ನರಗುಂದ: ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಜಮೀನು ಹೊಂದಿರುವ ರೈತರು ಫಲವತ್ತಾದ ಮಣ್ಣಿನಲ್ಲಿ ಹತ್ತಿಯನ್ನು ಹೆಚ್ಚು ಬೆಳೆಯಬೇಕೆಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಬೇಸಾಯಶಾಸ್ತ್ರ ವಿಜ್ಞಾನಿ ಶಾನವಾಡ ತಿಳಿಸಿದರು.
ದೇಶದ ಮಾರುಕಟ್ಟೆಯಲ್ಲಿ ಹತ್ತಿ ಬೆಳೆಗೆ ಉತ್ತಮ ಬೆಲೆಯಿದೆ. ಆದ್ದರಿಂದ ಈ ಭಾಗದ ರೈತರು ಹೆಚ್ಚಿನ ಹತ್ತಿ ಬೆಳೆಯಲು ಮುಂದಾಗಬೇಕೆಂದು ರೈತರಿಗೆ ಕರೆ ನೀಡಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್. ಬೆಳವಟಗಿ ಮಾತನಾಡಿ, ಹತ್ತಿ ಬೇಸಾಯ ಕ್ರಮಗಳ ಬಗ್ಗೆ ಮತ್ತು ಹತ್ತಿ ಉತ್ಪಾದಕತೆ ಅಭಿಯಾನದಲ್ಲಿ ಅಳವಡಿಸಿಕೊಂಡಿರುವ ತಾಂತ್ರಿಕತೆಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.ಸಸ್ಯಕೀಟ ಶಾಸ್ತ್ರದ ವಿಜ್ಞಾನಿ ಡಾ. ಪೂರ್ಣಿಮಾ ಮಟ್ಟಿ ಅವರು, ಹತ್ತಿ ಬೆಳೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಕೀಟಬಾಧೆ, ಲಕ್ಷಣ ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ತಿಳಿಸಿದರು. ಸಸ್ಯರೋಗ ಶಾಸ್ತ್ರದ ವಿಜ್ಞಾನಿ ಡಾ. ಪ್ರಭಾವತಿ ಎನ್. ರಾವ್ ಅವರು, ಹತ್ತಿ ಬೆಳೆಗಳಲ್ಲಿ ಕಂಡುಬರುವ ಸಾಮಾನ್ಯ ರೋಗ ಮತ್ತು ಅವುಗಳ ಲಕ್ಷಣ ಮತ್ತು ನಿಯಂತ್ರಿಸುವ ಕ್ರಮಗಳ ಬಗ್ಗೆ ರೈತರಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ರೋಣದ ಕೃಷಿ ಉಪನಿರ್ದೇಶಕ ಜಯಪ್ರಕಾಶ ಮಾತನಾಡಿ, ಈ ಯೋಜನೆಯ ಅಡಿಯಲ್ಲಿ ಕೃಷಿ ಇಲಾಖೆ ವತಿಯಿಂದ ಗುರ್ಲಕಟ್ಟಿ ಮತ್ತು ಭೈರನಹಟ್ಟಿ ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಈ ಗ್ರಾಮಗಳಲ್ಲಿ ಹತ್ತಿ ಬೆಳೆಯುವ ರೈತರಿಗೆ ಅಗತ್ಯವಿರುವ ತಾಂತ್ರಿಕ ತರಬೇತಿಗಳನ್ನು ನೀಡಿ ಹತ್ತಿ ಬೆಳೆಯುವ ಉತ್ಪಾದಕತೆಯನ್ನು ಹೆಚ್ಚಿಸುವುದು ಮತ್ತು ಆ ಮೂಲಕ ಉಳಿದ ಗ್ರಾಮಗಳ ರೈತರಿಗೂ ನೆರವಾಗುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.