ರೈತರೇ ಅಗತ್ಯ ದಾಖಲೆ ನೀಡಿ ಪೌತಿಖಾತೆ, ಎಫ್ಐಡಿ ನೋಂದಣಿ ಮಾಡಿಸಿಕೊಳ್ಳಿ: ತಹಸೀಲ್ದಾರ್ ನಯೀಂಉನ್ನೀಸಾ

KannadaprabhaNewsNetwork | Published : Dec 29, 2023 1:31 AM

ಸಾರಾಂಶ

ಪೌತಿ ಖಾತೆ ಮಾಡಿಕೊಡಲು ಇಲಾಖೆಗೆ ಯಾವುದೇ ತೊಂದರೆ ಇಲ್ಲ. ಪೌತಿ ಖಾತೆ ಮಾಡಿಸಿಕೊಳ್ಳುವಂತೆ ವಾರಕ್ಕೊಮ್ಮೆ ಹೋಬಳಿ ಮಟ್ಟದಲ್ಲಿ ಆಂದೋಲನದ ಮೂಲಕ ಗ್ರಾಮೀಣ ಪ್ರದೇಶದ ರೈತರಿಗೆ ಅರಿವು ಮೂಡಿಸಲಾಗುತ್ತಿದೆ. ಆದರೆ, ಹಲವು ರೈತರು ವಿವಿಧ ಕಾರಣ ಕೊಟ್ಟು ಪೌತಿ ಖಾತೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ.

ಕನ್ನಡಪ್ರಭ ವಾರ್ತೆ ನಾಗಮಂಗಲ

ರೈತರು ಅಗತ್ಯ ದಾಖಲೆ ನೀಡಿ ಪೌತಿ ಖಾತೆ, ತಮ್ಮ ಜಮೀನಿನ ಎಲ್ಲಾ ಸರ್ವೇ ನಂಬರ್‌ಗಳನ್ನು ಎಫ್‌ಐಡಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ನಯೀಂಉನ್ನೀಸಾ ಮನವಿ ಮಾಡಿದರು.

ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತದಿಂದ ಗುರುವಾರ ಆಯೋಜಿಸಿದ್ದ ರೈತ ಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಲ್ಲಿ 9 ಸಾವಿರಕ್ಕೂ ಹೆಚ್ಚು ಪೌತಿಖಾತೆ ಪ್ರಕರಣಗಳು ಬಾಕಿ ಇದ್ದು, 79 ಸಾವಿರ ಎಫ್‌ಐಡಿ ನೋಂದಣಿಯಾಗಬೇಕಿದೆ ಎಂದರು.

ಪೌತಿ ಖಾತೆ ಮಾಡಿಕೊಡಲು ಇಲಾಖೆಗೆ ಯಾವುದೇ ತೊಂದರೆ ಇಲ್ಲ. ಪೌತಿ ಖಾತೆ ಮಾಡಿಸಿಕೊಳ್ಳುವಂತೆ ವಾರಕ್ಕೊಮ್ಮೆ ಹೋಬಳಿ ಮಟ್ಟದಲ್ಲಿ ಆಂದೋಲನದ ಮೂಲಕ ಗ್ರಾಮೀಣ ಪ್ರದೇಶದ ರೈತರಿಗೆ ಅರಿವು ಮೂಡಿಸಲಾಗುತ್ತಿದೆ. ಆದರೆ, ಹಲವು ರೈತರು ವಿವಿಧ ಕಾರಣ ಕೊಟ್ಟು ಪೌತಿ ಖಾತೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರೈತರ ಜಮೀನಿನ ಪ್ರತಿಯೊಂದು ಸರ್ವೇ ನಂಬರ್‌ಗಳೂ ಕೂಡ ಆಧಾರ್ ಸಂಖ್ಯೆಯೊಂದಿಗೆ ಫ್ರೂಟ್‌ ಐಡಿಯಲ್ಲಿ ಜೋಡಣೆಯಾಗಬೇಕಿದೆ. ಆದರೆ, ಭೂ ಹಿಡುವಳಿ ಹೆಚ್ಚಾಗಿ ಸಣ್ಣ ರೈತರಿಂದ ದೊಡ್ಡ ರೈತರ ಪಟ್ಟಿಗೆ ಸೇರಿಸಬಹುದೆಂಬ ಆತಂಕದಿಂದ ಹಲವು ರೈತರು ಫ್ರೂಟ್‌ಐಡಿಗೆ ಅಗತ್ಯ ಮಾಹಿತಿ ನೀಡುತ್ತಿಲ್ಲ ಎಂದರು.

