ಬೆಳೆವಿಮೆ ಪರಿಹಾರಕ್ಕಾಗಿ ಗುತ್ತಲದಲ್ಲಿ ಧರಣಿ ಕುಳಿತ ರೈತರು

KannadaprabhaNewsNetwork |  
Published : Aug 13, 2026, 02:00 AM IST
ಗುತ್ತಲ ಪಟ್ಟಣದ ನಾಡಕಚೇರಿ ಬಳಿ ಬೆಳೆ ವಿಮೆ ತುಂಬಿದ್ದ ರೈತರು ಅವೈಜ್ಞಾನಿಕ ಸರ್ವೆ ಹಾಗೂ ಬೆಳೆ ಹಾನಿಯಾಗಿದ್ದರೂ ಪರಿಹಾರ ಬಾರದ ಕಾರಣ ಧರಣಿ ಕುಳಿತು ಪ್ರತಿಭಟಿಸಿದರು. | Kannada Prabha

ಸಾರಾಂಶ

ಅವೈಜ್ಞಾನಿಕ ಬೆಳೆವಿಮೆ ಸರ್ವೆ ಹಾಗೂ ಬೆಳೆ ಹಾನಿಯಾಗಿದ್ದರೂ ಬೆಳೆವಿಮೆ ಪರಿಹಾರ ಬಂದಿಲ್ಲ ಎಂದು ಆಕ್ರೋಶಗೊಂಡ ರೈತರು ಗುತ್ತಲ ಪಟ್ಟಣದ ನಾಡಕಚೇರಿಯ ಮುಂದೆ ಬುಧವಾರ ಧರಣಿ ನಡೆಸಿದರು.

ಗುತ್ತಲ: ಅವೈಜ್ಞಾನಿಕ ಬೆಳೆವಿಮೆ ಸರ್ವೆ ಹಾಗೂ ಬೆಳೆ ಹಾನಿಯಾಗಿದ್ದರೂ ಬೆಳೆವಿಮೆ ಪರಿಹಾರ ಬಂದಿಲ್ಲ ಎಂದು ಆಕ್ರೋಶಗೊಂಡ ರೈತರು ಪಟ್ಟಣದ ನಾಡಕಚೇರಿಯ ಮುಂದೆ ಬುಧವಾರ ಧರಣಿ ನಡೆಸಿದರು.

2021ರಿಂದ 2026ರ ವರೆಗೆ ನಾವು ಬೆಳೆ ವಿಮೆಯನ್ನು ತುಂಬುತ್ತಲೇ ಬಂದಿದ್ದು, ಕಳೆದ 5 ವರ್ಷಗಳಿಂದ ನಮ್ಮ ಬೆಳೆಹಾನಿಯಾಗುತ್ತಿದೆ. ಆದರೂ ನಮಗೆ ಬೆಳೆವಿಮೆ ಹಣ ಬಂದಿಲ್ಲ. ಪಕ್ಕದ ಗ್ರಾಮಗಳಲ್ಲಿ ಬೆಳೆ ವಿಮೆ ಪರಿಹಾರ ನೀಡಲಾಗಿದೆ. ನಮ್ಮ ಜಮೀನುಗಳ ಪಕ್ಕದಲ್ಲಿಯೇ ನಮಗಿಂತ ಉತ್ತಮ ಬೆಳೆ ಇದ್ದರೂ ಅವರಿಗೆ ಬೆಳೆವಿಮೆಯ ಪರಿಹಾರ ದೊರಕಿದೆ. ನಾವು ಅವರಿಗಿಂತ ಹೆಚ್ಚು ಹಾನಿ ಅನುಭವಿಸಿದ್ದರೂ ನಮಗೆ ಪರಿಹಾರ ದೊರಕಿಲ್ಲ ಎಂದು ಆರೋಪಿಸಿದರು.

ಬೆಳೆವಿಮೆ ಸರ್ವೆ ಬಗ್ಗೆ ಅನುಮಾನಗಳಿದ್ದು, ರೈತರಿಲ್ಲದೆ ಸರ್ವೆ ಮಾಡುವುದು ಸರಿಯೇ? ಹಾನಿಯಾದ ಬೆಳೆಗಳನ್ನು ಸರ್ವೆ ಮಾಡದೇ ಉತ್ತಮ ಬೆಳೆ ಸರ್ವೆ ಮಾಡುವುದು ನ್ಯಾಯವೇ? ಬೆಳೆವಿಮೆ ಸರ್ವೆಯ ಮಾನದಂಡಗಳೇನು? ಇವೆಲ್ಲದರ ಬಗ್ಗೆ ನಮಗೆ ಮಾಹಿತಿಯನ್ನು ನೀಡಬೇಕು. ನಮಗೆ ಬೆಳೆಹಾನಿ ಆಗಿದ್ದರೂ ವಿಮೆಯ ಪರಿಹಾರ ಏಕೆ ದೊರೆತಿಲ್ಲ? ಈ ಎಲ್ಲದರ ಬಗ್ಗೆ ನಮಗೆ ಉತ್ತರ ಬೇಕು. ಬೆಳೆ ವಿಮೆ ಸರ್ವೆಯಲ್ಲಿ ವಿಮಾ ಕಂಪನಿಯೊವರೊಂದಿಗೆ ಅಧಿಕಾರಿಗಳು ಕೈಜೋಡಿಸಿದ್ದರ ಬಗ್ಗೆ ನಮಗೆ ಅನುಮಾನ ಇದೆ ಎಂದು ಆರೋಪಿಸಿದರು.

