ಕನ್ನಡಪ್ರಭ ವಾರ್ತೆ, ತುಮಕೂರುಸರ್ಕಾರಿ ಭೂ ಕಬಳಿಕೆಗೆ ಜಿಲ್ಲಾಧಿಕಾರಿಗಳು ಕಾರಣರಾಗಿದ್ದಾರೆ ಎಂದು ದೂರಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದವರು ಶುಭಾ ಕಲ್ಯಾಣ ಅವರಿಗೆ ಹಮ್ಮಿಕೊಂಡಿದ್ದ ನಾಗರಿಕ ಸನ್ಮಾನದ ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡದೆ ಹತ್ತಿಕ್ಕಿದ್ದಾರೆ.ಮಧುಗಿರಿ ತಾಲೂಕು ತುಮ್ಮಲು ಗ್ರಾಮ ವ್ಯಾಪ್ತಿಯಲ್ಲಿನ 40 ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಭೂ ಪರಿವರ್ತನೆ ಜಿಲ್ಲಾಧಿಕಾರಿಗಳು ಮಾಡಿಕೊಟ್ಟಿದ್ದಾರೆ ಎಂದು ದೂರಿ ಕೃತ್ಯದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಅಮಾನತು ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜುಲೈ 11ರವರೆಗೆ ಸರ್ಕಾರಕ್ಕೆ ಕೆಆರ್‌ಎಸ್ ಪಕ್ಷ ಗಡುವು ನೀಡಿತ್ತು.ಆದರೂ ಕ್ರಮ ಕೈಗೊಳ್ಳದ ಕಾರಣ ಕೆಆರ್‌ಎಸ್ ಪಕ್ಷದ ಎಲ್ಲ ಸೈನಿಕರೊಂದಿಗೆ ಟೌನ್‌ಹಾಲ್ ಮೂಲಕ ಡಿಸಿ ಕಚೇರಿಯವರೆಗೆ ತೆರಳಿ ಅಲ್ಲಿ, ಡಿಸಿಗೆ ಸನ್ಮಾನ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಲು ಆಯೋಜಿಸಲಾಗಿತ್ತು. ಶುಕ್ರವಾರ ಬೆಳಗ್ಗೆ 10ಗಂಟೆಗೆ ಟೌನ್‌ಹಾಲ್ ಸೇರಿದ ಕೆಆರ್‌ಎಸ್ ಪಕ್ಷ ದ ಕಾರ್ಯಕರ್ತರು ಇನ್ನೇನು ಡಿಸಿ ಕಚೇರಿಯತ್ತ ಹೊರಡುವಾಗಲೇ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು ನೇರ ಬೆಳ್ಳಾವಿ ಠಾಣೆಗೆ ಕರೆದೊಯ್ದರು. ಸಚಿವ ಕೃಷ್ಣೇಬೈರೇಗೌಡ ಅವರು ಈಗಾಗಲೇ ತನಿಖೆಗೆ ಸೂಚಿಸಿರುವ ಕುರಿತು ಮತ್ತು ಸರ್ಕಾರಿ ಜಮೀನನ್ನು ಅಕ್ರಮ ಪರಭಾರೆ ಮಾಡಿದ ದಾಖಲೆಗಳನ್ನು ನೀಡಿ ಬೆಳ್ಳಾವಿ ಠಾಣೆಯಲ್ಲಿ ಕೆ ಆರ್ ಎಸ್ ಪಕ್ಷದ ಸೈನಿಕರು ಡಿಸಿ ವಿರುದ್ಧ ಪ್ರಕರಣ ದಾಖಲಿಸಿದರು. ಡಿಸಿಗೆ ಸನ್ಮಾನ ಮಾಡಲು ಕೆಆರ್‌ಎಸ್ ಕಾರ್ಯಕರ್ತರು ಮೊರದಲ್ಲಿ ಅರಿಶಿಣಿ, ಕುಂಕುಮ, ಸೀರೆ, ಬಳೆ, ಮತ್ತು ತಾಂಬೂಲ ತಂದಿದ್ದರು. ಮಧುಗಿರಿ ತಾಲೂಕಿನ ತುಮ್ಮಲು ಗ್ರಾಮದ ಅಮೂಲ್ಯ ಸರ್ಕಾರಿ ಭೂಮಿಯನ್ನು ಕೆಲವೇ ಕೆಲವು ವ್ಯಕ್ತಿಗಳ ವೈಯಕ್ತಿಕ ಲಾಭಕ್ಕಾಗಿ ಅಕ್ರಮವಾಗಿ ಪರಭಾರೆ ಮಾಡಿರುವುದು ತೀವ್ರ ಖಂಡನೀಯ ಎಂದು ಪಕ್ಷದ ಉಪಾಧ್ಯಕ್ಷ ಜ್ಞಾನ ಸಿಂಧುಸ್ವಾಮಿ ತಿಳಿಸಿದರು. ಮಲ್ಲಿಕಾರ್ಜುನ ಭಟ್ರಹಳ್ಳಿ ಮಾತನಾಡಿ, ಈ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳಳು ನಕಲಿ ಪಹಣಿ, ಆರ್.