ಕನ್ನಡಪ್ರಭ ವಾರ್ತೆ ವಿಜಯಪುರ
ಜಂಬಗಿ ಕೆರೆ ತುಂಬುವಂತೆ ಕಳೆದ ಏಳು ದಿನಗಳಿಂದ ಧರಣಿ ನಡೆಸುತ್ತಿರುವ ಜಂಬಗಿ ಹಾಗೂ ಸುತ್ತಮುತ್ತಲಿನ ರೈತ ಬಾಂಧವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದರು.ಜಂಬಗಿ ಕೆರೆ ತುಂಬುವ ಆದೇಶ ಹೊರಬರುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ. ಈ ಆದೇಶ ಪಡೆದುಕೊಂಡೇ ವಾಪಾಸ್ಸಾಗುವುದಾಗಿ ಪಟ್ಟು ಹಿಡಿದು ಧರಣಿಗೆ ಅಣಿಯಾಗಿ ಕುಳಿತುಕೊಂಡರು. ಕೆರೆಗೆ ನೀರು ತುಂಬುವ ಯೋಜನೆಯಡಿ ಜಂಬಗಿ, ಆಹೇರಿ, ಹುಣಶ್ಯಾಳ(ಮಾದಾಳ) ಕೆರೆಗಳನ್ನು ಪ್ರತಿವರ್ಷ ತುಂಬಬೇಕು ಮತ್ತು ಈ ಎಲ್ಲಾ ಕೆರೆಗಳನ್ನು ಇಲಾಖೆಯ ಸುಪರ್ದಿಗೆ ಪಡೆದು ಅಭಿವೃದ್ಧಿ ಪಡೆಸಿ, ನಷ್ಟಗೊಂಡ ರೈತರಿಗೆ ಪರಿಹಾರ ನೀಡಬೇಕು ಎಂದು ರೈತರು ಒಕ್ಕೊರೆಲಿನಿಂದ ಒತ್ತಾಯಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಕರ್ನಾಟಕ ರೈತ ಸಂಘ-ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಮಾತನಾಡಿ, ಜಂಬಗಿ ಕೆರೆಯೂ ಕೆರೆ ನೀರು ತುಂಬುವ ಯೋಜನೆಯಡಿ ಇದ್ದು, ಇಲ್ಲಿಯವರೆಗೂ ಒಮ್ಮೆಯೂ ತುಂಬಿಸಿರುವುದಿಲ್ಲ. ಹಾಗೆ ಉಳಿದಂತೆ ಆಹೇರಿ, ಹುಣಶ್ಯಾಳ(ಮಾದಾಳ) ಕೆರೆಗಳನ್ನು ಕೆರೆ ನೀರು ತುಂಬುವ ಯೋಜನೆಯಡಿ ಸೇರಿಸಬೇಕು. ಅವುಗಳನ್ನು ಪ್ರತಿವರ್ಷ ಬೇಸಿಗೆಯಲ್ಲಿ ನೀರು ತುಂಬಿಸಬೇಕು ಎಂದು ಒತ್ತಾಯಿಸಿದರು.ಸಂಘಟನೆಯ ಧುರೀಣ ಮಹಾದೇವಪ್ಪ ತೇಲಿ ಮಾತನಾಡಿ, ಕೆರೆ ನೀರು ತುಂಬಿಸುವ ಯೋಜನೆಯಡಿ ಹರಿಸುತ್ತಿರುವ ಮಾರ್ಗದಲ್ಲಿ ಸಾಕಷ್ಟು ಪ್ರಭಾವಿ ಹಾಗೂ ರಾಜಕಾರಣಿಗಳ ಹೆಸರಿನಲ್ಲಿ ಕುತಂತ್ರದಿಂದ ಅಧಿಕಾರಿಗಳಿಗೆ ಹಣದ ಆಮೀಷವೊಡ್ಡಿ ಹೆದರಿಸಿ ದೊಡ್ಡ ಪೈಪ್‌ಗಳನ್ನು ಹಾಕಿಕೊಂಡು ನೀರು ಹರೆಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಕೇಳಿದರೆ ಅಧಿಕಾರಿಗಳು ನಮ್ಮಲ್ಲಿ ಸಿಬ್ಬಂದಿ ಇಲ್ಲ, ರೈತರೇ ಬಂದು ಅವುಗಳನ್ನು ತೆಗೆಯಿರಿ ಎಂದು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳತ್ತಿದ್ದಾರೆ, ಆದ್ದರಿಂದ ಇಂತಹ ಅಧಿಕಾರಿಗಳಿಗೂ ಸೂಕ್ತ ಆದೇಶ ನೀಡಿ ಕೆರೆ ನೀರು ತುಂಬುವ ಯೋಜನೆಯನ್ನು ಯಶಸ್ವಿಯನ್ನಾಗಿ ಮಾಡಬೇಕು. ಇದರಿಂದ ಸಾಕಷ್ಟು ಜನ ಜಾನುವಾರುಗಳಿಗೆ ಅನುಕೂಲವಾಗಲಿದೆ ಎಂದರು.
ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಾತನಾಡಿ, ಜಿಲ್ಲೆಯಲ್ಲಿ ೩೦೦ ಕೆರೆಗಳು ಇದ್ದು, ಎಲ್ಲವನ್ನು ತುಂಬಿಸಲು ಸಾಧ್ಯವಿಲ್ಲ. ಅದು ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ಸದ್ಯ ನಿಮ್ಮ ಗ್ರಾಮಗಳಲ್ಲಿ ಜಾನುವಾರುಗಳಿಗೆ ಕುಡಿಯಲು ನೀರಿನ ಸಮಸ್ಯೆಗಳಿದ್ದರೆ ಟ್ಯಾಂಕರಿನ ವ್ಯವಸ್ಥೆ ಮಾಡುತ್ತೇವೆ ಎಂದು ಸಮಾಧಾನಪಡಿಸಲು ಮುಂದಾದರೂ ರೈತರು ಸಮಾಧಾನಗೊಳ್ಳಲಿಲ್ಲ. ಅದೇ ತೆರನಾಗಿ ಹೆಚ್ಚುವರಿ ಇನ್ನು ೭ ದಿನಗಳವರೆಗೆ ನೀರು ಬಿಡಲಾಗುವುದು ಹಾಗೂ ನೀರನ್ನು ಮಾರ್ಗಮಧ್ಯದಲ್ಲಿ ಅಕ್ರಮವಾಗಿ ತೆಗೆದುಕೊಳ್ಳವುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಲಿಖಿತ ಹೇಳಿಕೆ ನೀಡಿದ ನಂತರವೇ ರೈತರು ಹೋರಾಟವನ್ನು ಕೈ ಬಿಟ್ಟರು.ಸಂಗಮೇಶ ಗುದಳೆ ಮಾತನಾಡಿದರು. ಪ್ರಕಾಶ ತೇಲಿ, ಮಲ್ಲಿಕಾರ್ಜುನ ಗೋಡೆಕರ, ರಾಮನಗೌಡ ಪಾಟೀಲ, ಮಹಾಂತೇಶ ಮಮದಾಪುರ, ಕಲ್ಲಪ್ಪ ಪಾರಶೆಟ್ಟಿ, ಜಂಬಗಿ ಗ್ರಾ.ಪಂ ಅಧ್ಯಕ್ಷರಾದ ಶ್ರೀಶೈಲ ಮಸೂತಿ, ಗುರಪ್ಪ ಸೋಂಪುರ, ಚಂದ್ರಶೇಖರ ಕೋಣಸಿರಸಗಿ, ಸಂತೋಷ ಮುಡಗಿ, ಪ್ರಭು ಕಾರಜೋಳ, ಸಂಗಪ್ಪ ಕೋಣಸಿರಸಗಿ, ಶ್ರೀಶೈಲ ಸಾಲಿ, ಮಲ್ಲಿಕಾರ್ಜುನ ಕೋಣಸಿರಸಗಿ, ರಾಮಸಿಂಗ ರಜಪೂತ, ಹಣಮಂತ ವಾಲಿಕಾರ, ಚನ್ನಪ್ಪ ವಾಡೇದ, ಚನ್ನಪ್ಪ ತೇಲಿ, ಹಣಮಂತ ರಜಪೂತ, ಬಸವಂತ ತೇಲಿ, ಪ್ರಕಾಶ ತಳವಾರ, ಜಯಸಿಂಗ ರಜಪೂತ, ಸಾಯಬಣ್ಣ ಸಮಗೊಂಡ, ಬಸವರಾಜ ಮಸಳಿ ಇದ್ದರು.