ಹೊಸಪೇಟೆ: ಮುಂಗಾರು ಹಂಗಾಮು ಹಿನ್ನೆಲೆಯಲ್ಲಿ ಬಿತ್ತನೆ ಕೃಷಿ ಚಟುವಟಿಕೆ ಆರಂಭವಾಗಿದ್ದು, ಯಾವುದೇ ರೀತಿಯ ಬಿತ್ತನೆ ಬೀಜ, ರಸಗೊಬ್ಬರ ಅಭಾವ ಎದುರಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ನಿರ್ದೇಶಿಸಿದರು.
ಕೃತಕ ಅಭಾವ ಸೃಷ್ಟಿಸುವ ವರ್ತಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಬೇಕು. ಜುಲೈ ಮೊದಲ ವಾರದಿಂದ ಮುಂಗಾರು ಹಂಗಾಮು ಮಳೆಗಾಲ ಆರಂಭವಾಗಲಿದೆ. ಈಗಾಗಲೇ ಜಿಲ್ಲಾದ್ಯಂತ ಕೃಷಿ ಚಟುವಟಿಕೆಗಳು ಭರದಿಂದ ಸಾಗುತ್ತಿವೆ. ಪ್ರಸಕ್ತ ಸಾಲಿನಲ್ಲಿ ಭತ್ತ 13827 ಎಕರೆ ಪ್ರದೇಶದಲ್ಲಿ ಭಿತ್ತನೆಗೆ ಗುರಿ ಹೊಂದಿದ್ದು, ಈ ಪೈಕಿ ಕೇವಲ 2230 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಜೋಳ ಎಂಟು ಸಾವಿರ ಎಕರೆಯಲ್ಲಿ ಬಿತ್ತನೆ ಗುರಿಯಲ್ಲಿ 3161 ಎಕರೆಯಲ್ಲಿ, ರಾಗಿ 14000 ಬಿತ್ತನೆ ಗುರಿಗೆ 570, ಮುಸುಕಿನಜೋಳ 207591 ಎಕರೆ ಪ್ರದೇಶದಲ್ಲಿ ಭಿತ್ತನೆಗೆ ಗುರಿ ಹೊಂದಿತ್ತಾದರೂ 70696 ಹಾಗೂ ಸಜ್ಜೆ ಐದು ಸಾವಿರ ಎಕರೆಯಲ್ಲಿ ಬಿತ್ತನೆ ಗುರಿಗೆ ಕೇವಲ 53 ಎಕರೆ ಪ್ರದೇಶದಲ್ಲಿ ಬಿತ್ತನೆ ಸೇರಿ ಒಟ್ಟು 249638 ಎಕರೆ ಬಿತ್ತನೆ ಪ್ರದೇಶ ಗುರಿ ಪೈಕಿ ಮುಂಗಾರು ಮಳೆ ಕೊರತೆಯಿಂದಾಗಿ 76710 ಪ್ರದೇಶದಲ್ಲಿ ಬಿತ್ತನೆ ಮಾಡುವ ಮೂಲಕ ಶೇ.30ರಷ್ಟು ಮಾತ್ರ ಪ್ರಗತಿ ಸಾಧಿಸಿದೆ ಎಂದರು.
ಈ ವೇಳೆ ಕೃಷಿ ಇಲಾಖೆಯ ಅಧಿಕಾರಿಗಳು ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೇಡಿಕೆಗಾಗಿ ಯೂರಿಯಾ, ಡಿಎಪಿ ಇನ್ನಿತರ ರಸಗೊಬ್ಬರ ಸೇರಿ ಒಟ್ಟು 133543 ಮೆಟ್ರಿಕ್ ಟನ್ ಬೇಡಿಕೆ ಇದ್ದು, ಅದರಂತೆ ಪ್ರಸ್ತುತ 74538 ಮೆಟ್ರಿಕ್ ಟನ್ ದಾಸ್ತಾನು ಮಾಡಲಾಗಿದೆ. ಅದರಲ್ಲಿ ಈವರೆಗೆ 49776 ಮೆಟ್ರಿಕ್ ಟನ್ ಗೊಬ್ಬರ ರೈತರಿಗೆ ವಿತರಿಸಿದ್ದು, 24762 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನಿದೆ ಎಂದರು.ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಸಾಲ ಪಡೆಯಲು ಬಯಸುವ ರೈತರು ಕಡ್ಡಾಯವಾಗಿ ಬೆಳೆ ವಿಮೆಯಡಿ ಅಧಿಸೂಚಿತ ಬೆಳೆಗೆ ನೋಂದಾಯಿಸಿಕೊಳ್ಳಲು ಯಾವುದೇ ಬ್ಯಾಂಕುಗಳಲ್ಲಿ ಸಾಲ ಅಥವಾ ಕೃಷಿ ಸಾಲ ಮಂಜೂರಾಗಿರುವುದಿಲ್ಲ. ಸ್ವಯಂಘೋಷಣೆ ಸಲ್ಲಿಸಬೇಕು. ಬೆಳೆ ವಿಮೆ ಮಾಡಿಸಲು ಜೋಳ, ತೊಗರಿ, ಸೂರ್ಯಕಾಂತಿ, ಮುಸುಕಿನ ಜೋಳ, ಹತ್ತಿ ಮತ್ತು ಈರುಳ್ಳಿ ಬೆಳೆಗಳಿಗೆ ಜುಲೈ 31 ಹಾಗೂ ಭತ್ತ, ರಾಗಿ, ನವಣೆ, ಹುರುಳಿ, ನೆಲಗಡಲೆ ಹಾಗೂ ಸಜ್ಜೆ ಬೆಳೆಗಳಿಗೆ ಆಗಸ್ಟ್ 14 ಕೊನೆಯ ದಿನವಾಗಿದೆ.