ಕಾಡಿದ ಕೋವಿಡ್- ಪ್ರಾಣದ ಹಂಗು ತೊರೆದು ಕೋವಿಡ್ ವಿರುದ್ಧ ಹೋರಾಡಿದ್ದ ವಾರಿಯರ್ಸ್

KannadaprabhaNewsNetwork |  
Published : Dec 29, 2023, 01:31 AM IST
28ಕೆಪಿಎಲ್23 ರಸ್ತೆಗಳಿಗೆ ಜನರು ಬಾರದಂತೆ ತಾಕಿತು ಮಾಡುತ್ತಿರುವ ಪೊಲೀಸರು | Kannada Prabha

ಸಾರಾಂಶ

ನರ್ಸ್‌ಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವೈದ್ಯರು ಆಸ್ಪತ್ರೆಯಲ್ಲಿ ತಮ್ಮ ಜೀವ ಪಣಕ್ಕೆ ಇಟ್ಟು ಸೇವೆ ಮಾಡುತ್ತಿದ್ದರು. ರೋಗಿಗಳ ಜೊತೆಯಲ್ಲಿ ಮನೆಯವರೇ ಬಾರದಿದ್ದಾಗ ಅವರನ್ನು ದಾಖಲಿಸಿಕೊಂಡು, ಆಸ್ಪತ್ರೆಯಲ್ಲಿ ಅವರಿಗೆ ಉಪಚರಿಸಿ, ಆರೈಕೆ ಮಾಡಿ ರೋಗಿಗಳ ಪಾಲಿನ ದೇವರಾಗಿದ್ದರು.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಕೋವಿಡ್ ಹಾವಳಿ ಮಿತಿಮೀರಿತ್ತು. ಓಣಿಗಳಲ್ಲೂ ಮುಳ್ಳುಬೇಲಿ ಹಾಕಿ ಯಾರೂ ಬಾರದಂತೆ ತಡೆಯಲಾಗುತ್ತಿತ್ತು. ಇನ್ನು ಜನರಂತೂ ತಮ್ಮ ಮನೆಯಲ್ಲಿ ಬೀಗ ಹಾಕಿ ಆತಂಕದಲ್ಲಿಯೇ ಇದ್ದರು. ಆದರೆ, ಈ ವೇಳೆ ಜಿಲ್ಲೆಯಲ್ಲಿ ಕೋವಿಡ್ ವಾರಿಯರ್ಸ್ ಮಾತ್ರ ಪ್ರಾಣದ ಹಂಗು ತೊರೆದು ರಸ್ತೆಯಲ್ಲಿ, ಆಸ್ಪತ್ರೆಯಲ್ಲಿ ಇದ್ದು ಕೆಲಸ ಮಾಡಿದರು.

