ಆಪತ್ಕಾಲದ ರಕ್ಷಣೆಗೆ ರೈತರು ಬೆಳೆ ವಿಮೆ ಕಟ್ಟಬೇಕು: ಶಾಸಕ ಎ.ಮಂಜು

KannadaprabhaNewsNetwork |  
Published : Jun 25, 2024, 12:36 AM IST
24ಎಚ್ಎಸ್ಎನ್9 : ತಾ. ಹಳ್ಳಿಮೈಸೂರು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಶಾಸಕ ಎ.ಮಂಜು ತುರ್ತು ಚಿಕಿತ್ಸಾ ವಾಹನಕ್ಕೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಬೆಳೆ ನಾಶ ಅಥವಾ ತೊಂದರೆಯಾದಲ್ಲಿ ಪಾವತಿಸಿದ ವಿಮೆ ಹಣವು ರಕ್ಷಣೆ ನೀಡಲಿದೆ. ಕೃಷಿ ಇಲಾಖೆ ವತಿಯಿಂದ ಈಗಾಗಲೇ ಪತ್ರಿಕೆಗಳಲ್ಲಿ ಮಾಹಿತಿ ನೀಡಿದ್ದು, ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಅಗತ್ಯ ಮಾಹಿತಿ ಪಡೆದು ವಿಮೆ ಮಾಡಿಸಿಕೊಳ್ಳಬೇಕು ಎಂದು ಶಾಸಕ ಎ.ಮಂಜು ಸಲಹೆ ನೀಡಿದರು. ಹೊಳೆನರಸೀಪುರದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ನೂತನ ತುರ್ತು ಚಿಕಿತ್ಸಾ ವಾಹನಕ್ಕೆ ಚಾಲನೆ ನೀಡುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದರು.

ರೈತ ಸಂಪರ್ಕ ಕೇಂದ್ರ, ಬಾಲಕರ ವಿದ್ಯಾರ್ಥಿನಿಲಯ ಉದ್ಘಾಟನೆ । ಅಂಬೇಡ್ಕರ್ ಭವನದ ಭೂಮಿ ಪೂಜೆ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಸರ್ಕಾರ ನಿಗದಿಪಡಿಸಿದ ದಿನಾಂಕದ ಒಳಗೆ, ರೈತರು ತಮ್ಮ ಬೆಳೆಗೆ ನಿರ್ದಿಷ್ಟ ಹಣ ಪಾವತಿಸಿ, ವಿಮೆ ಮಾಡಿಸಿದ್ದಲ್ಲಿ ಹವಾಮಾನ ವೈಪರೀತ್ಯದಿಂದ ಬೆಳೆದ ಬೆಳೆ ನಾಶ ಅಥವಾ ತೊಂದರೆಯಾದಲ್ಲಿ ಪಾವತಿಸಿದ ವಿಮೆ ಹಣವು ರಕ್ಷಣೆ ನೀಡಲಿದೆ. ಕೃಷಿ ಇಲಾಖೆ ವತಿಯಿಂದ ಈಗಾಗಲೇ ಪತ್ರಿಕೆಗಳಲ್ಲಿ ಮಾಹಿತಿ ನೀಡಿದ್ದು, ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಅಗತ್ಯ ಮಾಹಿತಿ ಪಡೆದು ವಿಮೆ ಮಾಡಿಸಿಕೊಳ್ಳಬೇಕು ಎಂದು ಶಾಸಕ ಎ.ಮಂಜು ಸಲಹೆ ನೀಡಿದರು.

