ರಟ್ಟೀಹಳ್ಳಿ ತಾಲೂಕಿನಾದ್ಯಂತ ಜು. 1ರಿಂದ 19 ಗ್ರಾಪಂ ವ್ಯಾಪ್ತಿಯಲ್ಲಿ ವಿಬಿ ಜಿ ರಾಮ್ ಜಿ ಯೋಜನೆ ಅನುಷ್ಠಾನಗೊಂಡಿದ್ದು, ಗ್ರಾಮೀಣ ಪ್ರದೇಶದ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಕಾರ್ಮಿಕರಿಗೆ ನಿರಂತರ ಕೂಲಿ ಕೆಲಸ ನೀಡಲು ಅಗತ್ಯ ಕ್ರಮವಹಿಸುತ್ತಿದ್ದೇವೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ರವಿ ಎನ್. ಹೇಳಿದರು.
ರಟ್ಟೀಹಳ್ಳಿ: ತಾಲೂಕಿನಾದ್ಯಂತ ಜು. 1ರಿಂದ 19 ಗ್ರಾಪಂ ವ್ಯಾಪ್ತಿಯಲ್ಲಿ ವಿಬಿ ಜಿ ರಾಮ್ ಜಿ ಯೋಜನೆ ಅನುಷ್ಠಾನಗೊಂಡಿದ್ದು, ಗ್ರಾಮೀಣ ಪ್ರದೇಶದ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಕಾರ್ಮಿಕರಿಗೆ ನಿರಂತರ ಕೂಲಿ ಕೆಲಸ ನೀಡಲು ಅಗತ್ಯ ಕ್ರಮವಹಿಸುತ್ತಿದ್ದೇವೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ರವಿ ಎನ್. ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ನರೇಗಾ ಯೋಜನೆಯು ಜು. 1ರಿಂದ ರದ್ದಾಗಲಿದ್ದು, ಇದೀಗ ವಿಕಸಿತ ಭಾರತ ಕಲ್ಪನೆಯೊಂದಿಗೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ ಅಜೀವಿಕಾ ಮಿಷನ್ -ಗ್ರಾಮೀಣ ಯೋಜನೆ ಅನುಷ್ಠಾನಕ್ಕೆ ಬಂದಿದ್ದು, ಒಂದು ಆರ್ಥಿಕ ವರ್ಷದಲ್ಲಿ 125 ದಿನಗಳ ಕೆಲಸ ಸಿಗಲಿದೆ. ಒಂದು ಮಾನವ ದಿನದ ಕೂಲಿ ದರ ₹382 ನಿಗದಿಪಡಿಸಿ ಕೇಂದ್ರ ಸರ್ಕಾರ ಆದೇಶಿಸಿದ್ದು, ಒಂದು ಆರ್ಥಿಕ ವರ್ಷದಲ್ಲಿ ಯೋಜನೆಯಡಿ ಕೆಲಸ ನಿರ್ವಹಿಸಿದರೆ, ₹47,750 ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದರು. ಡಿಜಿಟಲೀಕರಣದ ಮೂಲಕ ಯೋಜನೆಯನ್ನು ಮತ್ತಷ್ಟು ಪಾರದರ್ಶಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಎನ್‌ಎಂಎಂಎಸ್ ಆ್ಯಪ್ ಮೂಲಕ ಕಾರ್ಮಿಕರ ಮುಖದ ಗುರುತಿನ ಆಧಾರದಲ್ಲಿ ಹಾಜರಾತಿ ಪಡೆಯಲಿದ್ದು, ಸಣ್ಣಪುಟ್ಟ ಲೋಪ-ದೋಷಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಲಾಗುವುದು ಎಂದರು.
ಕೂಲಿ ಮತ್ತು ಸಾಮಗ್ರಿಗಾಗಿ ಕೇಂದ್ರ ಸರ್ಕಾರದದಿಂದ ಶೇ. 60 ಮತ್ತು ರಾಜ್ಯ ಸರ್ಕಾರದಿಂದ ಶೇ. 40 ಅನುದಾನದೊಂದಿಗೆ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಮತ್ತು ಕಾರ್ಮಿಕರ ಆರ್ಥಿಕ ಶಕ್ತಿ ಹೆಚ್ಚಿಸಲು, ಕುಟುಂಬದ ಜೀವನ ಮಟ್ಟ ಸುಧಾರಣೆಗೆ ಯೋಜನೆ ಸಹಕಾರಿಯಾಗಲಿದೆ. ಗ್ರಾಮದ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಾದ ಸಿಸಿ ರಸ್ತೆ, ಪಕ್ಕಾ ಗಟಾರ, ಶಾಲಾ ಕಟ್ಟಡ, ಅಂಗವಾಗಿ ಕಟ್ಟಡ, ಸ್ಟ್ರೀಟ್ ಲೈಟ್, ರೈತ ಸಂಪರ್ಕ ರಸ್ತೆ ಮತ್ತು ರೈತರ ಕಣ ಸೇರಿದಂತೆ ಹಲವು ಕಾಮಗಾರಿ ಅನುಷ್ಠಾನ ಮಾಡಬಹುದಾಗಿದೆ. ರೈತರ ಹಿತದೃಷ್ಟಿಯಿಂದ ದನದ ಕೊಟ್ಟಿಗೆ, ಎರೆಹುಳು ತೊಟ್ಟಿ, ಕೃಷಿ ಹೊಂಡ, ಕುರಿ ಶೆಡ್ ಸೇರಿದಂತೆ ಹತ್ತು ಹಲವು ಕಾಮಗಾರಿಗಳನ್ನು ಯೋಜನೆಯಡಿ ವೈಯಕ್ತಿಕವಾಗಿ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.