ನರ್ಸ್‌ಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವೈದ್ಯರು ಆಸ್ಪತ್ರೆಯಲ್ಲಿ ತಮ್ಮ ಜೀವ ಪಣಕ್ಕೆ ಇಟ್ಟು ಸೇವೆ ಮಾಡುತ್ತಿದ್ದರು. ರೋಗಿಗಳ ಜೊತೆಯಲ್ಲಿ ಮನೆಯವರೇ ಬಾರದಿದ್ದಾಗ ಅವರನ್ನು ದಾಖಲಿಸಿಕೊಂಡು, ಆಸ್ಪತ್ರೆಯಲ್ಲಿ ಅವರಿಗೆ ಉಪಚರಿಸಿ, ಆರೈಕೆ ಮಾಡಿ ರೋಗಿಗಳ ಪಾಲಿನ ದೇವರಾಗಿದ್ದರು.ಹತ್ತು ಸಾವಿರ: ಜಿಲ್ಲೆಯಲ್ಲಿ ನರ್ಸ್‌ಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಕೋವಿಡ್ ನಿರ್ವಹಣೆಗಾಗಿ ನೇಮಕವಾದ ಸಾವಿರಾರು ಸಿಬ್ಬಂದಿ ಸೇರಿದಂತೆ ಸುಮಾರು ಹತ್ತು ಸಾವಿರಕ್ಕೂ ಅಧಿಕ ವಾರಿಯರ್ಸ್ ಕೋವಿಡ್ ನಿಯಂತ್ರಣಕ್ಕಾಗಿ ಶ್ರಮಿಸಿದರು. ಸುಮಾರು 10 ಸಾವಿರಕ್ಕೂ ಅಧಿಕ ವಾರಿಯರ್ಸ್ ಕಾರ್ಯ ನಿರ್ವಹಿಸಿದ್ದರು ಎನ್ನುವುದನ್ನು ದಾಖಲೆ ಹೇಳುತ್ತದೆ.ಇಷ್ಟಾದರೂ ಸೂಕ್ತ ಚಿಕಿತ್ಸೆ ದೊರೆಯದೆ ಮತ್ತು ಭಯದಿಂದಾಗಿ ಸುಮಾರು 565 ಜನರು ಕೋವಿಡ್‌ನಿಂದಾಗಿ ಜಿಲ್ಲೆಯಲ್ಲಿ ಪ್ರಾಣ ತೆತ್ತಿದ್ದಾರೆ.ಇದರಲ್ಲಿ ಇತರೆ ರೋಗಗಳು ಇರುವವರು ಸಹ ಭಯದಲ್ಲಿಯೇ ಸತ್ತಿದ್ದೇ ಹೆಚ್ಚು ಎಂದು ಆರೋಗ್ಯ ಇಲಾಖೆಯ ವರದಿ ಹೇಳುತ್ತದೆ. ಈ ನಡುವೆ ಆರೇಳು ತಿಂಗಳುಗಟ್ಟಲೇ ಆಸ್ಪತ್ರೆಯಲ್ಲಿಯೇ ದಾಖಲಾಗಿ ಗುಣಮುಖವಾಗಿರುವ ಉದಾಹರಣೆಗಳು ಇವೆ.ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಆಸ್ಪತ್ರೆಯಲ್ಲಿ ರೋಗಿಗಳ ರೋಗ ನಿವಾರಣೆಗಾಗಿ ಶ್ರಮಿಸುತ್ತಿದ್ದರು. ತಿಂಗಳಾನುಗಟ್ಟಲೇ ಮನೆಗೆ ಹೋಗದೇ ಆಸ್ಪತ್ರೆಯಲ್ಲಿಯೇ ಇದ್ದು ಸೇವೆ ಮಾಡಿದವರು ಇದ್ದಾರೆ.ಪೊಲೀಸರ ಹರಸಾಹಸ: ಪೊಲೀಸರು ಸಹ ಕೋವಿಡ್ ನಿಯಂತ್ರಿಸುವಲ್ಲಿ ವಾರಿಯರ್ಸ್ನಂತೆ ಕೆಲಸ ಮಾಡಿದರು. ರಸ್ತೆಯಲ್ಲಿ ಯಾರೂ ಬಾರದಂತೆ ಮತ್ತು ಬೇರೆ ಜಿಲ್ಲೆಯವರು ಜಿಲ್ಲೆಗೆ ಪ್ರವೇಶಿಸದಂತೆ ಎಚ್ಚರ ವಹಿಸಲು ರಸ್ತೆಯಲ್ಲಿಯೇ ಕಾಯುತ್ತಿದ್ದರು.ಇನ್ನು ತುರ್ತು ವಾಹನಗಳು ಹೋಗುವಾಗಲೂ ಅವರನ್ನು ತಪಾಸಣೆ ಮಾಡಿ ಕಳುಹಿಸುತ್ತಿದ್ದರು.ಈ ನಡುವೆ ಕೆಲವರು ಬೇರೆ ಬೇರೆ ರಾಜ್ಯಕ್ಕೆ ಹೋಗಿ ಜಿಲ್ಲೆಗೆ ಪ್ರವೇಶಿಸುವ ಮೂಲಕ ರೋಗ ಹರಡುವುದಕ್ಕೆ ಕಾರಣವಾಗುವವರನ್ನು ಪತ್ತೆ ಮಾಡಿ ಕ್ವಾರಂಟೈನ್ ಮಾಡುತ್ತಿದ್ದರು. ಹೀಗಾಗಿ, ಆಸ್ಪತ್ರೆಗಳಲ್ಲಿ, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಹಗಲಿರಳು ಪೊಲೀಸರು ಕಾರ್ಯ ನಿರ್ವಹಿಸಿದ್ದರು.ಇವರಿಗೆ ಊಟ ತಿಂಡಿಯೂ ಎಲ್ಲಿಯೂ ಸಿಗುತ್ತಿರಲಿಲ್ಲ. ಈ ವೇಳೆಯಲ್ಲಿ ಉಪವಾಸವೇ ಕಾರ್ಯನಿರ್ವಹಿಸಿದ್ದಾರೆ.ಕೋವಿಡ್ ಎನ್ನುವ ಮಹಾಮಾರಿ ಬಂದಾಗ ರೋಗದಿಂದಾಗುವ ಹಾನಿಗಿಂತ ಭಯವೇ ಹೆಚ್ಚು ಹಾನಿ ಮಾಡುತ್ತಿತ್ತು. ಹೀಗಾಗಿ, ಕೋವಿಡ್ ಸಮಯದಲ್ಲಿ ಅವರಲ್ಲಿ ಆತ್ಮಸ್ಥೈರ್ಯ ತುಂಬಲು ಕೋವಿಡ್ ಆಸ್ಪತ್ರೆಗಳಲ್ಲಿ ಮತ್ತು ಕೇರ್ ಸೆಂಟರ್‌ಗಳಲ್ಲಿ ಯೋಗ, ಪ್ರಾಣಾಯಾಮ ಸೇರಿದಂತೆ ಮೊದಲಾದ ಚಟುವಟಿಕೆ ಮಾಡಿಸಿ, ಧೈರ್ಯ ತುಂಬುವ ಕೆಲಸ ಮಾಡಲಾಯಿತು. ಮತ್ತೊಮ್ಮೆ ಅಂಥ ಮಹಾಮಾರಿ ಬಾರದಿರಲಿ ಎನ್ನುತ್ತಾರೆ ಡಾ.ಮಂಜುನಾಥ ಸಜ್ಜನ.

