ಕನ್ನಡಪ್ರಭ ವಾರ್ತೆ ಬೆಂಗಳೂರು
ಹೊಸ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಸುವುದಾಗಿ ಹೇಳುತ್ತಿದ್ದ ಸರ್ಕಾರ ಇದೀಗ ರಿಮ್ಯಾಪ್ಡ್ ಡಿಸ್ಟ್ರಿಬ್ಯೂಷನ್ ಸೆಕ್ಟರ್ ಸ್ಕೀಂ (ಆರ್‌ಡಿಎಸ್‌ಎಸ್) ಮೂಲಕ ಎಲ್ಲ ಪ್ರಕಾರದ ಗ್ರಾಹಕರ ಮನೆಗಳಿಗೂ ಸ್ಮಾರ್ಟ್ ಮೀಟರ್ ಅಳವಡಿಸುವ ಚಿಂತನೆ ನಡೆಸಿದೆ. ಈ ಸಂಬಂಧ ಪ್ರಸ್ತಾವನೆಯನ್ನೂ ಮುಂದಿನ ದಿನಗಳಲ್ಲಿ ಸಚಿವ ಸಂಪುಟದ ಮುಂದಿಡಲು ಸಿದ್ಧತೆ ನಡೆಸಿದೆ.ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು, ಆರ್‌ಡಿಎಸ್‌ಎಸ್ ಯೋಜನೆಯನ್ನು ಕೇಂದ್ರ ಸರ್ಕಾರ ಇನ್ನೂ ಎರಡು ವರ್ಷ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಂತ-ಹಂತವಾಗಿ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಆದರೆ, ಯೋಜನೆ ಬಗ್ಗೆ ಸಂಪುಟ ನಿರ್ಧಾರ ಕೈಗೊಳ್ಳಲಿದೆ. ಇದು ಜಾರಿಯಾದರೆ, ಎಲ್ಲ ಗ್ರಾಹಕರಿಗೂ ಸ್ಮಾರ್ಟ್ ಮೀಟರ್ ಬರಲಿದೆ ಎಂದರು.
ಗುರುವಾರದ (ಜೂ.19) ಸಚಿವ ಸಂಪುಟದಲ್ಲಿ ಈ ವಿಷಯ ಚರ್ಚೆಗೆ ಬರಲಿದೆಯೇ ಎಂಬ ಪ್ರಶ್ನೆಗೆ, ಈ ಸಂಬಂಧದ ಪ್ರಸ್ತಾವನೆ ಇನ್ನೂ ಆರಂಭಿಕ ಹಂತದಲ್ಲಿದೆ. ಸಂಪುಟಕ್ಕೆ ಬರಲು ಇನ್ನೂ ಸಾಕಷ್ಟು ಸಮಯ ಹಿಡಿಯಲಿದೆ ಎಂದು ಸ್ಪಷ್ಟಪಡಿಸಿದರು.ಸರ್ಕಾರದ ಅಂಗಸಂಸ್ಥೆಗಳು ಸುಮಾರು ₹15 ಸಾವಿರ ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರಿಂದ ಆರ್‌ಡಿಎಸ್‌ಎಸ್ ಈವರೆಗೆ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಈಗ ಕೇಂದ್ರ ಇಂಧನ ಸಚಿವರ ನಿರ್ದೇಶನದ ಮೇರೆಗೆ ಆರಂಭದಲ್ಲಿ ಸರ್ಕಾರಿ ಕಚೇರಿಗಳು, ನಂತರದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಸ್ಮಾರ್ಟ್ ಮೀಟರ್ ಜಾರಿಗೆ ಉದ್ದೇಶಿಸಲಾಗಿದೆ. ಸ್ಥಳೀಯ ಸಂಸ್ಥೆಗಳಿಗೆ ಶೇ.2ರಷ್ಟು ಸೆಸ್ ವಿಧಿಸಿ ಆ ಮೂಲಕ ಬಾಕಿ ಸಂಗ್ರಹಿಸಲು ಚಿಂತಿಸಲಾಗಿದೆ ಎಂದರು.
ಪಶ್ಚಿಮಘಟ್ಟದಲ್ಲಿ ಬರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತ ಪ್ರಶ್ನೆಗೆ, ಈಗ ಶರಾವತಿ ವಿದ್ಯುದಾಗಾರದಿಂದ ಸಾವಿರ ಮೆ.ವಾ. ವಿದ್ಯುತ್ ಉತ್ಪಾದನೆ ಆಗುತ್ತಿದೆ. ಪಂಪ್ಡ್ ಸ್ಟೋರೇಜ್ ಅನುಷ್ಠಾನಗೊಂಡರೆ ಉತ್ಪಾದನೆ ಸಾಮರ್ಥ್ಯ ಮೂರುಪಟ್ಟು ಅಂದರೆ ಮೂರು ಸಾವಿರ ಮೆ.ವಾ. ಆಗಲಿದೆ. ಆದರೆ, ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುವುದು ಸರಿ ಅಲ್ಲ ಎಂದರು.--
ಪ್ರಸರಣ ಮಾರ್ಗ ಸಾಮರ್ಥ್ಯ50 ಮೆ.ವ್ಯಾಟ್‌ಗೆ ಹೆಚ್ಚಳಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಮಾತನಾಡಿ, ರಾಜ್ಯದಲ್ಲಿ ವಿದ್ಯುತ್ ಪ್ರಸರಣ ಮಾರ್ಗದ ಸಾಮರ್ಥ್ಯವನ್ನು 35 ಸಾವಿರ ಮೆ.ವಾ.ಗೆ ಹೆಚ್ಚಿಸುವ ಗುರಿ ಇತ್ತು. ಈಗ ಅದನ್ನು 50 ಸಾವಿರ ಮೆ.ವಾ. ಸಾಮರ್ಥ್ಯಕ್ಕೆ ತಲುಪಿಸುವ ಗುರಿಯೊಂದಿಗೆ ಯೋಜನೆ ರೂಪಿಸುತ್ತಿದ್ದೇವೆ. ಈ ಸಂಬಂಧ ಏಪ್ರಿಲ್‌ನಲ್ಲೇ ಅಧ್ಯಯನ ನಡೆದಿದ್ದು, ರಾಜ್ಯದ ಉತ್ತರ, ದಕ್ಷಿಣ ಮತ್ತು ಕೇಂದ್ರೀಯ ಭಾಗದಲ್ಲಿ ಮೂರು 765 ಕೆ.ವಿ. ಸಾಮರ್ಥ್ಯದ ಉಪಕೇಂದ್ರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ। ಎನ್.ಶಿವಶಂಕರ್ ಇದ್ದರು.