ಎಂ. ಪ್ರಹ್ಲಾದ ಕನಕಗಿರಿ
ಹೌದು, ಮಳೆಯಾಶ್ರಿತ, ಹೆಚ್ಚು ಕುರುಚಲು, ಗುಡ್ಡಗಾಡು ಪ್ರದೇಶವನ್ನು ಕನಕಗಿರಿ ತಾಲೂಕಿನ ಒಳಗೊಂಡಿದೆ. ಈ ಪೈಕಿ ಹಿರೇಮಾದಿನಾಳ, ಚಿಕ್ಕಮಾದಿನಾಳ, ರಾಮದುರ್ಗಾ ಸುತ್ತಮುತ್ತ ಗುಡ್ಡಗಾಡಿನಿಂದ ಕೂಡಿದ್ದು, ಇಲ್ಲಿ ವಿಜಯನಗರ, ಬಾದಾಮಿಯ ಚಾಲುಕ್ಯರ ಕಾಲದ ಅನೇಕ ಕುರುಹುಗಳು ಇಲ್ಲಿವೆ.
ಈ ನಡುವೆ ಶಿಲಾಯುಗದ ಆದಿಮಾನವರು ಸತ್ತ ಹಿರಿಯರ ಸ್ಮರಣಾರ್ಥವಾಗಿ ಸಮಾಧಿ ಮಾಡಿದ ನಂತರ ೮ ರಿಂದ ೧೦ ಅಡಿ ಎತ್ತರ ನಾಲ್ಕು ದಿಕ್ಕುಗಳಲ್ಲಿ ಶಿಲಾ ಬಂಡೆ ನೆಟ್ಟು ಮೆಲ್ಭಾಗದಲ್ಲಿ ಚಪ್ಪಡಿ ಆಕಾರದ ಕಲ್ಲಿನಿಂದ ಶಿಲಾ ಸಮಾಧಿ ನಿರ್ಮಿಸುವ ಸಂಪ್ರದಾಯ ಆದಿಮಾನವರ ಕಾಲದಲ್ಲಿತ್ತು. ಇದೇ ಮಾದರಿಯ ಶಿಲಾ ಸಮಾಧಿಗಳು ಗಂಗಾವತಿಯ ಹಿರೇ ಬೆಣಕಲ್ ಪ್ರದೇಶದ ನೂರಾರು ಶಿಲಾ ಸಮಾಧಿಗಳ ನೆಲೆಯ ಪ್ರತಿರೂಪವಾಗಿ ಕನಕಗಿರಿ ತಾಲೂಕಿನ ಹಿರೇಮಾದಿನಾಳ ಗುಡ್ಡದ ಪ್ರದೇಶದಲ್ಲಿ ಮೂರು ಮೊರೇರ ನೆಲೆಗಳಿವೆ. ಈ ಗ್ರಾಮದಿಂದ ಆಗೋಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಳೇ ಮಾರ್ಗದಲ್ಲಿ ಈ ಮೊರೇರ ಸಮಾಧಿಗಳ ತಾಣ ನೋಡಬಹುದಾಗಿದೆ.ಮೂರು ನೆಲೆಗಳ ಪೈಕಿ ಸುಮಾರು ೩೦ಕ್ಕೂ ಹೆಚ್ಚು ಶಿಲಾಸಮಾಧಿಗಳಿವೆ ಎಂದು ಅಂದಾಜಿಸಲಾಗಿದ್ದು, ಇದೀಗ ಅವು ನೆಲಸಮವಾಗಿವೆ. ಅದೃಷ್ಟ ಎಂಬಂತೆ ಸಂಶೊಧನೆಗೆ ಒಂದೇ ಶಿಲಾಸಮಾಧಿ ಉಳಿದುಕೊಂಡಿದೆ. ಮೊರೇರ ಕಾಲದ ಶಿಲಾ ಸಮಾಧಿಗಳು ಗಂಗಾವತಿ ತಾಲೂಕಿನ ಹಿರೇ ಬೆಣಕಲ್ ಬಳಿಕ ಕನಕಗಿರಿ ತಾಲೂಕಿನ ಹಿರೇ ಮಾದಿನಾಳದವರೆಗೆ ಆವರಿಸಿಕೊಂಡಿರುವುದಕ್ಕೆ ಶೋಧಕರಲ್ಲಿ ಶೋಧನಾ ಉತ್ಸಾಹಕ್ಕೆ ಸಾಕ್ಷಿಯಾಗಿದೆ. ಅಲ್ಲದೇ ಇಲ್ಲಿ ಕಲ್ಲು ಬಂಡೆಗಳು ಹೆಚ್ಚಿರುವ ಪರಿಣಾಮ ಗವಿ ಚಿತ್ರಗಳು ಸೇರಿದಂತೆ ಶಿಲಾಯುಗದ ನಾನಾ ಕುರುಹುಗಳು ಪತ್ತೆಯಾಗುವ ಸಾಧ್ಯತೆಗಳಿವೆ.
