ಸಾಗರ: ನಗರಸಭೆ ವ್ಯಾಪ್ತಿಯಲ್ಲಿ ನಕಲಿ ಹಕ್ಕುಪತ್ರ ಸೃಷ್ಟಿಸಿ ನಿವೇಶನ ಅಕ್ರಮ ಮಾರಾಟ ಮಾಡಿದ ದೂರುಗಳಿವೆ. ಅದು ನಿಜವಾಗಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ನಗರಸಭೆಯಲ್ಲಿ ಎರಡು ವರ್ಷದಿಂದ ಲೆಕ್ಕಪತ್ರ ಮಂಡಿಸಿಲ್ಲ. ಕೋಟ್ಯಾಂತರ ರುಪಾಯಿ ವಹಿವಾಟು ಇರುತ್ತದೆ. ಕಾಲಕಾಲಕ್ಕೆ ಲೆಕ್ಕಪತ್ರ ಮಂಡಿಸುವುದು ನಿಮ್ಮ ಕರ್ತವ್ಯ. ಲೋಪ ಮಾಡಿದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ. ಕೆಲವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ದೂರು ಇರುವ ಹಿನ್ನೆಲೆಯಲ್ಲಿ ಅವರನ್ನು ಬೇರೆ ಕಡೆ ವರ್ಗಾಯಿಸಲಾಗುತ್ತದೆ. ಕೆಲಸ ಮಾಡದ ನೌಕರರಿಗೆ ನೋಟಿಸ್ ಕೊಡಿ ಎಂದು ಪೌರಾಯುಕ್ತರಿಗೆ ಸೂಚನೆ ನೀಡಿದರು.
ನಗರದ ಸ್ವಚ್ಛತೆ ನನಗೆ ಅತಿಮುಖ್ಯ. ರಾಜ್ಯದ ಬೇರೆ ಬೇರೆ ಭಾಗಗಳಿಂದ, ಹೊರರಾಜ್ಯಗಳಿಂದ ಪ್ರವಾಸಿಗರು ಬರುತ್ತಾರೆ. ಊರು ಗಬ್ಬೆದ್ದು ಹೋಗಿದ್ದರೆ ಕೆಟ್ಟ ಹೆಸರು ಬರುತ್ತದೆ. ನಾನು ಬರುವಾಗ ಎಲ್ಲಾದರೂ ಸ್ವಚ್ಛತೆ ಮಾಡದೆ ಇರುವುದು ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ನಗರಸಭೆಗೆ ಉತ್ತಮ ಆದಾಯವಿದ್ದು ಜನರ ತೆರಿಗೆ ಹಣ ಸದ್ಭಳಕೆಯಾಗಬೇಕು. ನಗರದ ನಾಲ್ಕು ಭಾಗದಲ್ಲೂ ಸಂತೆ ಮೈದಾನ ಮಾಡಲು ಸೂಕ್ತ ಸ್ಥಳ ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಮನೆ ಕಂದಾಯ ಹಾಗೂ ನೀರಿನ ಕಂದಾಯವನ್ನು ಸಮರ್ಪಕವಾಗಿ ವಸೂಲಿ ಮಾಡಬೇಕು. ನಗರಸಭೆ ಅಭಿವೃದ್ಧಿಗೆ ಹಣದ ಕೊರತೆ ಆಗಬಾರದು. ಕರವಸೂಲಿಗೆ ಸಮಯ ನಿಗದಿ ಮಾಡಿಕೊಳ್ಳಿ ಎಂದರು.
ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಜಿಲ್ಲಾಧಿಕಾರಿಗಳ ಕಚೇರಿಯ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ರಂಗಸ್ವಾಮಿ, ಪೌರಾಯುಕ್ತ ಎಚ್.ಕೆ.ನಾಗಪ್ಪ ಸಭೆಯಲ್ಲಿದ್ದರು.
ನಗರಸಭೆ ವ್ಯಾಪ್ತಿಯಲ್ಲಿ ಅಕಾಲಿಕ ಮಳೆಯಿಂದ ಕೆಲವು ಕಡೆ ಮನೆ ಬಿದ್ದಿದೆ. ನಗರಸಭೆಯಿಂದ ಈತನಕ ಪರಿಹಾರ ಕೊಟ್ಟಿಲ್ಲ. ಮೂರು ದಿನದೊಳಗೆ ಪರಿಹಾರ ಕೊಡಬೇಕು. ಬಡವರಿಗೆ ಸತಾಯಿಸಿದರೆ ಸುಮ್ಮನೆ ಇರುವುದಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಧಿಕಾರಿಗಳಿ ಸೂಚಿಸಿದರು.