ಕುಂದಗೋಳ: ರೈತರು ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆಯ ವಿಮೆ ತುಂಬುವಾಗ ಏಜೆಂಟರು ಮಧ್ಯಸ್ಥಿಕೆ ವಹಿಸಿ ತಮಗೆ ಪರ್ಸೆಂಟೇಜ್ ನೀಡಬೇಕು ಎಂದು ರೈತರಿಗೆ ಮೋಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ರೈತರು ಹಣ ನೀಡಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಪಟ್ಟಣದ ಮರಾಠಾ ಭವನದಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಸೇವೆ, ಸುಶಾಸನ ದಿನ, ಬಡವರ, ಕಲ್ಯಾಣ ಮೋದಿ ಸರ್ಕಾರಕ್ಕೆ 11 ವರ್ಷ ವಿಕಸಿತ ಭಾರತ ಸಂಕಲ್ಪ ಸಭೆ ಮತ್ತು ತುರ್ತು ಪರಿಸ್ಥಿತಿ ಕರಾಳ ದಿನಗಳ ಹೋರಾಟದ 50ನೇ ವರ್ಷದ ಅನಾವರಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಇಲ್ಲಿನ ರೈತರ ಬೆಳೆ ವಿಮೆ ಬಿಡುಗಡೆಗೆ ಇದ್ದ ತೊಡಕು ನಿವಾರಿಸಿ ಪರಿಹಾರ ಬಿಡುಗಡೆ ಮಾಡಿಸಲಾಗಿದೆ. ಅದನ್ನು ರೈತರು ಮಧ್ಯಸ್ಥಿಕೆದಾರರಿಗೆ ನೀಡಬಾರದು ಎಂದು ಸೂಚಿಸಿದರು.
1971ರಲ್ಲಿ ಅಂದಿನ ಪ್ರಧಾನಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಸಂವಿಧಾನದ ಹತ್ಯೆಗೈದು ತುರ್ತು ಪರಿಸ್ಥಿತಿ ದೇಶದ ಮೇಲೆ ಹೇರಿದ್ದರು. ದೇಶದ ಕಾನೂನು ದುರುಪಯೋಗ ಮಾಡಿಕೊಂಡು ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ ಸೇರಿದಂತೆ ಕೆಲ ಪ್ರಮುಖರನ್ನು ಜೈಲಿಗೆ ಹಾಕಿದ್ದರು. ಅಲ್ಲದೆ ಕಾಂಗ್ರೆಸ್‌ನ 12 ಲಕ್ಷ ಕೋಟಿ ಕಲ್ಲಿದ್ದಲು ಹಗರಣ, 2ಜಿ ಹಗರಣ ಸೇರಿದಂತೆ ಅನೇಕ ಅವ್ಯವಹಾರಗಳನ್ನು ಮರೆಯಬಾರದು ಎಂದರು.ಪ್ರಧಾನ ಮಂತ್ರಿ ನರೇಂದ್ರ ಮೋದಿ 11 ವರ್ಷದಲ್ಲೆ ಅನೇಕ ಜನಪರ ಕಾರ್ಯ ಮಾಡಿದ್ದಾರೆ. ಪ್ರಧಾನಿಯನವರನ್ನು ತೆಗಳುವ ಸಚಿವ ಸಂತೋಷ ಲಾಡ್ ಇತಿಹಾಸದ ಪುಟಗಳನ್ನು ಸರಿಯಾಗಿ ಓದಿ ತಿಳಿದುಕೊಳ್ಳಲಿ ಎಂದರು.
ತಾಲೂಕಿನಲ್ಲಿ ಫಸಲ್ ಬಿಮಾ ಯೋಜನೆ, ರಸ್ತೆಗಳು, ಸೇತುವೆ, ಶಾಲಾ ಕೊಠಡಿಗಳು ಹಾಗೂ ಕುಂದಗೋಳ ಪಟ್ಟಣಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇವೆ. ಇನ್ನೂ ಅನೇಕ ಜನಪರ ಯೋಜನೆ ಕೇಂದ್ರ ಸರ್ಕಾರ ತಂದಿದೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.ಶಾಸಕ ಎಂ.ಆರ್.ಪಾಟೀಲ ಮಾತನಾಡಿ, ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿದ ಏಕೈಕ ಪ್ರಧಾನಿ ಇದ್ದರೆ ಅದು ನರೇಂದ್ರ ಮೋದಿಯವರು. ತಾಲೂಕಿನಲ್ಲಿ 20 ಬ್ರಿಜ್ ಕಂ ಬ್ಯಾರೇಜ್, ಆಸ್ಪತ್ರೆಗೆ ಸಲಕರಣೆ, ಒಳ್ಳೆಯ ರಸ್ತೆ, ಶಾಲೆಗಳಿಗೆ ಕೊಠಡಿ ವ್ಯವಸ್ಥೆ ಹೀಗೆ ಅನೇಕ ಜನಪರ ಕೆಲಸ ಮಾಡಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಮಾಜಿ ಜಿಲ್ಲಾಧ್ಯಕ್ಷ ಷಣ್ಮುಖ ಗುರುಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಪಪಂ ಅಧ್ಯಕ್ಷ ಶಾಮಸುಂದರ ದೇಸಾಯಿ, ಉಪಾಧ್ಯಕ್ಷ ಮಂಜು ಹಿರೇಮಠ, ಕುಂದಗೋಳ ಭಾಜಪ ಮಂಡಲ ಅಧ್ಯಕ್ಷ ನಾಗನಗೌಡ ಸಾತ್ಮಾರ, ಹುಬ್ಬಳ್ಳಿ ಮಂಡಲ ಅಧ್ಯಕ್ಷ ಷಣ್ಮುಖ ಐಹೊಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ ಶ್ಯಾಗೋಟಿ, ಶಿವಾನಂದ ಗುಂಡಗೋವಿ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಬಸವರಾಜ ಕುಂದಗೋಳಮಠ, ಈರಣ್ಣ ಜಡಿ, ರಾಘವೇಂದ್ರ ಗೌಡ್ರು ಪಾಟೀಲ್, ಜಿಲ್ಲಾ ಮಾಧ್ಯಮ ವಕ್ತಾರ ಗುರು ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.