ರವಿ ಮೇಗಳಮನಿ
ಅಬಲೂರು ಗ್ರಾಮವನ್ನು ಪ್ರವಾಸಿ ಕೇಂದ್ರವನ್ನಾಗಿಸುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆಯಿಂದ ಈ ಕಟ್ಟಡವನ್ನು ಎರಡೂವರೆ ದಶಕಗಳ ಹಿಂದೆ ನಿರ್ಮಾಣ ಮಾಡಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಪ್ರವಾಸಿ ಮಂದಿರದ ಬಳಕೆ ಕಡಿಮೆ ಇದ್ದರೂ ಅಬಲೂರು ಗ್ರಾಮವು ತನ್ನದೇ ಆದ ಇತಿಹಾಸ ಹೊಂದಿದೆ. ಪ್ರಮುಖವಾಗಿ ಸರ್ವಜ್ಞನ ಜನ್ಮಸ್ಥಳವಾಗಿದೆ. ಬರುವ ಯಾತ್ರಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪ್ರವಾಸಿ ಮಂದಿರ ನಿರ್ಮಿಸಲಾಗಿದೆ. ಶಿಕ್ಷಣ ಇಲಾಖೆಗೆ ಸೇರಿದ ಜಮೀನಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ಪ್ರವಾಸಿ ಮಂದಿರ ಕಟ್ಟಡ ನಿರ್ಮಿಸಿ, 1999 ಏ. 6ರಂದು ಉದ್ಘಾಟಿಸಲಾಗಿದೆ.ಪ್ರಾರಂಭದಲ್ಲಿ ಎಲ್ಲ ವ್ಯವಸ್ಥಿತವಾಗಿತ್ತು. ಪೀಠೋಪಕರಣಗಳು ಸೇರಿದಂತೆ ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಕಾವಲುಗಾರರನ್ನು ನೇಮಿಸಿ ಸ್ವಚ್ಛತೆ ಕಾಪಾಡಲಾಗಿತ್ತು. ದಿನ ಕಳೆದಂತೆ ಸೂಕ್ತ ನಿರ್ವಹಣೆಯಿಲ್ಲದೆ ಅಲ್ಲಿದ್ದ ಪೀಠೋಪಕರಣಗಳು ಹಾಳಾಗಿವೆ. ನೀರು, ವಿದ್ಯುತ್ ವ್ಯವಸ್ಥೆ ಇಲ್ಲದೇ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಈ ಮಧ್ಯೆ ಕಟ್ಟಡಕ್ಕೆ ಬಣ್ಣ ಲೇಪನ ಮಾಡಿ ಕೈ ತೊಳೆದುಕೊಳ್ಳಲಾಗಿದೆ. ಕಿಟಕಿ ಗಾಜುಗಳು ಹಾಳಾಗಿವೆ, ಸ್ನಾನ ಗೃಹ, ಶೌಚಗೃಹಗಳು ಸಂಪೂರ್ಣ ಹಾಳಾಗಿವೆ. ನೀರಿನ ಪೈಪ್‌ಗಳು ಹಾಳಾಗಿ ನೀರು ಸರಬರಾಜು ಇಲ್ಲದಂತಾಗಿದೆ. ವಿದ್ಯುತ್ ಸಂಪರ್ಕವಿಲ್ಲ. ಕಟ್ಟಡದ ತುಂಬೆಲ್ಲ ಕಸ ಹರಡಿದ್ದು ಕಂಡರೆ ಯಾರೂ ಈ ವ್ಯವಸ್ಥೆ ಬಗ್ಗೆ ಹಿಡಿಶಾಪ ಹಾಕದೇ ಇರಲಾರರು. ಕಟ್ಟಡಕ್ಕೆ ಬೀಗ ಹಾಕುವ ಗೋಜಿಗೂ ಹೋಗದೇ ಇರುವುದು ವಿಪರ್ಯಾಸವೇ ಸರಿ.
ಕಟ್ಟಡ ನಿರ್ವಹಣೆಗೆ ಕ್ರಮ: ಪ್ರವಾಸಿ ಮಂದಿರ ಗ್ರಾಮೀಣ ಪ್ರದೇಶದಲ್ಲಿರುವುದರಿಂದ ಬಳಕೆ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ನಾನು ಹೊಸದಾಗಿ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಈ ಕಟ್ಟಡದ ನಿರ್ವಹಣೆ ಕುರಿತು ಮೇಲಧಿಕಾರಿಗಳಿಗೆ ತಿಳಿಸಲಾಗುವುದು. ಆನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹಿರೇಕೆರೂರು ಲೋಕೋಪಯೋಗಿ ಇಲಾಖೆ ಎಇಇ ಡಿ.ಬಿ. ಬಸವರಾಜ ಹೇಳಿದರು.