ಕೋವಿಡ್ ವೇಳೆಯಲ್ಲಿ ನಮ್ಮ ಮುಂದಿದ್ದ ಸವಾಲು ಒಂದೇ ಆಗಿತ್ತು. ಕೋವಿಡ್‌ನ್ನು ನಿಯಂತ್ರಣ ಮಾಡುವುದು ಮತ್ತು ಕೋವಿಡ್ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುವುದು ಎನ್ನುತ್ತಾರೆ ಡಿಎಚ್ಒ ಡಾ. ಲಿಂಗರಾಜ.

ಕೋವಿಡ್ ನಿಯಂತ್ರಣಕ್ಕಾಗಿ ನಮ್ಮ ಸಿಬ್ಬಂದಿ ಸೇರಿದಂತೆ ಅನೇಕರು ಕೈಜೋಡಿಸಿದ ಪರಿಣಾಮ ಮಹಾಮಾರಿ ಎದುರಿಸಲು ಸಾಧ್ಯವಾಯಿತು. ಈಗ ಮತ್ತೆ ಬರುವ ಲಕ್ಷಣಗಳು ಇದ್ದು, ಎದುರಿಸಲು ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ ಡಾ.ನಂದಕುಮಾರ.ಕೋವಿಡ್ ಬಂದಾಗ ನಾವು ಎದುರಿಸಿದ ದೊಡ್ಡ ಸವಾಲು ಎಂದರೆ ಜನರು ಮನೆಯಿಂದ ಆಚೆ ಬಾರದಂತೆ ಮಾಡುವುದು. ಸೋಂಕು ಹರಡದಂತೆ ತಡೆಯಲು, ಜನರು ಗುಂಪಾಗಿ ಸೇರದಂತೆ ಮಾಡುವುದೇ ಸವಾಲಾಗಿತ್ತು. ಆದರೂ ಪ್ರಾಣದ ಹಂಗು ತೊರೆದು ರಸ್ತೆಯಲ್ಲಿ ನಿಂತು ನಿಯಂತ್ರಣ ಮಾಡಿದೆವು ಎನ್ನುತ್ತಾರೆ ಡಿವೈಎಸ್ಪಿ ಕೊಪ್ಪಳ ವೆಂಕಟಪ್ಪ ನಾಯಕ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