ನಮಗೆ ಕಳೆದ 5 ವರ್ಷಗಳಿಂದ ಬೆಳೆವಿಮೆಯಲ್ಲಿ ಆದ ಅನ್ಯಾಯ ಸರಿಪಡಿಸಬೇಕು. ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಗ್ರಾಮ ಲೆಕ್ಕಿಗ ಪ್ರಕಾಶ ಉಜ್ಜನಿ ಅವರಿಗೆ ರೈತರು ತರಾಟೆಗೆ ತೆಗೆದುಕೊಂಡರು. ರೈತರೊಂದಿಗೆ ಸರಿಯಾಗಿ ವರ್ತಿಸಬೇಕು. ಸರ್ವೆ ಸ್ಥಳಕ್ಕೆ ರೈತರನ್ನು ಕರೆದುಕೊಂಡು ಹೋಗಬೇಕೆಂದು ಆಗ್ರಹಿಸಿದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಪಪಂ ಉಪಾಧ್ಯಕ್ಷ ಪರಶುರಾಮ ಯಲಗಚ್ಚ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಸಾಲಗೇರಿ ಆಗಮಿಸಿ ರೈತರೊಂದಿಗೆ ಚರ್ಚಿಸಿದರು. ಗುತ್ತಲದ ರೈತರಿಗೆ ಪ್ರತಿ ವರ್ಷ ಬೆಳೆವಿಮೆ ವಿಚಾರಲ್ಲಿ ಅನ್ಯಾಯವಾಗುತ್ತಿದೆ. ಈ ಬಗ್ಗೆ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಕಂದಾಯ ಹಾಗೂ ಕೃಷಿ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿದರು.

ಆನಂತರ ರೈತರ ಜಮೀನುಗಳಲ್ಲಿನ ಸರ್ವೆ ಕಾರ್ಯಕ್ಕೆ ಧರಣಿ ನಿರತ ರೈತರು ಅಧಿಕಾರಿಗಳೊಂದಿಗೆ ಜಮೀನುಗಳಿಗೆ ತೆರಳಿದರು.

ರಾಜಪ್ಪ ಬೆನ್ನೂರ, ಪಿಕೆಪಿಎಸ್ ಅಧ್ಯಕ್ಷ ಚನ್ನಪ್ಪ ಬನ್ನಿಮಟ್ಟಿ, ನಿರ್ದೇಶಕರಾದ ಭರಮಪ್ಪ ಹಾದಿಮನಿ, ವಿರೂಪಾಕ್ಷಪ್ಪ ಶೀತಾಳ, ಕೋಟೆಪ್ಪ ಗೊರವರ, ಪರಮೇಶಪ್ಪ ಕುರವತ್ತಿಗೌಡರ, ಹಾಲು ಉತ್ಪಾದಕರ ಸಂಘದ ನಿರ್ದೇಶಕ ನಾಗರಾಜ ಗಂಗಣ್ಣನವರ, ಮಲ್ಲಪ್ಪ ಶೀತಾಳ, ಶಂಕ್ರಪ್ಪ ಕಾಗಿನೆಲ್ಲಿ, ಲಕ್ಷ್ಮವ್ವ ಆರೇರ್, ಹಾಲಪ್ಪ ಬನ್ನಿಮಟ್ಟಿ, ಅಜ್ಜಪ್ಪ ರೊಟ್ಟಿ, ಗುಡ್ಡಪ್ಪ ಯರವಿನತಲಿ, ಮಂಜುನಾಥ ರೊಟ್ಟಿ, ಪ್ರಕಾಶ ಗಡದ, ವಿರೂಪಾಕ್ಷ ಗಡದ, ಕೊಟ್ರಪ್ಪ ಶೆಟ್ಟರ, ಬಸವರಾಜ ಗಂಗಣ್ಣನವರ, ನೀಲಪ್ಪ ಕಿತ್ತೂರ, ಬಸವರಾಜ ಕಿತ್ತೂರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತುರ್ತಾಗಿ ಕಲಾಭವನ ತೆರೆಯುವಂತೆ ಕ್ರಮ: ಬೆಲ್ಲದ
ಉತ್ಸವಗಳಿಂದ ಜಾನಪದದ ಉಳಿವು: ಕತ್ತಿ