ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹರಸಾಹಸ- ಬೊಮ್ಮಾಯಿ ಆರೋಪ

KannadaprabhaNewsNetwork |  
Published : Jul 11, 2025, 11:48 PM ISTUpdated : Jul 12, 2025, 12:51 PM IST
Former Karnataka CM and BJP MP Basavaraj Bommai

ಸಾರಾಂಶ

ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹರಸಾಹಸ ಮಾಡುತ್ತಿದ್ದಾರೆ. ಅವರಿಗೆ ರಾಜ್ಯದ ಜನರ ಅಭಿವೃದ್ಧಿಯಾಗಲಿ ಅಥವಾ ಸಮಸ್ಯೆಗೆ ಪರಿಹಾರ ಮಾಡಲು ಇವರು ಪ್ರಯತ್ನ ಮಾಡುತ್ತಿಲ್ಲ. ಇವರ ಕೈಯಲ್ಲಿ ರಾಜ್ಯದ ಆಡಳಿತ ಸಂಪೂರ್ಣ ಕುಸಿತವಾಗಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಗದಗ: ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹರಸಾಹಸ ಮಾಡುತ್ತಿದ್ದಾರೆ. ಅವರಿಗೆ ರಾಜ್ಯದ ಜನರ ಅಭಿವೃದ್ಧಿಯಾಗಲಿ ಅಥವಾ ಸಮಸ್ಯೆಗೆ ಪರಿಹಾರ ಮಾಡಲು ಇವರು ಪ್ರಯತ್ನ ಮಾಡುತ್ತಿಲ್ಲ. ಇವರ ಕೈಯಲ್ಲಿ ರಾಜ್ಯದ ಆಡಳಿತ ಸಂಪೂರ್ಣ ಕುಸಿತವಾಗಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಶುಕ್ರವಾರ ಸಂಜೆ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಹಿರಿಯ ರಾಜಕಾರಣಿಗಳು, ಕಳೆದ ಎರಡೂವರೆ ವರ್ಷದಿಂದ ಒಂದೇ ಮಾತು ಹೇಳುತ್ತಿದ್ದಾರೆ. ಐದು ವರ್ಷ ನಾನೇ ಪೂರ್ಣ ಮಾಡುತ್ತೇನೆ ಎಂದು ಪದೇ ಪದೇ ಹೇಳುತ್ತಿರುವ ಈ ಹೇಳಿಕೆಯೇ ಜನರ ಸಂಶಯಕ್ಕೆ ಕಾರಣವಾಗಿದೆ ಎಂದರು.

ಅವರು ಪ್ರತಿ ದಿನ ಹೇಳುವ ಅವಶ್ಯಕತೆ ಇಲ್ಲ. ದೆಹಲಿಯಲ್ಲಿ ಮಾತನಾಡಿ ಸಿಎಂ ಸ್ಥಾನ ಬಿಟ್ಟು ಕೊಡುವ ಬಗ್ಗೆ ಒಪ್ಪಂದ ಆಗಿಲ್ಲ ಎಂದಿದ್ದಾರೆ. ಒಪ್ಪಂದ ಆಗಿದೆಯೋ ಇಲ್ಲವೋ ನಮಗೆ ಗೊತ್ತಿಲ್ಲ. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಫುಲ್ ಪಾಯಿಂಟ್ ಹಾಕಬೇಕು. ರಾಹುಲ್ ಗಾಂಧಿ ಅಥವಾ ಖರ್ಗೆ ಹೇಳಬೇಕು. ಸುರ್ಜೆವಾಲಾ ಹೇಳಿದರೆ ನಡೆಯುವುದಿಲ್ಲ. ಇದು ಕಾಂಗ್ರೆಸ್‌ನ ಗಂಭೀರ ಸಮಸ್ಯೆಯಾಗಿದೆ ಎಂದರು.

ಇವರ ಕೈಯಲ್ಲಿ ರಾಜ್ಯದ ಆಡಳಿತ ಸಂರ್ಪೂಣ ಕುಸಿದಿದೆ. ಯಾರಾದರೂ ಮುಂದುವರೆಯಲಿ ನಮಗೆ ಸಮಸ್ಯೆ ಇಲ್ಲ. ಕುರ್ಚಿ ಉಳಿಸಿಕೊಳ್ಳುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯದ ಜನರ ಅಭಿವೃದ್ಧಿಯಾಗಲಿ ಅಥವಾ ಸಮಸ್ಯೆ ಪರಿಹಾರ ಮಾಡಲು ಇವರು ಪ್ರಯತ್ನ ಮಾಡುತ್ತಿಲ್ಲ. ಅಧಿಕಾರಿಗಳು ಸಂಪೂರ್ಣ ನಿಷ್ಕ್ರಿಯವಾಗಿದ್ದಾರೆ. 136 ಸೀಟು ಬಂದಿದೆ ಎಂಬ ಸೊಕ್ಕಿನಿಂದ ಆಡಳಿತ ನಡೆಸುತ್ತಿದ್ದಾರೆ. ಜನರ ಬಗ್ಗೆ ಕಾಳಜಿಯೇ ಇಲ್ಲ. ಅವರಿಗೆ ಸಮಯವೇ ಇಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣ ಕೆಟ್ಟು ಹೋಗಿದೆ. ಎಲ್ಲ ಕಡೆ ಸಮಸ್ಯೆಗಳು ಉದ್ಭವವಾಗಿದೆ. ಆರೋಗ್ಯ ಸಮಸ್ಯೆ, ಶಿಕ್ಷಣ ಸಮಸ್ಯೆ ಹೆಚ್ಚಾಗಿವೆ ಎಂದರು.

PREV
Read more Articles on