ತರಬೇತಿ ಕಾರ್ಯಕ್ರಮ । ಆರ್.ರಜನೀಕಾಂತ ಸಲಹೆ । ಕೃಷಿ ಕೇಂದ್ರದಿಂದ ಮಹಿಳೆ, ಯುವ ರೈತರಿಗೆ ವಿಶೇಷ ಜೇನು ಕೃಷಿಯ ಬಗ್ಗೆ ಮಾಹಿತಿ
ಕಡಿಮೆ ಬಂಡವಾಳದ ಪರಿಸರ ಸ್ನೇಹಿ ಜೇನು ಸಾಕಾಣಿಕೆಯನ್ನು ಸಮಗ್ರ ಕೃಷಿ ಅಥವಾ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವ ಪ್ರತಿಯೊಬ್ಬ ರೈತರು ಇದನ್ನು ಒಂದು ಉಪಕಸುಬಾಗಿ ಅಳವಡಿಸಿಕೊಳ್ಳಬಹುದು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ಹೇಳಿದರು.
ತಾಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ಮಹಿಳಾ ಮತ್ತು ಯುವ ರೈತರಿಗೆ ವಿಶೇಷ ಜೇನು ಕೃಷಿಯ ಕುರಿತು ಎರಡು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಜಿಲ್ಲೆಯ ಬೆಳೆ ವೈವಿದ್ಯ ಸ್ವಾಭಾವಿಕ ಸಸ್ಯವರ್ಗ ಹವಾಮಾನ ಮತ್ತು ಹೇರಳ ಮಾನವ ಸಂಪನ್ಮೂಲಗಳು ಜೇನು ಕೃಷಿಗೆ ಪೂರಕವಾಗಿವೆ. ಪ್ರಸಿದ್ದ ವಿಜ್ಞಾನಿ ಅಲ್ಬರ್ಟ್ ಐನ್‍ಸ್ಟೈನ್ ಅವರು ಜೇನಿನ ಸಂತತಿ ನಾಶವಾದರೆ ಜೀವರಾಶಿಗಳಿಗೆ ಅಪಾಯವಿದೆ ಎಂದಿದ್ದರು. ಜೇನು ಸಾಕಾಣಿಕೆಯಿಂದ ನಮಗೆ ಉತ್ತಮ ಆರೋಗ್ಯ, ಆದಾಯ, ಉದ್ಯೋಗ ಸೃಜನೆ ಮತ್ತು ಉತ್ತಮ ಪರಿಸರ ಸಮತೋಲನೆಗೆ ಸಹಕಾರಿಯಾಗಲಿದೆ. ಸಕಲ ಪೋಶಕಾಂಷಭರಿತ ಜೇನು ಅತ್ಯುತ್ತಮ ಶಿಶು ಆಹಾರವಾಗಿದ್ದು ಮಕ್ಕಳ ಪೋಷಕಾಂಶ ಕೊರತೆ ನೀಗಿಸಲು ಗರ್ಭಿಣಿಯರಲ್ಲಿ ಕಬ್ಬಿಣದ ಕೊರತೆ ನೀಗಿಸಲು ಮತ್ತು ರಕ್ತದ ವೃದ್ದಿಗೆ ಪರಿಣಾಮಕಾರಿಯಾಗಿದೆ. ಉತ್ತಮ ಜೇನಿನ ಪ್ರಾಮುಖ್ಯತೆ ಮತ್ತು ಜೇನು ಸಾಕಾಣಿಕೆಯ ತಾಂತ್ರಿಕತೆಯ ಕುರಿತು ಅರಿವು ಮೂಡಿಸುವುದು ಈ ತರಬೇತಿಯ ಉದ್ದೇಶವಾಗಿದ್ದು ರೈತರು ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ದಾವಣಗೆರೆಯ ಹಿರಿಯ ಪ್ರಸೂತಿ ತಜ್ಞೆ ಡಾ.ಶಾಂತ ಭಟ್ ಮಾತನಾಡಿ, ಉತ್ತಮ ಆರೋಗ್ಯಕ್ಕೆ ನಿತ್ಯ 15ರಿಂದ 25 ಗ್ರಾಂ ಪರಿಶುದ್ಧ ಜೇನುತುಪ್ಪ ಸೇವನೆ ಉತ್ತಮ. ಪರಿಶುದ್ದ ಜೇನುತುಪ್ಪ ಪಡೆಯಲು ಜೇನು ಸಾಕಾಣಿಕೆಯನ್ನು ರೈತರಲ್ಲದೇ ನಗರ ಪ್ರದೇಶದಲ್ಲೂ ಸಹ ಹವ್ಯಾಸದ ರೀತಿಯಲ್ಲಿ ಜೇನು ಸಾಕಾಣಿಕೆ ಮಾಡಬಹುದು ಎಂದರು.
ಈ ಸಂದರ್ಭದಲ್ಲಿ ಪ್ರಗತಿಪರ ರೈತ ಗುಡಿಹಳ್ಳಿ ರಂಗಣ್ಣ, ಹಲವಾರು ರೈತರು, ರೈತ ಮಹಿಳೆಯರು ಹಾಜರಿದ್ದರು.