ಟಿ.ಸಿ. ಮತ್ತು ಇತರೆ ಸುಳ್ಳು ದಾಖಲೆ ವ್ಯವಸ್ಥಿತವಾಗಿ ಸೃಷ್ಟಿಸಿರುವ ಸಾಧ್ಯತೆ ಇದೆ. ಹಿಂದಿನ ಅಕ್ರಮ ಖಾತೆ ಸಮರ್ಪಕವಾಗಿ ಪರಿಶೀಲಿಸದೆ ಹಾಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಭೂ ಪರಿವರ್ತನೆಗೆ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದರು. ಕಂದಾಯ ಇಲಾಖೆಯ ಉನ್ನತ ಅಧಿಕಾರಿಯಾಗಿ, ಸರ್ಕಾರಿ ಭೂಮಿಯ ರಕ್ಷಣೆ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವುದು ಅವರ ಪ್ರಮುಖ ಜವಾಬ್ದಾರಿಯಾಗಿರುತ್ತದೆ. ಆದಾಗ್ಯೂ, ಈ ಪ್ರಕರಣದಲ್ಲಿ ಅವರ ನಿರ್ಲಕ್ಷ್ಯ ಅಥವಾ ಉದ್ದೇಶಪೂರ್ವಕ ಸಹಕಾರವು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಆರೋಪಿಸಿದರು.ಪ್ರಕರಣದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಭಾನುಪ್ರಕಾಶ್, ಮಧುಗಿರಿ ತಹಸೀಲ್ದಾರ್ ಸಿರಿನ್ ತಾಜ್ ಮತ್ತು ಐ. ಡಿ. ಹಳ್ಳಿ ಕಂದಾಯ ಅಧಿಕಾರಿ ಚಿಕ್ಕರಾಜು ಸಹ ಸಹಕರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದು ಕೇವಲ ಒಂದು ಪ್ರತ್ಯೇಕ ಘಟನೆಯಾಗಿರದೆ, ಸರ್ಕಾರಿ ಭೂಮಿಯನ್ನು ದುರುಪಯೋಗಪಡಿಸಿಕೊಂಡು, ಸಾರ್ವಜನಿಕ ಆಸ್ತಿಯನ್ನು ಕಬಳಿಸುವ ವ್ಯವಸ್ಥಿತ ಪಿತೂರಿಯ ಭಾಗವಾಗಿರುವ ಸಾಧ್ಯತೆ ಇದೆ ಎಂದು ನಮ್ಮ ಅಭಿಪ್ರಾಯವಾಗಿದೆ. ಇಂತಹ ಅಕ್ರಮಗಳು ಸರ್ಕಾರದ ಆಡಳಿತದ ಮೇಲೆ ಸಾರ್ವಜನಿಕರಿಗಿರುವ ವಿಶ್ವಾಸವನ್ನು ಸಂಪೂರ್ಣವಾಗಿ ನಾಶಪಡಿಸುವುದಲ್ಲದೆ, ಭ್ರಷ್ಟಾಚಾರಕ್ಕೆ ಪ್ರಮುಖ ದಾರಿ ಮಾಡಿಕೊಡುತ್ತವೆ ಎಂದರು.ಸನ್ಮಾನ ಕಾರ್ಯಕ್ರಮದಲ್ಲಿ ಕೆಆರ್‌ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್. ಜೀವನ್, ರಘು ನಂದನ, ಆರೋಗ್ಯ ಸ್ವಾಮಿ, ಜಿಲ್ಲಾಧ್ಯಕ್ಷ ಶ್ರೀನಿವಾಸ್ ಮೂರ್ತಿ, ಪ್ರಧಾನ ಕಾರ್ಯದರ್ಶಿ ರಂಗನಾಥ್, ಉಪಾಧ್ಯಕ್ಷ ಪ್ರದೀಪ್ ಕುಮಾರ್, ರಾಜ್ಯ ಎಸ್. ಸಿ ಎಸ್ ಟಿ ಘಟಕದ ಕಾರ್ಯದರ್ಶಿಗಳಾದ ನರಸಿಂಹರಾಜು, ಸಿ ಎನ್, ಚೆನ್ನಯ್ಯ, ಅನುಸ್ವಾಮಿ, ಪಕ್ಷದ ಮಹಿಳಾ ಘಟಕದ ಸದಸ್ಯರು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.