ಮಂಗಳೂರು ಸ್ಮಾರ್ಟ್‌ಸಿಟಿ ಲೋಕವೆಲ್ಲ ‘ನಾತ’ಮಯ!

KannadaprabhaNewsNetwork |  
Published : Jun 25, 2025, 12:33 AM ISTUpdated : Jun 25, 2025, 12:34 AM IST
ಬಂಟ್ಸ್‌ ಹಾಸ್ಟೆಲ್‌ ಸರ್ಕಲ್‌ನಲ್ಲಿ ದಿನಪೂರ್ತಿ ಉಕ್ಕಿ ಹರಿಯುತ್ತಿರುವ ಒಳಚರಂಡಿ | Kannada Prabha

ಸಾರಾಂಶ

ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ರಾಜಕಾಲುವೆಗಳಿಂದ ಕೃತಕ ಪ್ರವಾಹ ಒಂದೆಡೆಯಾದರೆ, ರಾಜಕಾಲುವೆಗಳಿಲ್ಲದ ಕಡೆಯೂ ನದಿಗಳೇ ನಾಚುವಂತೆ ಸ್ಮಾರ್ಟ್‌ ಸಿಟಿಯ ರಸ್ತೆಗಳಲ್ಲಿ ಪ್ರವಾಹೋಪಾದಿಯಲ್ಲಿ ನೀರು ಹರಿಯುತ್ತದೆ. ಜೂ.14ರಂದು ಸುರಿದ ಮಹಾಮಳೆಯ ಸಂದರ್ಭ ಮಹಾನಗರದ ಒಂದೇ ಒಂದು ರಸ್ತೆಯೂ ಕೃತಕ ಪ್ರವಾಹದಿಂದ ಹೊರತಾಗಿರಲಿಲ್ಲ. ಜತೆಗೆ ನಗರದೆಲ್ಲೆಡೆ ಮಲಮೂತ್ರ ಮಿಶ್ರಿತ ಒಳಚರಂಡಿಗಳು ಬಾಯ್ದೆರೆದು ಉಕ್ಕಿ ಸ್ಮಾರ್ಟ್‌ಸಿಟಿಯನ್ನು ‘ನಾತ’ಮಯಗೊಳಿಸಿವೆ!

ರಸ್ತೆಯಿಂದ ಚರಂಡಿಗೆ ಸಂಪರ್ಕ ಕೊರತೆ । ತುಂಬಿದ ಹೂಳು, ಕೃತಕ ಪ್ರವಾಹಕ್ಕೆ ಒಳಚರಂಡಿ ಕೊಳಚೆಯ ಸಾಥ್‌!

ಸಂದೀಪ್‌ ವಾಗ್ಲೆಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ರಾಜಕಾಲುವೆಗಳಿಂದ ಕೃತಕ ಪ್ರವಾಹ ಒಂದೆಡೆಯಾದರೆ, ರಾಜಕಾಲುವೆಗಳಿಲ್ಲದ ಕಡೆಯೂ ನದಿಗಳೇ ನಾಚುವಂತೆ ಸ್ಮಾರ್ಟ್‌ ಸಿಟಿಯ ರಸ್ತೆಗಳಲ್ಲಿ ಪ್ರವಾಹೋಪಾದಿಯಲ್ಲಿ ನೀರು ಹರಿಯುತ್ತದೆ. ಜೂ.14ರಂದು ಸುರಿದ ಮಹಾಮಳೆಯ ಸಂದರ್ಭ ಮಹಾನಗರದ ಒಂದೇ ಒಂದು ರಸ್ತೆಯೂ ಕೃತಕ ಪ್ರವಾಹದಿಂದ ಹೊರತಾಗಿರಲಿಲ್ಲ. ಜತೆಗೆ ನಗರದೆಲ್ಲೆಡೆ ಮಲಮೂತ್ರ ಮಿಶ್ರಿತ ಒಳಚರಂಡಿಗಳು ಬಾಯ್ದೆರೆದು ಉಕ್ಕಿ ಸ್ಮಾರ್ಟ್‌ಸಿಟಿಯನ್ನು ‘ನಾತ’ಮಯಗೊಳಿಸಿವೆ!

ನಗರದೆಲ್ಲೆಡೆ ರಸ್ತೆ ಬದಿಗಳಲ್ಲಿ ಶೋಕೇಸಿನಲ್ಲಿಟ್ಟಂತೆ ಚರಂಡಿಗಳಿವೆ. ಪಾದಚಾರಿ ಮಾರ್ಗಗಳ ಅಡಿಯಲ್ಲಿ ಚರಂಡಿ ನಿರ್ಮಿಸಿ ಅದರ ಮೇಲೆ ಬಣ್ಣಬಣ್ಣದ ಇಂಟರ್‌ಲಾಕ್‌ ಅಳವಡಿಸಿ ನಗರ ಸೌಂದರ್ಯವನ್ನು ಮೇಲ್ನೋಟಕ್ಕೆ ಇಮ್ಮಡಿಗೊಳಿಸಲಾಗಿದೆ. ಒಳಗೆ ಕತೆಯೇ ಬೇರೆ, ಇವೆಲ್ಲ ಹೆಸರಿಗಷ್ಟೇ ಚರಂಡಿಗಳು. ನೀರು ಹರಿಯುವುದು ಮಾತ್ರ ರಸ್ತೆಯಲ್ಲಿ.

