ಅನ್ನದಾನೇಶ್ವರ ಮಠದ ಸೇವೆ ಸಮಾಜಕ್ಕೆ ಮಾದರಿ

KannadaprabhaNewsNetwork |  
Published : Jul 03, 2026, 02:30 AM IST
ಹನುಮಸಾಗರದಲ್ಲಿ ಗುರುವಾರ ಶ್ರೀ ಅನ್ನದಾನೇಶ್ವರ ಶಿಲಾಮಂಟಪದ ಗೋಪುರ ಕಳಸಾರೋಹಣ, ಲೋಕಾರ್ಪಣೆ ಹಾಗೂ ನೂತನ ಶಾಲಾ ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಅನ್ನದಾನೇಶ್ವರ ಮಠವು ಒಂದು ಸಮಾಜಕ್ಕೆ ಸೀಮಿತವಾದ ಸಂಸ್ಥೆಯಲ್ಲ

ಹನುಮಸಾಗರ: ಶಿಕ್ಷಣ ಎಂದರೆ ಕೇವಲ ಅಕ್ಷರ ಜ್ಞಾನವಲ್ಲ. ಸಂಸ್ಕಾರ, ಸಂಸ್ಕೃತಿ ಹಾಗೂ ಗುರುಪರಂಪರೆಯ ಮೌಲ್ಯಗಳನ್ನು ಕಲಿಸುವುದೇ ನಿಜವಾದ ಶಿಕ್ಷಣ. ಅಂತಹ ಶಿಕ್ಷಣದ ಮೂಲಕ ಉತ್ತಮ ಪ್ರಜೆಗಳು ರೂಪುಗೊಳ್ಳಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಶ್ರೀ ಅನ್ನದಾನೇಶ್ವರ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಗುರುವಾರ ನಡೆದ ಶ್ರೀ ಅನ್ನದಾನೇಶ್ವರ ಶಿಲಾಮಂಟಪದ ಗೋಪುರ ಕಳಸಾರೋಹಣ, ಲೋಕಾರ್ಪಣೆ ಹಾಗೂ ನೂತನ ಶಾಲಾ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಅನ್ನದಾನೇಶ್ವರ ಮಠವು ಒಂದು ಸಮಾಜಕ್ಕೆ ಸೀಮಿತವಾದ ಸಂಸ್ಥೆಯಲ್ಲ. ಎಲ್ಲ ಸಮಾಜದ ಜನರ ಆಶಾಕಿರಣವಾಗಿ ಬೆಳೆಯುತ್ತಿರುವ ಈ ಮಠವು, ಧರ್ಮ ಹಾಗೂ ಸಮಾಜಸೇವೆಯ ಮೂಲಕ ಎಲ್ಲ ಭಕ್ತರ ಬದುಕಿನಲ್ಲಿ ಬೆಳಕು ಮೂಡಿಸಿದೆ. ''''''''ಇದು ನಮ್ಮದು'''''''' ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು. ಗುರುಪರಂಪರೆಯ ಆದರ್ಶಗಳನ್ನು ಪಾಲಿಸಿಕೊಂಡು ಸಮಾಜಮುಖಿ ಸೇವೆ ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಮಾಜಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿ, ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸುವ ಕೆಲಸವಾಗಬೇಕು. ಸಮಾಜದಲ್ಲಿ ದುಶ್ಚಟಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಯುವಜನತೆ ಯಾವುದೇ ವ್ಯಸನಗಳಿಗೆ ಒಳಗಾಗದೆ ಶಿಕ್ಷಣದ ಮೂಲಕ ಜೀವನ ರೂಪಿಸಿಕೊಳ್ಳಬೇಕು. ದಾನಿಗಳು ನೀಡುವ ನೆರವನ್ನು ಸಮಾಜದ ಅಭಿವೃದ್ಧಿಗೆ ಸದ್ಬಳಕೆ ಮಾಡಬೇಕು. ಹಿಂದಿನ ಶ್ರೀಗಳ ತ್ರಿವಿಧ ದಾಸೋಹದ ಪರಂಪರೆ ಮುಂದುವರಿಸಿ ಶಿಕ್ಷಣ, ಆರೋಗ್ಯ ಹಾಗೂ ಅನ್ನದಾಸೋಹದಂತಹ ಸೇವೆಗಳನ್ನು ವಿಸ್ತರಿಸಬೇಕು ಎಂದು ಸಲಹೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಸಂಗಯ್ಯ ವಸ್ತ್ರದ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮಠವು ಉಚಿತ ಪ್ರಸಾದ ನಿಲಯ ಪ್ರಾರಂಭಿಸಿ, ಆನಂತರ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಪ್ರಾರಂಭಿಸಿತು. 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಂಸ್ಥೆಯ ಇನ್ನಷ್ಟು ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದರು.