ತಾಲೂಕಿನ ಹಳ್ಳಿಮೈಸೂರು ಗ್ರಾಮದಲ್ಲಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ, ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ಉದ್ಘಾಟನಾ ಕಾರ್ಯಕ್ರಮ, ಡಾ. ಬಿ.ಆರ್.ಅಂಬೇಡ್ಕರ್ ಭವನದ ಭೂಮಿ ಪೂಜೆ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ನೂತನ ತುರ್ತು ಚಿಕಿತ್ಸಾ ವಾಹನಕ್ಕೆ ಚಾಲನೆ ನೀಡುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಭವನವು ೨೫ ಲಕ್ಷ ರು. ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿದೆ. ೧೪ ಲಕ್ಷ ರು. ಹಣ ಬಿಡುಗಡೆಯಾಗಿದ್ದು, ನೀರಾವರಿ ಇಲಾಖೆ ಕಚೇರಿ ಅವರಣದಲ್ಲಿ ಕಟ್ಟಡದ ನಿರ್ಮಾಣ ಕಾರ್ಯ ಮಾಡಲಾಗುತ್ತದೆ. ಹಳ್ಳಿಮೈಸೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸಾ ವಾಹನವಿಲ್ಲದೆ ತೊಂದರೆಯಾಗಿತ್ತು, ಈ ಕುರಿತು ಸರ್ಕಾರದ ಗಮನ ಸೆಳೆದಾಗ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವೈದ್ಯಕೀಯ ಸಲಹೆಗಾರರು ಹಾಗೂ ಹಳ್ಳಿಮೈಸೂರು ಮೂಲದ ಎಚ್.ರವಿಕುಮಾರ್ ಅವರು ತೋರಿದ ವಿಶೇಷ ಕಾಳಜಿಯಿಂದ ತುರ್ತು ಚಿಕಿತ್ಸಾ ವಾಹನ ಸೌಲಭ್ಯ ಹಳ್ಳಿಮೈಸೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ದೊರೆತಿದೆ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೌಸರ್ ಅಹಮದ್ ಮಾತನಾಡಿ, ‘ನಮ್ಮ ಇಲಾಖೆ ವತಿಯಿಂದ ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ಕಟ್ಟಡ ಉದ್ಘಾಟನೆ ಕಾರ್ಯ ನೆರವೇರಿಸಲಾಗಿದ್ದು, ನೆಲ ಅಂತಸ್ತನ್ನು ೨ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮೊದಲ ಮಹಡಿಯನ್ನು ೧ ಕೋಟಿ ರು. ವೆಚ್ಚದಲ್ಲಿ ನಿರ್ಮಿತಿ ಕೇಂದ್ರದಿಂದ ನಿರ್ಮಿಸಲಾಗಿದೆ. ೬ನೇ ತರಗತಿಯಿಂದ ೧೦ನೇ ತರಗತಿ ತನಕ ವ್ಯಾಸಂಗಕ್ಕೆ ಅವಕಾಶವಿದ್ದು, ಸುಸಜ್ಜಿತ ಕಟ್ಟಡದ ಜತೆಗೆ ಉತ್ತಮ ವ್ಯವಸ್ಥೆಯೊಂದಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶೇ. ೭೫ ಮತ್ತು ಇತರೆ ಜಾತಿಗೆ ಶೇ. ೨೫ರಷ್ಟು ಪ್ರವೇಶಾತಿ ಇದೆ. ಮುಖ್ಯವಾಗಿ ಇದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿದ್ದು, ಕಲಿಕೆಗೆ ಅಗತ್ಯವಾದ ಲೇಖನ ಸಾಮಾಗ್ರಿ, ಪಾಠದ ಬೋಧನೆ ಹಾಗೂ ಸಮವಸ್ತ್ರ ನೀಡಲಾಗುತ್ತಿದೆ. ೮ ಸುಸಜ್ಜಿತ ಕೊಠಡಿಗಳು ಮತ್ತು ೨೦೦ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಹಳ್ಳಿಮೈಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎಸ್.ವಿಶ್ವನಾಥ್, ದಸಂಸ ರಾಜ್ಯ ಸಂಚಾಲಕ ಸೋಮಶೇಖರ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿವಿಧ ಬೇಡಿಕೆ ಈಡೇರಿಸಲು ವೈದ್ಯರ ಆಗ್ರಹ: ಶಶಿಕುಮಾರ್
ಬೇಸಿಗೆಯಲ್ಲಿ ಕುಡಿವ ನೀರಿನ ಬಗ್ಗೆ ಎಚ್ಚರವಿರಲಿ