ನರಗುಂದ: ರೈತರು ಮಣ್ಣಿನ ಆರೋಗ್ಯ ಮತ್ತು ಸಾವಯವ ಕೃಷಿ ಪದ್ಧತಿಗೆ ಪ್ರಾಮುಖ್ಯತೆ ಕೊಡಬೇಕಾಗಿದೆ. ಕೃಷಿ ಪದ್ಧತಿಯಲ್ಲಿ ವೈಜ್ಞಾನಿಕತೆ ಬೇಕಾಗಿದೆ. ಹೆಚ್ಚು ಹೆಚ್ಚು ಸಿರಿಧಾನ್ಯ ಬೆಳೆಯಬೇಕಾಗಿದೆ. ಮಣ್ಣನ್ನು ರಕ್ಷಿಸಬೇಕಾಗಿದೆ ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ ತಿಳಿಸಿದರು.
ರಾಸಾಯನಿಕ ಬಳಕೆಯಿಂದ ಭೂಮಿ, ಕೃಷಿ ಮತ್ತು ಆರೋಗ್ಯ ಹಾಳಾಗಲಿದೆ. ಮುಂಬರುವ ದಿನಗಳಲ್ಲಿ ಗೊಬ್ಬರ ಹಾಕದೇ ಬೆಳೆ ಬರಲಾರದ ಸ್ಥಿತಿ ನಿರ್ಮಾಣವಾಗಲಿದೆ. ಮಣ್ಣಿನ ಶಕ್ತಿ ಕ್ಷೀಣಿಸಲಿದೆ. ಆದ್ದರಿಂದ ಎಲ್ಲ ರೈತರು ಸಾವಯವ ಕೃಷಿಯನ್ನು ಕೈಗೊಳ್ಳಬೇಕು. ಪ್ರತಿ ಮನೆಗೊಂದು ಗೋವು ಸಾಕುವುದು ಮತ್ತು ಉಪಕಸುಬು ಮಾಡಬೇಕಾಗಿದೆ. ಇಲ್ಲವಾದಲ್ಲಿ ಮಾನವನಿಗೆ ಉಳಿಗಾಲವಿಲ್ಲ ಎಂದರು.
ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ, ರೈತರಿಗೆ ಕೃಷಿ ಮಾಡಲು ನೀರು ಅತೀ ಅವಶ್ಯವಾಗಿದೆ. ಕೃಷಿ ಮಾಡಲು ಮಳೆ ಬೇಕು. ಇಲ್ಲವಾದರೆ ಡ್ಯಾಂನಲ್ಲಿ ನೀರು ಇರಬೇಕು. ಇವೆರಡು ಇಲ್ಲವಾದರೆ ರೈತನ ಜೀವನ ಶೂನ್ಯ ಎಂದರು.ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬ್ರ.ಕು. ಪ್ರಭಕ್ಕ, ಸಿಪಿಐ ಸತ್ಯಪ್ಪ ಮಾಳಗೊಂಡ, ಕೃಷಿತಜ್ಞ ಶ್ರೀಶೈಲ ಕೆರೂರ ಮಾತನಾಡಿದರು. ಕಾರ್ಯಕ್ರಮದಲ್ಲಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪ್ರಭಕ್ಕ, ಸಿ.ಜಿ. ಖಾನಾಪೂರ, ಶಿವಪುತ್ರಪ್ಪ ಹುಂಬಿ, ಮಹಾದೇವ ಕರಿಹೊಳಿ, ಮಲ್ಲಿಕಾರ್ಜುನ ಮೇಟಿ, ಎಂ.ಬಿ. ಮೆಣಸಗಿ, ವಿ.ಎನ್. ಕೊಳ್ಳಿ, ಸುಭಾಸ ದೇವಕ್ಕಿ ಹಾಗೂ ತಾಲೂಕಿನ 33 ಗ್ರಾಮಗಳ ರೈತರು ಭಾಗವಹಿಸಿದ್ದರು. ರಾಘವೇಂದ್ರ ಗೆಜ್ಜಿ ಸ್ವಾಗತಿಸಿದರು. ಎಸ್.ಐ. ಅಂಕಲಿ ನಿರೂಪಿಸಿದರು. ಅನುಸೂಯಾ ಶಾನವಾಡ ವಂದಿಸಿದರು.