ಉಪನ್ಯಾಸ ನೀಡಿದ ಎಫ್.ಎನ್. ಹುಡೇದ ಅವರು, ಅನ್ನದಾನೇಶ್ವರ ಮಠವು ಧಾರ್ಮಿಕ ಜಾಗೃತಿ, ಶಿಕ್ಷಣ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವ ಕೇಂದ್ರವಾಗಿದೆ. 27ಕ್ಕೂ ಹೆಚ್ಚು ಶಾಖಾ ಮಠಗಳ ಮೂಲಕ ಸಮಾಜ ಸೇವೆ ನಡೆಸುತ್ತಿರುವ ಈ ಸಂಸ್ಥೆಯ ಶಿಲಾಮಂಟಪವು ಕೇವಲ ಕಟ್ಟಡವಲ್ಲ, ಜ್ಞಾನಮಂಟಪವಾಗಿದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮಾತನಾಡಿ, ಸಂಸ್ಥೆಯಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ಕೇವಲ ಪ್ರಮಾಣಪತ್ರಕ್ಕಾಗಿ ಶಿಕ್ಷಣ ಪಡೆಯಲು ಸ್ವಾವಲಂಬಿ ಜೀವನ ರೂಪಿಸಿಕೊಳ್ಳುವ ಶಿಕ್ಷಣ ಅತ್ಯಗತ್ಯ. ಶಿಕ್ಷಣದೊಂದಿಗೆ ಸಂಸ್ಕಾರ, ಮಾನವೀಯತೆ ಹಾಗೂ ಹೃದಯವಂತಿಕೆ ಬೆಳೆದಾಗ ಮಾತ್ರ ಯಶಸ್ಸು ಸಾಧ್ಯ. ಭಕ್ತರ ಸಹಕಾರ ಮತ್ತು ಮಹಾತಪಸ್ವಿ ಅನ್ನದಾನ ಮಹಾಸ್ವಾಮಿಗಳ ತ್ಯಾಗ, ಶ್ರಮ ಹಾಗೂ ಅಕ್ಷರದಾಸೋಹದ ಫಲವಾಗಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳೆದಿದೆ ಎಂದರು.

ಕುದರಿಮೋತಿಯ ವಿಜಯ ಮಹಾಂತ ಸ್ವಾಮೀಜಿ, ವಳಬಳ್ಳಾರಿ ಸಿದ್ಧಲಿಂಗ ಮಹಾಸ್ವಾಮೀಜಿ, ಸಂಗಯ್ಯ ವಸ್ತ್ರದ, ಎಫ್.ಎನ್. ಹುಡೇದ, ಬಸವರಾಜ ಹಳ್ಳೂರ, ಮಹಾಂತಯ್ಯ ಕೋಮಾರಿ ಇದ್ದರು. ಮಲ್ಲಯ್ಯ ಕೋಮಾರಿ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಚನ ಸಂಸ್ಕೃತಿ ಉಳಿಸಿದ ಫ.ಗು.ಹಳಕಟ್ಟಿ
ಹಿರೇಮಾದಿನಾಳ ಮೊರೇರ ಗುಡ್ಡ ಸಂಶೋಧನೆಗೆ ಹೊಸ ತಿರುವು!