ನಗರದ ಕೊಡಿಯಾಲಬೈಲ್‌, ಸಿಟಿ ಆಸ್ಪತ್ರೆ, ಜ್ಯೋತಿ, ಹಂಪನಕಟ್ಟೆ ಪ್ರದೇಶ, ಎಂಜಿ ರಸ್ತೆ, ಕೆಎಸ್‌ ರಾವ್‌ ರಸ್ತೆ, ರಥಬೀದಿ ಸೇರಿದಂತೆ ನಗರದ ಮಧ್ಯಭಾಗದ ರಸ್ತೆಗಳಲ್ಲಿ ಪ್ರವಾಹ ಉಕ್ಕಿ ಹರಿಯಲು ಚರಂಡಿಗಳ ಅಸಮರ್ಪಕ ನಿರ್ಮಾಣ, ಹಾಗೂ ಹೂಳು ತೆಗೆಯದಿರುವುದೇ ಮುಖ್ಯ ಕಾರಣ ಎಂದು ನಾಗರಿಕರು ಆರೋಪಿಸಿದ್ದಾರೆ.

ಮುಚ್ಚಿದ ಕಿಂಡಿಗಳು:

ಪಾದಚಾರಿ ಮಾರ್ಗಗಳ ಅಡಿಯಲ್ಲಿ ಚರಂಡಿ ನಿರ್ಮಾಣ ಮಾಡಿದಲ್ಲೆಲ್ಲ ಸ್ಮಾರ್ಟ್‌ ಸಿಟಿಯ ಮೊಹರು ಒತ್ತಿದ- ರಸ್ತೆಯಿಂದ ಚರಂಡಿಗೆ ನೀರಿಳಿಯುವ ಕಿಂಡಿಯನ್ನು ಅಳವಡಿಸಲಾಗಿದೆ. ಹೆಚ್ಚಿನ ಕಡೆಗಳಲ್ಲಿ ಈ ಕಿಂಡಿ ಕಸ ಕಲ್ಲುಗಳಿಂದ ಮುಚ್ಚಿಹೋಗಿದ್ದು, ಚರಂಡಿಗೆ ನೀರಿಳಿಯಲು ಜಾಗವೇ ಇಲ್ಲದಿರುವುದು ಕಂಡುಬಂದಿದೆ. ಮಳೆ ಬಂತೆಂದರೆ ಕೆರೆಯಂತಾಗುವ ಸಿಟಿ ಆಸ್ಪತ್ರೆ ಭಾಗದಲ್ಲಂತೂ ಎಲ್ಲೂ ಚರಂಡಿಗೆ ರಸ್ತೆಯಿಂದ ಸಂಪರ್ಕವನ್ನೇ ಕೊಟ್ಟಿಲ್ಲ. ರಸ್ತೆಗಳಲ್ಲಿ ನೀರು ಹರಿಯುವ ಎಲ್ಲ ಕಡೆಯೂ ಇದೇ ಸಮಸ್ಯೆ. ಕೆಲವೆಡೆ ರಸ್ತೆಯಿಂದ ಚರಂಡಿಗೆ ಸಂಪರ್ಕಿಸುವ ಕಿಂಡಿಯಂತೂ ಬಲು ಸಣ್ಣದಾಗಿದ್ದು, ನೀರು ಸರಾಗವಾಗಿ ಹರಿಯಲು ಸಾಧ್ಯವೇ ಇಲ್ಲದಂತಿದೆ.

ಜನಸಾಮಾನ್ಯರಿಗೂ ಅರ್ಥವಾಗುವಂಥ ಸಾಮಾನ್ಯ ಎಂಜಿನಿಯರಿಂಗ್‌ ವ್ಯವಸ್ಥೆ ಮಹಾನಗರ ಪಾಲಿಕೆ ಎಂಜಿನಿಯರ್‌ಗಳಿಗೇ ಗೊತ್ತಿಲ್ಲ ಎನ್ನುವುದೇ ದೊಡ್ಡ ವಿಪರ್ಯಾಸ.

ಉಕ್ಕುವ ಒಳಚರಂಡಿ:

