ಮೂಲಕ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳ ಲಾಭ ಪಡೆಯಬಹುದು ಎಂದರು.ರೈತರು ಆತ್ಮಹತ್ಯೆಯ ಸಂದರ್ಭದಲ್ಲಿ ಪಂಚನಾಮೆ ವರದಿಯ ಜತೆ ರೈತರ ಕುಟುಂಬದ ಬೇಡಿಕೆ ವರದಿಯನ್ನು ಲಗತ್ತಿಸಿ ಸಲ್ಲಿಸುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಕಂದಾಯ, ತೋಟಗಾರಿಕೆ ಹಾಗೂ ಕೃಷಿ ಇಲಾಖೆಗಳು ರೈತರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವಂತೆ ತಿಳಿಸಿದರು.
ಇತ್ತೀಚಿಗೆ ಮಾನಸಿಕ ಖಿನ್ನತೆ, ಆರ್ಥಿಕ ಒತ್ತಡ, ಸಾಲಬಾಧೆ ಮುಂತಾದ ಕಾರಣಗಳಿಂದ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದ ಟೆಲಿ ಮನಸ್ ಉಚಿತ ಸಹಾಯವಾಣಿ 14416ಕ್ಕೆ ಕರೆ ಮಾಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ರೈತರು ಕೂಡ ಈ ದೂರವಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ ಮತ್ತಿತರರು ಇದ್ದರು.