ಹಳಿಯಾಳ: ಈ ಹಿಂದೆ ಶಿಕ್ಷಣಕ್ಕಾಗಿ ನಮ್ಮ ಯುವಸಮೂಹ ಹೊರಗಡೆ ಹೋಗುತ್ತಿತ್ತು. ಆದರೆ ಈಗ ಹೊರ ತಾಲೂಕು ಜಿಲ್ಲೆಗಳಿಂದ ವಿದ್ಯೆ ಪಡೆಯಲು ಯುವ ಸಮೂಹವು ಹಳಿಯಾಳಕ್ಕೆ ಬರುತ್ತಿದೆ. ಇಂದು ಹಳಿಯಾಳ ಶೈಕ್ಷಣಿಕ ಕೇಂದ್ರವಾಗಿ ಬೆಳಯುತ್ತಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಕರೆ ನೀಡಿದರು.
ನಾಲ್ಕು ದಶಕಗಳ ಹಿಂದೇ ಇದ್ದು ಹಳಿಯಾಳಕ್ಕೂ ಈಗಿನ ಹಳಿಯಾಳಕ್ಕೂ ಅಜಗಜಾಂತರವಿದೆ. ನಾನು ಮೊದಲ ಬಾರಿಗೆ ಶಾಸಕನಾದ ಸಮಯದಲ್ಲಿ ಹಳಿಯಾಳದಲ್ಲಿ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಷ್ಟೊಂದು ಸೌಲಭ್ಯಗಳಿರಲಿಲ್ಲ. ಅದಕ್ಕಾಗಿ ನಾನು ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಿದೆ. ಪರಿಣಾಮ ತಾಲೂಕಿನಲ್ಲೇ ಆರೋಗ್ಯ ಕೇಂದ್ರಗಳು, ಘಟಕಗಳು ಆರಂಭಗೊಂಡವು. ಪ್ರತಿ ಹಳ್ಳಿಗಳಲ್ಲಿಯೂ ಪ್ರಾಥಮಿಕ ಶಾಲೆಗಳು, ಹೋಬಳಿ ಮಟ್ಟದಲ್ಲಿ ಪ್ರೌಢಶಾಲೆಗಳು, ಕಾಲೇಜುಗಳು ನಿರ್ಮಾಣಗೊಂಡವು. ಇಂದು ಹಳಿಯಾಳ ತಾಲೂಕಿನಲ್ಲಿ ಪದವಿ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಡಿಪ್ಲೋಮಾ ಕಾಲೇಜು, ಐಟಿಐ ಸೇರಿದಂತೆ ಎಲ್ಲ ಶೈಕ್ಷಣಿಕ ಸೌಲಭ್ಯಗಳು ಹಳಿಯಾಳದಲ್ಲಿ ಲಭ್ಯವಾಗಿದೆ. ನಿಮ್ಮ ಊರಿನಲ್ಲಿಯೇ ದೊರೆಯುವ ಈ ಶೈಕ್ಷಣಿಕ ಸೌಲಭ್ಯಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದು ದೇಶಪಾಂಡೆ ಕರೆ ನೀಡಿದರು.
ಕೌಶಲ್ಯ ಮತ್ತು ಬುದ್ಧಿಮತ್ತೆಗೆ ಮಣೆ:ಆಧುನಿಕ ಜಗತ್ತಿನಲ್ಲಿ ಸೌಲಭ್ಯಗಳು ಹೆಚ್ಚಾದಂತೆ ಪೈಪೋಟಿಗಳು ಸ್ಪರ್ಧೆಗಳು ಹೆಚ್ಚಾದವು. ಇಂದು ಈ ಸ್ಪರ್ಧಾತ್ಮಕ ಪೈಪೋಟಿಯಲ್ಲಿ ಜಾಣ್ಮೆ, ಕೌಶಲ್ಯ ಬುದ್ಧಿಮತ್ತೆ ಇದ್ದವನೇ ಯಶಸ್ವಿಯಾಗಬಲ್ಲ. ಅದಕ್ಕಾಗಿ ಯುವ ಪೀಳಿಗೆಯು ಈ ಬದುಕಿನ ಸ್ಪರ್ಧೆಗೆ ಅಣಿಯಾಗಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಸತೀಶ್ ಎಂ. ಗಾಂವಕರ ಮಾತನಾಡಿ, ಕಾಲೇಜಿನ ಶೈಕ್ಷಣಿಕ ಪ್ರಗತಿಯನ್ನು ಮಂಡಿಸಿ, ಕಾಲೇಜು ಅಭಿವೃದ್ಧಿಗಾಗಿ ಸರ್ಕಾರದಿಂದ ಮತ್ತು ಉದ್ಯಮಿ ಸ್ನೇಹಿತರ ಸಿ.ಎಸ್.ಆರ್ ಅನುದಾನದಲ್ಲಿ ಶಾಸಕ ದೇಶಪಾಂಡೆ ತಂದ ಅನುದಾನ ಹಾಗೂ ಕೈಗೊಂಡಿರುವ ಅಭಿವೃದ್ಧಿ ಬಗ್ಗೆ ಮಾಹಿತಿಯನ್ನು ನೀಡಿದರು.