ಬೆಳೆ ಪರಿಹಾರ ಸೌಲಭ್ಯ ಪಡೆಯಲು ಎಫ್‌ಐಡಿ ನೋಂದಣಿ ಕಡ್ಡಾಯವಾಗಿರುವ ಹಿನ್ನಲೆಯಲ್ಲಿ ರೈತರು ತಮ್ಮ ಹೆಸರಿನಲ್ಲಿರುವ ಎಲ್ಲಾ ಆರ್‌ಟಿಸಿಗಳನ್ನು ಎಫ್‌ಐಡಿ ನೋಂದಣಿ ಮಾಡಿಸಿಕೊಳ್ಳಲು ಮುಂದಾಗಬೇಕು. ರೈತ ಸಂಘದ ಮುಖಂಡರೂ ಸಹ ತಮ್ಮ ವ್ಯಾಪ್ತಿಯ ರೈತರಲ್ಲಿ ಈ ಕುರಿತು ಮನವರಿಕೆ ಮಾಡಿಕೊಡಬೇಕು ಎಂದರು.

ರೈತ ಸಂಘದ ಮುಖಂಡರು ಮಾತನಾಡಿ, ತಾಲೂಕು ಕಚೇರಿಯಲ್ಲಿ ರೈತರ ಕೆಲಸ ಕಾರ್ಯಗಳು ಸಮರ್ಪಕವಾಗಿ ಆಗುತ್ತಿಲ್ಲ. ಹಳ್ಳಿಗಳಲ್ಲಿ ಕೂಲಿ ಕೆಲಸವನ್ನು ಬಿಟ್ಟು ಪ್ರತಿನಿತ್ಯ ತಮ್ಮ ಕೆಲಸ ಕಾರ್ಯಗಳಿಗಾಗಿ ರೈತರು ತಾಲೂಕು ಕಚೇರಿಗೆ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಈ ಅವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ತಾಲೂಕಿನ ಹಲವು ಗ್ರಾಮಗಳಲ್ಲಿ ಕಳೆದ ಮೂರ್‍ನಾಲ್ಕು ದಶಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಂದ ಕಿಮ್ಮತ್ತು ಕಟ್ಟಿಸಿಕೊಳ್ಳಲಾಗಿದೆ. ಆದರೂ ಸಹ ಈವರೆಗೂ ಅಂತಹ ರೈತರಿಗೆ ಆರ್‌ಟಿಸಿ ಇಂಡೀಕರಣ ಮಾಡಿಕೊಟ್ಟಿಲ್ಲ. ಇದರಿಂದಾಗಿ ರೈತರಿಗೆ ಆತಂಕ ಹೆಚ್ಚಾಗಿದೆ ಎಂದರು.

ಕಂದಾಯ ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಿದ್ದರೂ ಸಹ ತಾಲೂಕಿನಲ್ಲಿ ಮಾತ್ರ ಸಚಿವರ ಆದೇಶಕ್ಕೆ ಯಾವುದೇ ಬೆಲೆಯಿಲ್ಲದಂತಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ತಾಲೂಕಿನ ಕಂದಾಯ ಇಲಾಖೆಯ ಅವ್ಯವಸ್ಥೆಯನ್ನು ಸಚಿವರ ಗಮನಕ್ಕೆ ತರುವುದು ರೈತಸಂಘಕ್ಕೆ ಅನಿವಾರ್ಯವಾಗಲಿದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ಇದೇ ವೇಳೆ ಯುವನಿಧಿ ಯೋಜನೆಯ ಪೋಸ್ಟರ್ ಬಿಡುಗಡೆ ಮಾಡಿದ ಅಧಿಕಾರಿಗಳು ತಾಲೂಕಿನ ಅರ್ಹ ಫಲಾನುಭವಿಗಳು ಯೋಜನೆಯ ಸೌಲಭ್ಯಕ್ಕಾಗಿ ನೋಂದಣಿ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.

ಈ ವೇಳೆ ತಾಪಂ ಇಒ ವೈ.ಎನ್.ಚಂದ್ರಮೌಳಿ, ಸಹಾಯಕ ಕೃಷಿ ನಿರ್ದೇಶಕಿ ಪ್ರತಿಭಾ, ಸಿಡಿಪಿಓ ಕೃಷ್ಣಮೂರ್ತಿ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರಮೇಶ್, ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಶೋಕ್‌ಕುಮಾರ್, ರೈತ ಸಂಘದ ಮುಖಂಡರಾದ ಹರಳಕೆರೆ ಗೋಪಾಲಕೃಷ್ಣ, ದಡಗ ಸತೀಶ್, ಶ್ರೀರಂಗಪುರ ರಂಗೇಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Share this article