ಅಲ್ಲಲ್ಲಿ ರಸ್ತೆ ನಡುವೆ ಉಕ್ಕುವ ಮಲಮೂತ್ರದ ಒಳಚರಂಡಿಗಳು ಸ್ಮಾರ್ಟ್‌ ಸಿಟಿಯ ಹೆಸರಿಗೇ ಕಳಂಕ ತಂದಿವೆ. ನಗರದ ಬಂಟ್ಸ್‌ ಹಾಸ್ಟೆಲ್‌ ಸರ್ಕಲ್‌ ಬಳಿ ಕೆಲ ವಾರಗಳಿಂದ ಒಳಚರಂಡಿಯ ಕೊಳಚೆ ರಸ್ತೆಯ ನಡುವೆ ಹರಿದು ತೀವ್ರ ದುರ್ನಾತ ಬೀರುತ್ತಿದ್ದರೂ ಅದನ್ನು ಸರಿಪಡಿಸಲು ಒಬ್ಬ ಜನಪ್ರತಿನಿಧಿ, ಒಬ್ಬರೇ ಒಬ್ಬ ಅಧಿಕಾರಿ ಮುಂದಾಗಿಲ್ಲ ಎನ್ನುವುದೇ ದೊಡ್ಡ ವಿಪರ್ಯಾಸ. ಜನರು ಅದರಲ್ಲೇ ಸಿಂಚನ ಮಾಡಿಸಿಕೊಳ್ಳುತ್ತಾ, ಅನಿವಾರ್ಯವಾಗಿ ಅದೇ ನೀರಿನಲ್ಲಿ ನಡೆಯುತ್ತಿದ್ದಾರೆ. ಮಳೆ ಬರುವಾಗ ಈ ಕೊಳಕು ನೀರಿನಲ್ಲಿ ಶಾಲೆ ಮಕ್ಕಳು ನೀರಾಟವಾಡುತ್ತ ತೆರಳುವ ದೃಶ್ಯಗಳಂತೂ ಅಸಹನೀಯ.ನಂತೂರು ಭಾಗದಲ್ಲಿ ಕಳೆದ 15 ದಿನಗಳಿಂದ ಮತ್ತೊಂದು ಒಳಚರಂಡಿ ಬಾಯ್ದೆರೆದು ಹರಿಯುತ್ತಿದೆ. ಅಲ್ಲಿಂದ ಕೆಳಭಾಗದಲ್ಲಿ ಭಾರತ್‌ ಗ್ಯಾಸ್‌ವರೆಗೂ ಈ ಕೊಳಚೆ ಹರಿಯುತ್ತಿದೆ. ಮಳೆಯ ಸಂದರ್ಭದಲ್ಲಂತೂ ಒಂದೂ ಬಿಡದಂತೆ ಒಳಚರಂಡಿಗಳು ಉಕ್ಕುತ್ತವೆ.

ಪ್ರತಿ ವರ್ಷ ಮಳೆಗಾಲ ಮೊದಲು ಕಟ್ಟಡಗಳ ಮಳೆ ನೀರನ್ನು ಒಳಚರಂಡಿಗೆ ಬಿಡದಂತೆ ಪಾಲಿಕೆ ಆಯುಕ್ತರು ಕಟ್ಟಪ್ಪಣೆ ಹೊರಡಿಸುವುದು ಮಾತ್ರ, ಪೂರಕವಾದ ಯಾವ ಕಠಿಣ ಕ್ರಮಗಳೂ ಜಾರಿಯಾಗುವುದಿಲ್ಲ.

------------ಕೃತಕ ಪ್ರವಾಹ ಅವ್ಯವಹಾರ ಬಯಲು ಮಾಡಿದ ಲೋಕಾಯುಕ್ತ

ಮಂಗಳೂರಿನಲ್ಲಿ ಕೃತಕ ಪ್ರವಾಹಕ್ಕೆ ಅಧಿಕಾರಿಗಳು ಕಾರಣಕರ್ತರಾಗಿರುವ ವಿಚಾರವನ್ನು ಲೋಕಾಯುಕ್ತ ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ಪಾಲಿಕೆ ಕಚೇರಿಗೆ ದಾಳಿ ನಡೆಸಿದಾಗ ಈ ವಿಚಾರ ಗೊತ್ತಾಗಿದೆ.ನಗರದ ರಾಜಕಾಲುವೆ, ತೋಡುಗಳಿಗೆ ಕಟ್ಟಡಗಳಿಂದ ಅನಧಿಕೃತವಾಗಿ ನೀರು ಹರಿಯಲು ಅವಕಾಶ ಮಾಡಿಕೊಟ್ಟು ಕೃತಕ ಪ್ರವಾಹಕ್ಕೆ ಕಾರಣವಾಗುತ್ತಿರುವುದನ್ನು ಲೋಕಾಯುಕ್ತ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಅಲ್ಲದೆ ಎಸ್‌ಟಿಪಿ ಮತ್ತು ವೆಟ್‌ವೆಲ್‌ಗಳ ನಿರ್ವಹಣೆ ಸರಿಯಾಗಿಲ್ಲ. ಅಪಾರ್ಟ್‌ಮೆಂಟ್‌ಗಳ ಕೊಳಚೆಯನ್ನು ಒಳಚರಂಡಿಗೆ ಸಂಪರ್ಕಿಸುತ್ತಿರುವುದರಿಂದ ಒಳಚರಂಡಿ ಉಕ್ಕುತ್ತಿರುವುದು, ನದಿ- ತೋಡುಗಳ ಮಾಲಿನ್ಯಕ್ಕೆ ಕಾರಣವಾಗಿದೆ ಎನ್ನುವುದೂ ಲೋಕಾ ದಾಳಿಯಲ್ಲಿ ಬಯಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು