ರೋಣ: ಆರೋಗ್ಯಯುತ ಜೀವನಕ್ಕಾಗಿ ಜವಾರಿ ಬೀಜ ತಳಿಗಳನ್ನು ರೈತರು ಉಳಿಸಿ ಬೆಳೆಸಬೇಕು ಎಂದು ಗದಗ ಕೃಷಿ ಸಂಶೋಧನಾ ಕೇಂದ್ರ ಮುಖ್ಯಸ್ಥ ಡಾ. ಎಸ್.ಎಲ್. ಪಾಟೀಲ ಹೇಳಿದರು.
ಬೆಳವಟಗಿಯ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಸಿ.ಎಂ. ರಫಿ ಮಾತನಾಡಿ, ಸಾಂಪ್ರದಾಯಿಕ ಬೆಳೆಗಳನ್ನು ರೈತರು ಹೆಚ್ಚು ಬೆಳೆಯಬೇಕು. ಸಿರಿಧಾನ್ಯಗಳ ಜತೆಗೆ ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳನ್ನು ಬೆಳೆಯಬಹುದಾಗಿದೆ. ಈ ಬೆಳೆಗಳಿಗೆ ಸಂಬಂಧಿಸಿದಂತೆ ಕೃಷಿ ಸಂಶೋಧನಾ ಕೇಂದ್ರಗಳು ನೂತನ ತಳಿಗಳನ್ನು ಪರಿಚಯಿಸಿದ್ದು, ರೈತರು ಈ ಬಗ್ಗೆ ಮಾಹಿತಿ ಪಡೆದು ಅವುಗಳನ್ನು ಬಿತ್ತನೆ ಮಾಡಬೇಕು ಎಂದರು.
ಪ್ರಗತಿಪರ ರೈತರ ಮಲ್ಲಯ್ಯ ಗುರುಬಸಪ್ಪನಮಠ ಮಾತನಾಡಿ, ತೆರೆಮರೆಗೆ ಸರಿಯುತ್ತಿರುವ ಕಡ್ಡಿಗಾಯಿ ಶೇಂಗಾ, ನೆವಣಿ, ಬರಗಾ, ಸಜ್ಜಿ ಸೇರಿದಂತೆ ಅನೇಕ ಬಗೆಯ ಜವಾರಿ ಬೀಜಗಳ ರಕ್ಷಣೆಗೆ ರೈತರು ಮತ್ತು ಕೃಷಿ ಇಲಾಖೆ ಮುಂದಾಗಬೇಕು ಹೇಳಿದರು.ನಿವೃತ್ತ ಕೃಷಿ ನಿರ್ದೇಶಕ ಸುರೇಶ ಕುಂಬಾರ ಮಾತನಾಡಿ, ಕೃಷಿ ಬೆಳೆಗಳ ಜತೆಗೆ ತೋಟಗಾರಿಕೆ ಬೆಳೆ ಬೆಳೆಯುವ ಮೂಲಕ ಸಮಗ್ರ ಬೆಳೆ ಬೆಳೆಯಬೇಕು. ಆಧುನಿಕ ಪದ್ಧತಿ ಜತೆಗೆ ವೈಜ್ಞಾನಿಕ ಬೆಳೆಗಳನ್ನು ಬೆಳೆಯಬೇಕು. ವೈವಿಧ್ಯಮಯ ಬೆಳೆಗಳನ್ನು ಬೆಳೆಯಬೇಕು. ಅತಿವೃಷ್ಟಿ, ಅನಾವೃಷ್ಟಿಯಾದಲ್ಲಿ ಒಂದಾದರೂ ಬೆಳೆ ರೈತರಿಗೆ ನೆರವಾಗುವವು ಎಂದರು.
ಸಾನ್ನಿಧ್ಯವನ್ನು ಗುಲಗಂಜಿ ಮಠದ ಗುರುಪಾದ ಸ್ವಾಮಿ ವಹಿಸಿ ಆಶೀರ್ವಚನ ನೀಡಿದರು. ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಎಚ್ಚರಗೌಡ ಗೋವಿಂದಗೌಡ್ರ,, ಜಯಕುಮಾರ ಬ್ಯಾಳಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಮಹಾಬಲೇಶ್ವರ ಪಟಗಾರ, ಶಂಭುಲಿಂಗ ಅರಗಂಜಿ, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಪ್ರಭುಗೌಡ ಪಾಟೀಲ, ರಂಗಪ್ಪ ತಳವಾರ, ದೇವಪ್ಪ ಹುನಗುಂದ ಉಪಸ್ಥಿತರಿದ್ದರು. ಮುತ್ತಣ್ಣ ಕಳಸಣ್ಣವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.