ಕನ್ನಡಪ್ರಭ ವಾರ್ತೆ ರಾಮನಗರಭವಿಷ್ಯದ ದಿನಗಳು ಕೃಷಿಕರ ಪರವಾಗಿ ಇರಲಿವೆ. ಅಲ್ಲಿವರೆಗೆ ರೈತರು ಜಮೀನು ಉಳಿಸಿಕೊಂಡಿರಬೇಕು ಅಷ್ಟೆ. ಯಾವುದೇ ಕಾರಣಕ್ಕೂ ಅಭಿವೃದ್ಧಿ ಹೆಸರಿನಲ್ಲಿ ಭೂಮಿ ಕಳೆದುಕೊಳ್ಳಬಾರದು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ರೈತರಿಗೆ ಕಿವಿಮಾತು ಹೇಳಿದರು.ನಗರದ ಅರ್ಚಕರಹಳ್ಳಿ ಆದಿಚುಂಚನಗಿರಿ ಶಾಖಾ ಮಠದ ಬಿಜಿಎಸ್ ಸಭಾಂಗಣದಲ್ಲಿ ಜಿಲ್ಲೆಯ ಸಮಾನ ಮನಸ್ಕರ ವೇದಿಕೆ ಮತ್ತು ರೈತ ಬಳಗದ ವತಿಯಿಂದ ಆಯೋಜಿಸಿದ್ದ ದಿಟ್ಟ ನಡೆ ಸ್ಪಷ್ಟ ನುಡಿ ಮತ್ತು ಬೆವರಹನಿ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.ಜಾಗತಿಕ ತಾಪಮಾನ ಮತ್ತು ಕೃಷಿಯಲ್ಲಿ ಅತಿಯಾದ ರಾಸಾಯನಿಕಗಳ ಬಳಕೆಯಿಂದಾಗಿ, 2050ರ ಹೊತ್ತಿಗೆ ದೇಶದ ಸ್ಥಿತಿ 1960ರ ಪರಿಸ್ಥಿತಿಗೆ ತಲುಪಲಿದೆ. ಅಲ್ಲಿಂದ ಕೃಷಿಕರ ಪರವಾದ ದಿನಗಳು ಆರಂಭವಾಗುತ್ತದೆ. ಇದಕ್ಕಾಗಿ ರೈತರಲ್ಲಿ ಒಗ್ಗಟ್ಟು ಅಗತ್ಯ. ಇಲ್ಲಿ ಭೂಮಿ ಕೊಡುವುದಿಲ್ಲ ಎಂದು ಹೇಳಿ, ಹಣದಾಸೆಗೆ ಜಮೀನು ಮಾರಾಟ ಮಾಡಬಾರದು ಎಂದು ತಿಳಿಸಿದರು.
ರೈತಸಂಘದ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ಹೋರಾಟಗಾರರ ಬದುಕು ಹೋರಾಟದ ಜೊತೆಗೇ ಮುಗಿದು ಹೋಗುತ್ತದೆ. ಆದರೆ, ಅದು ದಾಖಲಾಗುವುದು ಕಡಿಮೆ. ಹೋರಾಟಗಾರರು ಪುಸ್ತಕಕ್ಕಿಂತ ಕರಪತ್ರಗಳನ್ನು ಬರೆಯುವುದೇ ಹೆಚ್ಚು. ಈ ವಿಷಯವನ್ನು ತಂದೆಗೂ ಹೇಳುತ್ತಿದ್ದೆ. ಹೋರಾಟದ ಅಗತ್ಯ ಮತ್ತು ಆಶಯಗಳಾದ ಸಮಾನತೆ, ಸಾಮಾಜಿಕ ನ್ಯಾಯವನ್ನು ಮುಂದಿನ ತಲೆಮಾರಿಗೆ ತಿಳಿಸಲು ಇಂತಹ ಗ್ರಂಥಗಳು ಅಗತ್ಯವಿದೆ ಎಂದರು.
ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಮಾತನಾಡಿದರು. ವೀರಭದ್ರಪ್ಪ ಬಿಸಲಹಳ್ಳಿ, ಪ್ರಾಧ್ಯಾಪಕ ಪ್ರೊ.ಕೃಷ್ಣೇಗೌಡ, ಚುಂಚನಗಿರಿ ಅರ್ಚಕರಹಳ್ಳಿ ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ, ಗೌಡಗೆರೆ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಕ್ಷೇತ್ರದ ಶ್ರೀ ಮಲ್ಲೇಶ್ ಗುರೂಜಿ, ಕೃತ್ ಅಂಡ್ ಸ್ಮಿತ್ ಫೌಂಡೇಶನ್ ಎಸ್.ಕರಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು....ಕೋಟ್ ...
ಭೂ ಸ್ವಾಧೀನ ಎಂಬುದು ಪೀಡುಗಾಗಿದ್ದು, ರಾಜಧಾನಿ ಸುತ್ತಮುತ್ತ ಇದು ಹೆಚ್ಚಾಗಿದೆ. ಶೇ 70ರಷ್ಟು ಜನರಿಗೆ ಭೂ ಸ್ವಾಧೀನ ಬೇಡ ಎಂದರೂ ದೇವನಹಳ್ಳಿ ಬಳಿ ಭೂ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ. ಅದರ ವಿರುದ್ಧ ನಡೆಯುವ ಹೋರಾಟವನ್ನು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಬೆಂಬಲಿಸಿ ರೈತರ ಜೊತೆ ನಿಲ್ಲಬೇಕು.- ಚುಕ್ಕಿ ನಂಜುಂಡಸ್ವಾಮಿ, ರೈತಸಂಘ....ಕೋಟ್ ....24ಕೆಆರ್ ಎಂಎನ್ 4.ಜೆಪಿಜಿರಾಮನಗರದ ಅರ್ಚಕರಹಳ್ಳಿ ಆದಿಚುಂಚನಗಿರಿ ಶಾಖಾ ಮಠದ ಬಿಜಿಎಸ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅತಿಥಿಗಳು ದಿಟ್ಟ ನಡೆ ಸ್ಪಷ್ಟ ನುಡಿ ಮತ್ತು ಬೆವರಹನಿ ಕೃತಿಗಳನ್ನು ಲೋಕಾರ್ಪಣೆ ಮಾಡಿದರು.