ಆರ್ಥಿಕ ಪ್ರಬಲರು ಸಾರ್ವಜನಿಕ ಸೇವೆಗಳಲ್ಲಿ ತೊಡಗಬೇಕು: ಚಲುವರಾಯಸ್ವಾಮಿ

KannadaprabhaNewsNetwork |  
Published : Jun 25, 2025, 12:33 AM IST
24ಕೆಎಂಎನ್ ಡಿ15 | Kannada Prabha

ಸಾರಾಂಶ

ಎಲ್ಲವನ್ನೂ ಸರ್ಕಾರದಿಂದಲೇ ಮಾಡಲು ಸಾಧ್ಯವಿಲ್ಲ. ಉದ್ದಿಮೆದಾರರು ಮತ್ತು ಆರ್ಥಿಕವಾಗಿ ಸಬಲರಾಗಿರುವವರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಬೇಕು. ಸಮುದಾಯದ ಸಹಕಾರವಿದ್ದರೆ ಸರ್ಕಾರದ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಆರ್ಥಿಕವಾಗಿ ಪ್ರಬಲರು, ಕೈಗಾರಿಕೋದ್ಯಮಿಗಳು ಶಿಕ್ಷಣ, ಆರೋಗ್ಯ ಸೇರಿದಂತೆ ಸಾರ್ವಜನಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಸಮಾಜ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತದೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕರೆ ನೀಡಿದರು.

ತಾಲೂಕಿನ ಸಂತೇಬಾಚಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಡೆಂಟಾ ವಾಟರ್ ಮತ್ತು ಇನ್ಫ್ರಾ ಸೆಲ್ಯೂಷನ್ ಲಿಮಿಟೆಡ್ ಬೆಂಗಳೂರಿನ ವತಿಯಿಂದ 1.13 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಹೆಚ್ಚುವರಿ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಎಲ್ಲವನ್ನೂ ಸರ್ಕಾರದಿಂದಲೇ ಮಾಡಲು ಸಾಧ್ಯವಿಲ್ಲ. ಉದ್ದಿಮೆದಾರರು ಮತ್ತು ಆರ್ಥಿಕವಾಗಿ ಸಬಲರಾಗಿರುವವರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಬೇಕು. ಸಮುದಾಯದ ಸಹಕಾರವಿದ್ದರೆ ಸರ್ಕಾರದ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದರು.

ಸಣ್ಣ ನೀರಾವರಿ ಇಲಾಖೆ ಸೇರಿದಂತೆ ರಾಜ್ಯದ ವಿವಿಧ ಇಲಾಖೆಗಳಲ್ಲಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಸಂತೇಬಾಚಹಳ್ಳಿಯ ಸಿ.ಮೃತ್ಯುಂಜಯಸ್ವಾಮಿ ಡೆಂಟಾ ವಾಟರ್ ಮತ್ತು ಇನ್ಫ್ರಾ ಸೆಲ್ಯೂಷನ್ ಲಿಮಿಟೆಡ್ ಬೆಂಗಳೂರಿನ ಅಧ್ಯಕ್ಷರು ಮತ್ತು ಕಾರ್ಯನಿರ್ವಾಜಕ ನಿರ್ದೇಶಕರಾಗಿ ತಮ್ಮ ಹುಟ್ಟೂರಿನ ಶಾಲೆಯನ್ನು ಸಂಸ್ಥೆಯಿಂದ ಕೋಟ್ಯಂತರ ರು. ವ್ಯಹಿಸಿ ಅಭಿವೃದ್ಧಿಪಡಿಸಿದ್ದಾರೆ ಎಂದರು.

ಸಿ.ಮೃತ್ಯುಂಜಯ ಅವರ ಸೇವೆ ಇತರರಿಗೆ ಅನುಕರಣೀಯ. ಉಳ್ಳವರು ತಮ್ಮ ಗ್ರಾಮಗಳ ಶಾಲೆ ಮತ್ತು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಜೊತೆ ಕೈಜೋಡಿಸಬೇಕು. ಈ ಕಾಲೇಜನ್ನು ಕೆಪಿಎಸ್ ಶಾಲೆಯನ್ನಾಗಿ ಪರಿವರ್ತಿಸುವ ಬಗ್ಗೆ ಶಿಕ್ಷಣ ಸಚಿವರೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಬೇಕಾದ ಜವಾಬ್ದಾರಿ ಶಿಕ್ಷಕ ಸಮುದಾಯದ ಮೇಲಿದೆ. ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಕರು ಹೆಚ್ಚು ಕಷ್ಟಪಡಬೇಕು. ಮಕ್ಕಳ ಭವಿಷ್ಯ ಉತ್ತಮಗೊಳ್ಳದಿದ್ದರೆ ದಾನಿಗಳು ನೀಡಿದ ಸಹಾಯ ನಿರುಪಯುಕ್ತಗೊಳ್ಳಲಿದೆ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಶಾಸಕ ಎಚ್.ಟಿ.ಮಂಜು ಮಾತನಾಡಿ, ಸ್ವ-ಗ್ರಾಮದ ಶಾಲೆ ಅಭಿವೃದ್ಧಿಗೆ ಅಗತ್ಯ ಕಟ್ಟಡಗಳನ್ನು ನಿರ್ಮಿಸಿಕೊಟ್ಟು ಶೈಕ್ಷಣಿಕ ಪ್ರಗತಿಗೆ ಕೈಜೋಡಿಸಿರುವ ಮೃತ್ಯುಂಜಯ ಸ್ವಾಮಿ ಅವರ ಸೇವಾಗುಣವನ್ನು ಸ್ಮರಿಸಿದರು. ತಾಲೂಕಿನ ಏತ ನೀರಾವರಿ ಯೋಜನೆಗಳಿಗೆ ಮೃತ್ಯುಂಜಯ ಅವರ ಕೊಡುಗೆ ಇದೆ. ಅಧಿಕಾರಿಗಳು ತಾವು ಹುಟ್ಟಿದ ಹಳ್ಳಿ, ಓದಿದ ಶಾಲೆಗಳ ಅಭಿವೃದ್ಧಿಗೆ ಮುಂದಾಗುವಂತೆ ಕರೆ ನೀಡಿದರು.

ಶಾಲೆಯ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಕೊಡುಗೆ ನೀಡಿದ ಮೃತ್ಯುಂಜಯಸ್ವಾಮಿ ಮತ್ತು ಅವರ ಪತ್ನಿ ಹೇಮಾ ಅವರನ್ನು ಗೌರವಿಸಲಾಯಿತು.

ಈ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್, ಜಿಪಂ ಮಾಜಿ ಸದಸ್ಯ ಕೊಡಗಹಳ್ಳಿ ಮಂಜೇಗೌಡ, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಇಒ ಕೆ.ಸುಷ್ಮಾ, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಮುಖಂಡರು ಇದ್ದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