ಮೊರೇರ ಕಲ್ಲು ಎಂಬ ಖ್ಯಾತಿ: ಮೂರು ಸಾವಿರಕ್ಕೂ ಅಧಿಕ ಹಳೆಯದಾದ ಈ ಸಮಾಧಿಗಳು ಕಾಲ-ಕಾಲಕ್ಕೆ ನೆಲಸಮವಾಗಿವೆ. ಇನ್ನೂ ಕೆಲವು ಕುರಿಗಾಹಿಗಳು ಕೆಡವಿದ್ದು, ಈಗ ಒಂದೇ ಶಿಲೆಯ ಸಮಾಧಿ ಉಳಿದಿದೆ. ಹೀಗೆ ನೆಲಕಚ್ಚಿ ತುಂಡಾದ ಕಲ್ಲುಗಳನ್ನು ಮೂರು ಸೈಟ್‌ಗಳಲ್ಲಿ ಕಾಣ ಸಿಗಲಿವೆ. ತುಂಡಾದ ಕಲ್ಲುಗಳನ್ನು ಜಮೀನಿನ ಬದುವಿಗೆ ಸಾಲಾಗಿ ಜೋಡಿಸಲಾಗಿದೆ. ಇಲ್ಲಿ ನೀರು ಸಂಗ್ರಹ ತೊಟ್ಟಿ, ಗುಹೆ, ವಾಸಿಸಲು ಬೃಹದಾಕಾರದ ಕಲ್ಲು ಬಂಡೆ ಇವೆ. ಈ ನೆಲೆಯುಳ್ಳ ಪ್ರದೇಶಕ್ಕೆ ಮೊರೇರ ಕಲ್ಲು ಎಂದು ಕರೆಯಲಾಗುತ್ತದೆ.
ಹಿರೇಬೆಣಕಲ್ ಹಾಗೂ ಹಿರೇಮಾದಿನಾಳ ಪ್ರದೇಶವು ಆದಿ ಸಂಸ್ಕೃತಿಯ ಆಡುಂಭೋಲಾಗಿದೆ. ವಿಶೇಷವಾಗಿ ಕಬ್ಬಿಣಯುಗ ಬೃಹತ್ ಶಿಲಾಯುಗ ಸಂಸ್ಕೃತಿಯ ನೂರಾರು ಶಿಲಾಸಮಾಧಿಗಳು ಇಲ್ಲಿ ಕಂಡುಬರುತ್ತವೆ. ಹಿರೇಬೆಣಕಲ್ ಹೊರತು ಹಿರೇಮಾದಿನಾಳ ಮೊರೇರಗುಡ್ಡ ಸಹ ಮಹತ್ವದ ನೆಲೆಯಾಗಿದೆ. ಇಲ್ಲಿ ಮೂರು ಕಡೆ ಸಮಾಧಿ, ಹತ್ತಾರು ಕಡೆ ಗವಿಚಿತ್ರ, ಕೊರೆದ ಚಿತ್ರಗಳಿವೆ. ಆದರೆ ಬಹಳಷ್ಟು ನಾಶವಾಗಿರುವುದು ವಿಪರ್ಯಾಸ. ಉಳಿದ ಸಮಾಧಿಗಳನ್ನಾದರೂ ರಕ್ಷಿಸಿಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಗಂಗಾವತಿ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ತಿಳಿಸಿದ್ದಾರೆ.